More

    ಅಂಕಣ, ಹರೆಯ ಹುಷಾರು; ಮಕ್ಕಳನ್ನು ದೋಸೆಹಿಟ್ಟಿನಂತೆ ರುಬ್ಬಬೇಡಿ! 

    ಪ್ರತಿ ವಿದ್ಯಾರ್ಥಿಯ ಒಳಗೆ ಒಂದು ಬಹುಮಾನವನ್ನು ಪ್ಯಾಕ್ ಮಾಡಿ ಇಡಲಾಗಿದೆ. ಒಬ್ಬೊಬ್ಬರು ಒಂದೊಂದು ವಯಸ್ಸಿನಲ್ಲಿ ಅದನ್ನು ಬಿಚ್ಚುತ್ತಾರೆ. ಕೆಲವರು ತಮ್ಮೊಳಗೆ ಆ ಪ್ಯಾಕೆಟ್ ಇರುವ ವಿಷಯವನ್ನು ಕೊನೆವರೆಗೂ ತಿಳಿದುಕೊಳ್ಳುವುದಿಲ್ಲ. ಪಾಲಕರ ಬಲಹೀನತೆಗಳು ಮತ್ತು ಅಪನಂಬಿಕೆಗಳ ಬಗ್ಗೆ ಕಳೆದ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಕುರಿತಾದ ಮತ್ತಷ್ಟು ಸಂಗತಿಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ. 

    ಅಂಕಣ, ಹರೆಯ ಹುಷಾರು; ಮಕ್ಕಳನ್ನು ದೋಸೆಹಿಟ್ಟಿನಂತೆ ರುಬ್ಬಬೇಡಿ! ಅತಿಯಾಸೆ: ಸರ್ಕಸ್​ನಲ್ಲಿ ಟ್ರೇನರ್ ಕರಡಿಗೆ ಹೊಡೆಯುತ್ತಾನೆ. ಹಿಂಸೆ ಕೊಟ್ಟು ತನಗೆ ಬೇಕಾದ ಹಾಗೆ ತಯಾರು ಮಾಡುತ್ತಾನೆ. ಏಕೆ ಹಿಂಸೆ ಕೊಡುತ್ತೀಯ? ಎಂದರೆ ‘ಇದಕ್ಕೆ ಬೇಟೆಯಾಡಿ ತಿನ್ನುವ ಶ್ರಮವಿಲ್ಲದ ಹಾಗೆ ಆಹಾರ ಕೊಡುತ್ತಿದ್ದೇನೆ. ಬೇರೆ ಪ್ರಾಣಿಗಳಿಂದ ರಕ್ಷಣೆ ಕೊಡುತ್ತಿದ್ದೇನೆ’ ಎಂದು ಸಮರ್ಥಿಸಿಕೊಳ್ಳುತ್ತಾನೆ.

    ಆದರೆ ಅದರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದೀಯಲ್ಲ? ಎಂದರೆ ‘ಯಾವ ಜನ್ಮದಲ್ಲಿ ಪುಣ್ಯಮಾಡಿತ್ತೋ ನನ್ನ ಕೈಗೆ ಸಿಕ್ಕಿದೆ. ಇದರ ಆಟಗಳನ್ನು ಮೆಚ್ಚಿ ಜನ ಹೇಗೆ ಚಪ್ಪಾಳೆ ಹೊಡೆಯುತ್ತಿದ್ದಾರೆ ನೋಡಿ. ಕಾಡಿನಲ್ಲಿ ಈ ಅದೃಷ್ಟ ಸಿಕ್ಕೀತೇನು?’ ಎನ್ನುತ್ತಾನೆ. ಕರಡಿಗೆ ಕಾಡಿನಲ್ಲಿ ಸ್ವತಂತ್ರವಾಗಿ ತಿರುಗುವ ಆಸೆ ಇರುತ್ತದೆ ಹೊರತು ಚಪ್ಪಾಳೆಯ ಅಗತ್ಯವೆಲ್ಲಿರುತ್ತದೆ? ಎಂದು ಅವನು ಯೋಚಿಸುವುದಿಲ್ಲ.

    ಮಕ್ಕಳ ಭವಿಷ್ಯತ್ತು ಚೆನ್ನಾಗಿರಬೇಕೆಂದು ವರ್ತಮಾನದಲ್ಲಿ ಅವರಿಗೆ ಇಷ್ಟು ಕಷ್ಟ ಕೊಡುವ ಅಗತ್ಯವಿಲ್ಲ ಎನ್ನುವುದನ್ನು ಬಹಳ ಮಂದಿ ಒಪ್ಪುವುದಿಲ್ಲ. ಎಲ್ಲರೂ ನಿಮ್ಮಷ್ಟೇ ಬುದ್ಧಿವಂತರಾಗಿರುವುದಿಲ್ಲ ಎನ್ನುತ್ತಾರೆ. ಮಕ್ಕಳ ಬುದ್ಧಿಶಕ್ತಿಯನ್ನು ಬೆಳೆಸಬೇಕಾದವರು ತಂದೆ ತಾಯಿಯೇ ಹೊರತು ಶಿಕ್ಷಕರಲ್ಲ ಎನ್ನುವ ವಿಚಾರವನ್ನು ಅವರು ಒಪ್ಪುವುದಿಲ್ಲ.

    ಕೆಲ ಪೇರೆಂಟ್ಸ್ ಇದಕ್ಕೆ ವಿರುದ್ಧವಾಗಿ ವಾದಿಸುತ್ತಾರೆ. ‘ಇಂದಿನ ಜನರೇಷನ್ ಬಾಲ್ಯವನ್ನು ಕಳೆದುಕೊಂಡಿದೆ ಅನ್ನುತ್ತಾರೆ. ಹಾಗೇನೂ ಇಲ್ಲ. ಹಿಂದಿನ ಮಕ್ಕಳು ಕಬಡ್ಡಿ, ಖೋಖೋ ಆಡುತ್ತಿದ್ದರು. ಕಾಲುವೆಗಳಲ್ಲಿ ಈಜುತ್ತಿದ್ದರು. ಈಗಿನ ಮಕ್ಕಳು ಕಂಪ್ಯೂಟರ್ ಗೇಮ್್ಸ ಆಡುತ್ತಾರೆ. ಬಹಳ ಜಾಣತನದ ಕ್ವಿಜ್​ಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಾಲ ಬದಲಾದ ಹಾಗೆ ನಾವೂ ಬದಲಾಗಬೇಕು’ ಎಂದು ವಾದ ಮಾಡುತ್ತಾರೆ.

    ನಿಜವೇ. ಹಿಂದಿನ ಅಭ್ಯಾಸಗಳಿಗೂ ಇಂದಿನ ಅಭಿರುಚಿಗಳಿಗೂ ವ್ಯತ್ಯಾಸ ಇದೆ. ಅಂದಿನ ವಿದ್ಯಾರ್ಥಿಗಳು ಎಷ್ಟು ಆಡಿದರೂ, ರಾತ್ರಿಯಾದ ಕೂಡಲೇ ಓದುತ್ತಿದ್ದರು. ಓದುವ ಸಮಯದಲ್ಲಿ ಖೋಖೋ, ಕಬಡ್ಡಿ ಕುರಿತು ಯೋಚಿಸುವುದಕ್ಕೆ ಏನೂ ಇರುತ್ತಿರಲಿಲ್ಲ. ಆಗೆಲ್ಲ ಸಂಜೆ ಹೊತ್ತು ಟಿ.ವಿ, ರಾತ್ರಿಯಿಡೀ ಕ್ರಿಕೆಟ್ ಮ್ಯಾಚ್​ಗಳು ಇರುತ್ತಿರಲಿಲ್ಲ. ಹ್ಯಾರಿ ಪಾಟರ್, ಮಿಸ್ಟರ್ ಬೀನ್, ಚೋಟಾ ಭೀಮ್ ನೆನಪಾಗುತ್ತಿರಲಿಲ್ಲ. ಅದೇ ವ್ಯತ್ಯಾಸ.

    ಬಾಲ್ಯವನ್ನು ಕಳೆದುಕೊಳ್ಳುವ ಕುರಿತು ಈ ಕೆಳಗಿರುವ ಉದಾಹರಣೆಯನ್ನು ನೀವು ಅನುಮೋದಿಸದಿರಬಹುದು. ಅಥವಾ ಆ ರೀತಿ ಪೋಷಣೆಯೇ ಕರೆಕ್ಟ್ ಅಂದುಕೊಳ್ಳಬಹುದು. ನನ್ನ ಪರಿಚಯದ ಒಬ್ಬ ಚಿತ್ರ ನಿರ್ವಪಕ ಸೂರ್ಯ ಹುಟ್ಟುವ ಮೊದಲೇ ಮಗನನ್ನು ಎಬ್ಬಿಸಿ ಟೆನ್ನಿಸ್ ಕೋಚಿಂಗ್​ಗೆ ಕರೆದೊಯ್ಯುತ್ತಿದ್ದ.

    ನಂತರ ಆ ಹುಡುಗ ಮನೆಗೆ ಬಂದು ಅರ್ಧಗಂಟೆಯಲ್ಲಿ ಅವಸರದಿಂದ ರೆಡಿಯಾಗಿ ಊರಿನಿಂದ ಇಪ್ಪತ್ತು ಕಿಮೀ ದೂರದಲ್ಲಿರುವ ಪ್ರತಿಷ್ಠಿತ ಶಾಲೆಗೆ ಹೊರಡುತ್ತಿದ್ದ. ಸಂಜೆ ಮತ್ತೆ ಒಂದು ಗಂಟೆ ಜರ್ನಿ ಮಾಡಿ ಮನೆಗೆ ಬಂದು, ಸಂಗೀತದ ಕ್ಲಾಸ್​ಗೆ ಹೋಗುತ್ತಿದ್ದ. ಎಂಟು ಗಂಟೆಗೆ ಮನೆಗೆ ಬಂದಾಗ ಟ್ಯೂಷನ್ ಟೀಚರ್ ಬಂದು ಕಾಯುತ್ತಿರುತ್ತಿದ್ದಳು!

    ಹುಡುಗನ ಕಾಲಿಗೆ ಮಸಾಜ್ ಮಾಡುವುದಕ್ಕೆ ಸ್ವಿಜರ್​ಲ್ಯಾಂಡಿನಿಂದ ಆಯಿಲ್, ಎತ್ತರ ಬೆಳೆಯುವುದಕ್ಕೆ ದಿನಕ್ಕೆ ಮೂರು ಬಾರಿ ಕಾಂಪ್ಲಾನ್, ವೊಕಾಬುಲರಿ ಬೆಳೆಯುವ ಸಲುವಾಗಿ ಸಮ್ಮರ್ ಕ್ಯಾಂಪ್ಸ್! ಸ್ವಂತ ಚಿಕ್ಕಮ್ಮ, ಮಾವ, ತಾತ ಕೇವಲ ಹಲೋ ಹೇಳುವ ಪರಿಚಯಸ್ಥರ ಹಾಗೆ ಇದ್ದರು. ನಿಧಾನವಾಗಿ ಆ ಹುಡುಗ ಇಂಟ್ರಾವರ್ಟ್ ಆದ.

    ವಿದ್ಯಾಭ್ಯಾಸ ಮುಂದುವರಿಸಲು ವಿದೇಶಕ್ಕೆ ಹೋದವನು ಆರು ತಿಂಗಳಲ್ಲೇ ಮರಳಿದ. ಇಷ್ಟೆಲ್ಲ ನಡೆದ ಮೇಲೂ ಪೇರೆಂಟ್ಸ್ ತಾವು ಆದರ್ಶ ತಂದೆ ತಾಯಿ ಎಂದೇ ನಂಬಿದ್ದರು. ವಿಚಿತ್ರವೇನೆಂದರೆ, ಆ ಬೀದಿಯಲ್ಲಿ ಎಲ್ಲರೂ ಇಂದಿಗೂ ಹಾಗೇ ತಿಳಿದಿದ್ದಾರೆ.

    ಪಿರಮಿಡ್ ಡೆವಲಪ್​ವೆುಂಟ್​ಗೂ, ಮೇಲಿನ ಉದಾಹರಣೆಗೂ ವ್ಯತ್ಯಾಸವಿದೆ. ನಾಲ್ಕು ರೀತಿಯ ಅಭಿರುಚಿಗಳಿವೆ. ವಿರಾಮ ಸಮಯದಲ್ಲಿ ತನ್ನ ಅಭಿರುಚಿಗಳೊಂದಿಗೆ ರಿಲ್ಯಾಕ್ಸ್ ಆಗುತ್ತಾನೆ ವಿದ್ಯಾರ್ಥಿ. ಓದುವುದು ಬೋರ್ ಹೊಡೆದಾಗ ಚೆಸ್ ಆಡುವುದು ಇದಕ್ಕೊಂದು ಉದಾಹರಣೆ. ವಯಸ್ಸಿನ ಜೊತೆ ಎರಡು ಉಳಿಸಿಕೊಂಡು ಉಳಿದವನ್ನು ತೊರೆಯುತ್ತಾನೆ. ಮೇಲಿನ ಉದಾಹರಣೆಯಲ್ಲಿ ಹಾಗಲ್ಲ. ತಂದೆ ಮಗನ ಹೆಗಲ ಮೇಲೆ ನಾಲ್ಕು ಭಾರವಾದ ಜವಾಬ್ದಾರಿ ಹೊರೆಸಿದ್ದಾನೆ. ಸಮಸ್ಯೆ ಅದೇನೇ. ಪ್ರೇರಣೆ ಎಂದರೆ ಮೊಟ್ಟೆಯನ್ನು ಹೊರಗಿನಿಂದ ಒಡೆಯುವುದಲ್ಲ… ಒಳಗಿನಿಂದ ಒದೆದು ಮರಿ ಹೊರಗೆ ಬಂದಾಗ ಬಲ ಕೊಡುವುದು.

    ನಮ್ಮ ಮಕ್ಕಳು-ಅಕ್ಕಪಕ್ಕದವರ ಅಸೂಯೆ: ಡ್ರಾಯಿಂಗ್ ರೂಂನಲ್ಲಿ ಲಕ್ಷ ಬೆಲೆಯ ಮೊನಾಲಿಸಾ ಚಿತ್ರ. ಪೋರ್ಟಿಕೋದಲ್ಲಿ ಬಿಎಂಡಬ್ಲೂ ಕಾರು, ಮದುವೆಗೆ ದುಬಾರಿ ವಜ್ರದ ಹಾರಗಳ ಹಾಗೆ ಕೆಲವರಿಗೆ ಮಕ್ಕಳು ಕೂಡ ಸ್ಟೇಟಸ್ ಸಿಂಬಲ್! ಬಂದವರಿಗೆ ಮಕ್ಕಳನ್ನು ಪರಿಚಯಿಸುವಾಗ ಅವರು ಫಸ್ಟ್​ರ್ಯಾಂಕ್, ಇಂಟಲಿಜೆಂಟ್, ಅಥ್ಲೀಟ್ ಮುಂತಾದ ಸುಂದರ ಪದಗಳಲ್ಲಿ ವರ್ಣಿಸುವಂತಾಗಬೇಕೆಂದು ಬಯಸುತ್ತಾರೆ. ಆ ರೀತಿ ಇರದಿದ್ದರೆ, ‘ದಂಡಪಿಂಡ… ನಮ್ಮ ವಂಶದಲ್ಲಿ ತಪ್ಪಾಗಿ ಹುಟ್ಟಿದ್ದಾನೆ…ಇವನಣ್ಣ ಬ್ರಿಲಿಯಂಟ್’ ಎಂದು ಅಪಹಾಸ್ಯ ಮಾಡುತ್ತಾರೆ.

    ಅತ್ಯಂತ ಕಠಿಣವಾದ ಶಿಕ್ಷಣ ನೀಡಿ ರೇಸ್​ನಲ್ಲಿ ಪಾಲ್ಗೊಳ್ಳಲಿಕ್ಕೆ ತಯಾರು ಮಾಡಲಾದ ಕುದುರೆಗೆ ‘ಥರೋಬ್ರೆಡ್’ ಅನ್ನುತ್ತಾರೆ. ಇಂದಿನ ಈ ರ್ಯಾಟ್​ರೇಸ್​ನಿಂದಾಗಿ ಹದಿನೇಳು ಬರುವಷ್ಟರಲ್ಲಿ ಮಕ್ಕಳು ಬರ್ನ್​ಔಟ್ ಆಗಿರುತ್ತಾರೆ. ಮೊದಮೊದಲು ಚುರುಕಾಗಿ, ಜಾಣರಾಗಿ ಇದ್ದ ಮಕ್ಕಳು ನಂತರ ವಿಫಲವಾಗುವುದಕ್ಕೆ ಕಾರಣ ಅವರ ಶಕ್ತಿಗೆ ಮೀರಿ ಕೆಲಸ ಮಾಡುವುದು.

    ಈ ರೇಸ್​ನಲ್ಲಿ ಪಾಲ್ಗೊಳ್ಳುವುದಕ್ಕೆ ಶಿಕ್ಷಣವು ಗರ್ಭದಲ್ಲಿರುವಾಗಲೇ ಪ್ರಾರಂಭವಾಗುತ್ತದೆ. ‘ನನ್ನ ಹೊಟ್ಟೆಯಲ್ಲಿರುವ ಆರು ತಿಂಗಳ ಭ್ರೂಣಕ್ಕೆ ಸಾಹಿತ್ಯ, ಚರಿತ್ರೆ ಮತ್ತು ಸೈನ್ಸ್ ಕಲಿಸಿದ್ದೇವೆ. ಪ್ರಹ್ಲಾದ, ಅಭಿಮನ್ಯು ಮೊದಲಾದವರ ಕಥೆಗಳಿಂದ ಪ್ರೇರಣೆ ಪಡೆದ ನಾನು ನನ್ನ ಹೊಟ್ಟೆಯ ಹತ್ತಿರ ಟೇಪ್ ರೆಕಾರ್ಡರ್ ಇಟ್ಟು ಈ ರೀತಿ ಮಾಡಿದ್ದರಿಂದ ಕಿಂಡರ್​ಗಾರ್ಟನ್ ಸ್ಟೇಜ್​ನಿಂದಲೂ ನನ್ನ ಮಗ ಉಳಿದವರಿಗಿಂತ ಮುಂದಿದ್ದಾನೆ ಎಂದು ನಂಬಿದ್ದೇನೆ’ ಎಂದು ಒಬ್ಬ ತಾಯಿ ಹೇಳಿದಳು.

    ಆಗ ಅವಳ ಗಂಡ ಹೆಮ್ಮೆಯಿಂದ ‘ನಮ್ಮ ಐದು ವರ್ಷದ ಬಾಬುಗೂ ಅದೇ ರೀತಿ ಶಿಕ್ಷಣ ಕೊಟ್ಟೆವು. ಬೇಬಿ ಐನ್​ಸ್ಟೀನ್ ಡಿ.ವಿ.ಡಿ ಕಾನ್ಸೆಪ್ಟ್, ಟ್ವಿನ್ಸ್ ಬ್ರೇನ್ ಡೆವಲಪ್​ವೆುಂಟ್(?); ಕಾನ್ಸಂಟ್ರೇಷನ್ ಟೆಕ್ನಿಕ್, ಬೇಬಿ ಯೋಗ ತರಬೇತಿ ಕೊಡುವ ಶಾಲೆಗೆ ಸೇರಿಸಿದ್ದೇವೆ. ರಿಸಲ್ಟ್ಸ್ ಅದ್ಭುತವಾಗಿವೆ’ ಎಂದ. (ಸ್ಕೂಲ್ ಮ್ಯಾನೇಜ್​ವೆುಂಟ್​ನವರೇನಾದರೂ ಇದನ್ನೆಲ್ಲ ಕಲಿಸುತ್ತೇವೆಂದು ಬೋರ್ಡ್ ಹಾಕಿದರೆ ಆ ಸ್ಕೂಲ್ ಮುಂದೆ ಪೋಷಕರು ಕ್ಯೂ ನಿಲ್ಲುತ್ತಾರೆ!)

    ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವುದು ತಪ್ಪಲ್ಲ. ಆದರೆ ಅವರನ್ನು ದೋಸೆ ಹಿಟ್ಟಿನಂತೆ ರುಬ್ಬಬಾರದು. ಐಐಟಿ ಪರೀಕ್ಷೆಗೆ ಎಸ್​ಎಸ್​ಎಲ್​ಸಿ ಮಕ್ಕಳನ್ನು ತಯಾರು ಮಾಡುವ ಒಂದು ಕೋಚಿಂಗ್ ಸೆಂಟರ್​ನಲ್ಲಿ ಪ್ರವೇಶ ಪಡೆಯುವುದಕ್ಕೆ, ಆರನೇ ತರಗತಿಯ ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸುತ್ತದೆ ಒಂದು ಶಾಲೆ!

    ಮನೆಯಲ್ಲಿ ಗೌರವ: ಎಲ್ಲ ತಂದೆ ತಾಯಿ ಮಕ್ಕಳನ್ನು ಪ್ರೀತಿಸುತ್ತಾರೆ. ಆದರೆ ಹಿರಿಯರಿಂದ ಗೌರವ ಪಡೆಯುವ ಅವಕಾಶ ಕೆಲವೇ ಮಕ್ಕಳಿಗೆ ಸಿಗುವ ಒಂದು ಅದ್ಭುತವಾದ ಅನುಭವ. ರಾತ್ರಿ ಸೆಕೆಂಡ್ ಷೋ ನೋಡಿದ್ದರಿಂದ ಮಧ್ಯಾಹ್ನ ನಿದ್ದೆ ಮಾಡುತ್ತಿರುವ ಹುಡುಗನಿಗೆ ಬೈಯುತ್ತಾರೆ. ದೇಶದ ಪರವಾಗಿ ಅಂಡರ್- 19 ಕ್ರಿಕೆಟ್ ಆಡಿಬಂದು ಮಲಗಿದ್ದ ಹುಡುಗನ ತಮ್ಮ ಗಲಾಟೆ ಮಾಡಿದರೆ ‘ಅಣ್ಣ ನಿದ್ದೆ ಮಾಡ್ತಿದ್ದಾನೆ, ಗಲಾಟೆ ಮಾಡಬೇಡ’ ಎನ್ನುತ್ತಾರೆ. ಮನೆಯಲ್ಲಿ ಗೌರವ ಪಡೆಯುವುದು ಎಂದರೆ ಇದೇ.

    ಪ್ರತಿ ವಿದ್ಯಾರ್ಥಿಯ ಒಳಗೆ ಒಂದು ಬಹುಮಾನವನ್ನು ಪ್ಯಾಕ್ ಮಾಡಿ ಇಡಲಾಗಿದೆ. ಒಬ್ಬೊಬ್ಬರು ಒಂದೊಂದು ವಯಸ್ಸಿನಲ್ಲಿ ಅದನ್ನು ಬಿಚ್ಚುತ್ತಾರೆ. ಕೆಲವರು ತಮ್ಮೊಳಗೆ ಆ ಪ್ಯಾಕೆಟ್ ಇರುವ ವಿಷಯವನ್ನು ಕೊನೆವರೆಗೂ ತಿಳಿದುಕೊಳ್ಳುವುದಿಲ್ಲ.

    ‘ನಿಮಗೆ ಮನೆಯಲ್ಲಿ ಗೌರವ ಇದೆಯೇ?’ ಎಂದು ವ್ಯಕ್ತಿತ್ವ ವಿಕಾಸ ಕ್ಲಾಸ್​ಗಳಲ್ಲಿ ಕೇಳುತ್ತಿರುತ್ತೇನೆ. ಮಕ್ಕಳಿಗೆ ಅರ್ಥವಾಗುವುದಿಲ್ಲ. ವಿಶ್ವನಾಥನ್ ಆನಂದ್, ವಿರಾಟ್ ಕೊಹ್ಲಿ, ಇಂತಹವರಿಗೆಲ್ಲ ಸಣ್ಣ ವಯಸ್ಸಿನಲ್ಲೇ ಪ್ರತಿಭೆ ತೋರಿಸಿದ್ದಕ್ಕೆ, ಆ ಗೌರವ ಸಿಕ್ಕಿರುತ್ತದೆ. ನಮ್ಮ ಮಕ್ಕಳು ಅಷ್ಟು ದೊಡ್ಡವರಲ್ಲದಿರಬಹುದು. ಆದರೆ ಚೆನ್ನಾಗಿ ಓದುತ್ತಾ, ಬಿಡುವಿನ ವೇಳೆಯಲ್ಲಿ ತಮಗಿಷ್ಟವಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರೆ ಆಟೋಮ್ಯಾಟಿಕ್ ಆಗಿ ಆ ಗೌರವ ಲಭಿಸುತ್ತದೆ.

    ಒಂದು ಮನೆಯಲ್ಲಿ ಎಲ್ಲರೂ ಟಿವಿ ನೋಡುತ್ತಿದ್ದಾರೆ ಅಂದುಕೊಳ್ಳೋಣ. ಒಬ್ಬ ಹುಡುಗ ಮಾತ್ರ ತಮ್ಮನಿಗೆ ಪಾಠ ಹೇಳಿಕೊಡುತ್ತಾ ಇರುತ್ತಾನೆ. ಆ ಹುಡುಗನ ಬಗ್ಗೆ ಮನೆಯಲ್ಲಿ ಎಲ್ಲರಿಗೂ ಪ್ರೀತಿಪೂರಿತ ಗೌರವ ಇರುತ್ತದೆ. ಕಾರಣ? ಉಳಿದ ಎಲ್ಲರೂ ಬೇರೆಯವರ ಕ್ರಿಯೇಟಿವಿಟಿ ನೋಡುತ್ತಿದ್ದಾರೆ. ಆ ಹುಡುಗ ತನ್ನ ಜ್ಞಾನವನ್ನು ಇಂಪೂ›ವ್ ಮಾಡಿಕೊಳ್ಳುತ್ತಾ ಇನ್ನೊಬ್ಬನಿಗೆ ವಿದ್ಯಾದಾನ ಮಾಡುತ್ತಿದ್ದಾನೆ. ಸರಿಯಲ್ಲವೇ?

    ಆತ್ಮಗೌರವ: ಗುರಿ ಮುಟ್ಟಿದ ಮಕ್ಕಳಿಗೆ ನಂಬಿಕೆ ಬರುತ್ತದೆ ಎಂದು ಹಿರಿಯರು ಭಾವಿಸುತ್ತಾರೆ. ಇದು ತಪ್ಪು. ತಮ್ಮ ಮೇಲೆ ನಂಬಿಕೆ ಇರುವ ಮಕ್ಕಳಷ್ಟೇ ಗುರಿ ತಲುಪುತ್ತಾರೆ. ವ್ಯತ್ಯಾಸ ಅರ್ಥವಾಗಿದೆಯಲ್ಲವೇ? ಗೆಲುವಿನಿಂದ ಆತ್ಮಗೌರವ ಬರುವುದಿಲ್ಲ. ಆತ್ಮಗೌರವದಿಂದ ಗೆಲುವು ಸಿಗುತ್ತದೆ.

    ಸೆಲ್ಪ ಡಿಟರ್ವಿುನೇಷನ್ ಥಿಯರಿಗೆ ಪ್ರಚಾರ ಕೊಟ್ಟ ಮಾನಸಿಕ ತಜ್ಞ ಡೆಷಿ ಪ್ರತಿಪಾದಿಸಿದ ಈ ಸಿದ್ಧಾಂತ ನಿಜವೇ ಅನಿಸುತ್ತದೆ. ಅದಕ್ಕೇ ದೊಡ್ಡವರು ಮಕ್ಕಳಿಗೆ ಯಶಸ್ಸು ಸಾಧಿಸಬೇಕೆಂದರೆ ಸಂತೋಷದಿಂದ ಕೆಲಸ ಮಾಡು ಎಂದು ಹೇಳಬೇಕು. ಸಾಧಿಸಿದ ಯಶಸ್ಸಿನಿಂದ ನಿನಗೆ ಕೊನೆಯಲ್ಲಿ ಸಂತೋಷ ಸಿಗುತ್ತದೆ ಎಂದು ಬೋಧಿಸಬಾರದು.

    ಈ ಥಿಯರಿಯನ್ನು ಕೆಲವರು ಒಪ್ಪದೇ ಇರಬಹುದು. ಉದಾಹರಣೆಗೆ ಒಬ್ಬ ವಿದ್ಯಾರ್ಥಿ ನಗುತ್ತಾ ಪಾಠ ಕೇಳುತ್ತಿದ್ದಾನೆ ಅಂದುಕೊಳ್ಳೋಣ. ಯಾಕೋ ನಗುತ್ತೀ? ಸೀರಿಯಸ್ಸಾಗಿ ಪಾಠ ಕೇಳೋಕೆ ಆಗೋದಿಲ್ಲವಾ? ಎಂದು ಶಿಕ್ಷಕ ಬೈಯುತ್ತಾನೆ. ವಿದ್ಯಾರ್ಥಿ ಆನಂದಿಸುತ್ತ ಪಾಠ ಕೇಳುತ್ತಿದ್ದಾನೆ. ಸೀರಿಯಸ್ಸಾಗಿ ಪಾಠ ಕೇಳದಿದ್ದರೆ ಪಾಠ ತಲೆಗೆ ಹತ್ತುವುದಿಲ್ಲ. ಯಶಸ್ಸು ಗಳಿಸಬೇಕೆಂದರೆ ಸೀರಿಯಸ್ಸಾಗಿ ಇರಬೇಕು -ಇದು ಆ ಶಿಕ್ಷಕನ ನಂಬಿಕೆ. ಬಹಳ ಮಂದಿ ಪೋಷಕರ ಹಾಗೇ ತನ್ನ ನಂಬಿಕೆಯನ್ನು ವಿದ್ಯಾರ್ಥಿಗಳ ಮೇಲೆ ಹೇರುವ ಪ್ರಯತ್ನ ಇದು.

    ಬಹಳ ಹಿಂದೆ ತಿರುಪತಿ ಬೆಟ್ಟದ ಕೆಳಗಿರುವ ಒಂದು ದೊಡ್ಡ ಶಾಲೆಗೆ ಹೋಗಿದ್ದೆ. ಅವರು ಯಾರೂ ನಗಲಿಲ್ಲ. ಮುಖದಲ್ಲಿ ಯಾವ ಭಾವನೆಯೂ ಇರಲಿಲ್ಲ. ಕೇವಲ ರೋಬೋಗಳ ಹಾಗೆ ಕುಳಿತಿದ್ದರು, ಅವರ ಮುಖದಲ್ಲಿ ಕಿರುನಗೆ ಬರಿಸುವುದಕ್ಕೆ ನನಗೆ ಒಂದು ಗಂಟೆ ಬೇಕಾಯ್ತು. ವಿದ್ಯಾರ್ಥಿಗಳು ಹಾಗೆ ಮುಗುಳ್ನಕ್ಕಿದ್ದು ಮ್ಯಾನೇಜ್​ವೆುಂಟ್​ನವರಿಗೆ ಪಥ್ಯವಾಗಲಿಲ್ಲ. ಅದು ಅಶಿಸ್ತು ಎಂದು ಭಾವಿಸಿ ಮಕ್ಕಳಿಗೆ ನಗಬೇಡಿ, ನಗಬೇಡಿ ಎಂದು ಸಂಜ್ಞೆ ಮಾಡಿದರು. ಆ ಶಾಲೆ ಬಹಳ ಪ್ರಸಿದ್ಧವಾದುದಂತೆ. ಅದ್ಯಾವ ರೀತಿಯ ಪ್ರಸಿದ್ಧಿಯೋ ನನಗೆ ಇಂದಿಗೂ ಅರ್ಥವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts