More

    ಜನಸಂಖ್ಯೆ ಹೆಚ್ಚಳ ದೇಶಾಭಿವೃದ್ಧಿಗೆ ಮಾರಕ

    ಹರಿಹರ: ಜನಸಂಖ್ಯಾ ಸ್ಫೋಟ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಶಾಸಕ ಬಿ.ಪಿ. ಹರೀಶ್ ಕಳವಳ ವ್ಯಕ್ತಪಡಿಸಿದರು.

    ನಗರದ ಗುರುಭವನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಯಾವುದೇ ದೇಶ ಅಭಿವೃದ್ಧ್ದಿ ಹೊಂದಬೇಕಾದರೆ ಜನಸಂಖ್ಯಾ ನಿಯಂತ್ರಣವೂ ಒಂದು ಪ್ರಮುಖ ಸಂಗತಿಯಾಗಿದೆ. ಭಾರತ ದೇಶದಲ್ಲಿ ಕುಟುಂಬಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಆದರೆ, ಭೂಮಿ ಇದ್ದಷ್ಟೇ ಇದೆ ಎನ್ನುವ ಮೂಲಕ ಜನಸಂಖ್ಯಾ ನಿಯಂತ್ರಣದ ಅಗತ್ಯತೆ ತಿಳಿಸಿದರು.

    ಇಂದು ಎಲ್ಲ ವರ್ಗದ ಜನರು ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿರುವುದು ಒಳ್ಳೆ ಸಂಗತಿ. ಈ ಹಿನ್ನ್ನೆಲೆಯಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.

    1987ರ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನಾಗಿ ಘೋಷಣೆ ಮಾಡಿತ್ತು. ಆದರೆ, ಅದಕ್ಕೂ ಮೊದಲೇ ನಮ್ಮ ದೇಶದ ರಾಜರ ಆಳ್ವಿಕೆ ಸಂದರ್ಭ 1930ರಲ್ಲಿಯೇ ಜನಸಂಖ್ಯಾ ನಿಯಂತ್ರಣದ ಬಗ್ಗೆ ನಿಯಮ ಜಾರಿಗೆ ತಂದಿದ್ದರು ಎಂದರು.

    ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಕಾರಾಧ್ಯ ಮಾತನಾಡಿ, ಆಜಾದಿ ಕಾ ಆಮೃತ್ ಮಹೋತ್ಸವದ ಅಂಗವಾಗಿ ಕುಟುಂಬ ಯೋಜನೆ ಆಳವಡಿಸಿಕೊಂಡು ಸಂತೋಷ ಮತ್ತು ಸಮೃದ್ಧಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೇವೆಂದು ಪ್ರತಿಜ್ಞೆ ಮಾಡೋಣ ಎನ್ನುವ ಘೋಷ ವಾಕ್ಯದೊಂದಿಗೆ ಈ ವರ್ಷ ಕಾರ್ಯಕ್ರಮ ಆಯೋಜನೆ ಮಾಡಲಾಗುತಿದೆ ಎಂದರು.

    ಜನಸಂಖ್ಯಾ ನಿಯಂತ್ರಣಕ್ಕಾಗಿ ಸರ್ಕಾರ ಹಲವಾರು ವಿಧಾನ ಜಾರಿಗೆ ತಂದಿದೆ. ಆದರೆ, ಕೇವಲ ಸರ್ಕಾರ ಕಾರ್ಯಕ್ರಮಗಳಿಂದ ನಿಯಂತ್ರಣ ಅಸಾಧ್ಯ. ಇದರಲ್ಲಿ ಜನಸಮುದಾಯದ ಸಹಭಾಗಿತ್ವ ಮುಖ್ಯವಾಗಿದೆ ಎಂದರು.

    ಬಿಇಒ ಹನುಮಂತಪ್ಪ ಮಾತನಾಡಿ, ಜನಸಂಖ್ಯಾ ಹೆಚ್ಚಳದಿಂದ ಸಸ್ಯ ಸಂಪತ್ತಿನ ಕೊರತೆ, ಅರಣ್ಯ ನಾಶ, ಆಹಾರ, ನೀರು, ಬಟ್ಟೆ, ವಸತಿ ಹಾಗೂ ಬಡತನ ಹೆಚ್ಚಳವಾಗುತ್ತದೆ. ಈ ಹಿನ್ನೆಲೆಯಲ್ಲಿ ಜನಸಮಾನ್ಯರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದರು.

    ಶಿಕ್ಷಕ ಎಂ.ಎನ್. ಶ್ರೀಧರಮಯ್ಯ ಉಪನ್ಯಾಸ ನೀಡಿದರು. ನಗರಸಭಾ ಅಧ್ಯಕ್ಷೆ ನಿಂಬಕ್ಕ ಚಂದಾಪುರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಮೋಹನ್, ಜಿಲ್ಲಾ ಆರೋಗ್ಯ ಇಲಾಖೆ ನಿರೀಕ್ಷಕ ಎಂ.ವಿ. ಹೊರಕೇರಿ, ಎಂ. ಉಮ್ಮಣ್ಣ, ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts