More

    ಕನ್ನಡ ಪ್ರೀತಿಗೆ ವಿಶೇಷ ಮೋಹ ಬೇಕಿಲ್ಲ: ವಿಟಿಯು ಕುಲಸಚಿವ ಪ್ರೊ.ಬಿ.ಇ.ರಂಗಸ್ವಾಮಿ ಅಭಿಮತ

    ಹನುಮಸಾಗರ: ಕನ್ನಡ ಪ್ರೀತಿಗೆ ವಿಶೇಷ ಮೋಹ ಬೇಕಿಲ್ಲ. ಅದನ್ನು ಅನುಷ್ಠಾನಗೊಳಿಸಲು ಪ್ರಯತ್ನಗಳಾಗಬೇಕು. ಎಲ್ಲರೂ ಅದನ್ನು ಪ್ರೋತ್ಸಾಹಿಸಬೇಕು ಎಂದು ಬೆಳಗಾವಿ ವಿಟಿಯು ಕುಲಸಚಿವ ಪ್ರೊ.ಬಿ.ಇ.ರಂಗಸ್ವಾಮಿ ಹೇಳಿದರು.

    ಪಟ್ಟಣದಲ್ಲಿ ಹಮ್ಮಿಕೊಂಡಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಭಾನುವಾರ ಮಾತನಾಡಿದರು. ನಾವು ಕಳೆದೆರಡು ವರ್ಷದಿಂದ ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ನೀಡಲು ಯತ್ನಿಸುತ್ತಿದ್ದೇವೆ. ಎರಡು ಕಾಲೇಜು ಮುಂದೆ ಬಂದವು. ಕೆಲ ಮಕ್ಕಳು ಪ್ರವೇಶ ಪಡೆದರು. ಆದರೆ, ಅವರ ಪಾಲಕರ ಒತ್ತಾಯದ ಮೇರೆಗೆ ಹಿಂಜರಿದರು. ಆದರೂ ಛಲ ಬಿಡದೆ ಮೊದಲ, ಎರಡನೇ ಸೆಮಿಸ್ಟರ್ ಪಠ್ಯಗಳನ್ನು ಕನ್ನಡದಲ್ಲಿ ರಚಿಸಲಾಗಿದೆ. ಕೇವಲ ಅಭಿಮಾನ ಇದ್ದರೆ ಸಾಲದು. ಅನುಷ್ಠಾನಕ್ಕೆ ಯತ್ನಿಸಬೇಕು. ಸರ್ಕಾರ ಪ್ರೋತ್ಸಾಹಿಸಬೇಕು. ನಮ್ಮ ಆಡಳಿತ ಭಾಷೆ ಕನ್ನಡ. ಆದರೆ, ಬಳಸಲು ಬೇಡ ಎನ್ನುವಂತಿದೆ. ತಾಂತ್ರಿಕ ಶಿಕ್ಷಣಕ್ಕೆ ಬೇಕಾದ ನಿಘಂಟನ್ನು ರಚಿಸಲು ಯತ್ನಿಸುತ್ತಿದ್ದೇವೆ. ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸವಾಗಬೇಕು. ಎಷ್ಟೋ ಆಂಗ್ಲ ಪದಗಳು ಕನ್ನಡದವೇ ಆಗಿವೆ. ಅನ್ಯ ರಾಷ್ಟ್ರಗಳಲ್ಲಿ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಲಾಗುತ್ತಿದೆ. ನಮ್ಮ ಸರ್ಕಾರ ಆದೇಶ ಮಾಡಬಹುದಷ್ಟೆ. ಆದರೆ, ನಾವದನ್ನು ಬಳಸಬೇಕಿದೆ ಎಂದರು.

    ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಟಿ.ವಿ.ಮಾಗಳದ ಮಾತನಾಡಿ, ಕನ್ನಡ ಸಂಕೀರ್ಣ ಸನ್ನಿವೇಶ ಎದುರಿಸುವ ಕಾಲಘಟ್ಟದಲ್ಲಿ ಸಮ್ಮೇಳನ ನಡೆಯುತ್ತಿದೆ. ಕನ್ನಡಕ್ಕಾಗಿ ದುಡಿದವರನ್ನು ನೆನೆಯುವುದು, ಸ್ಥಾನಿಕ ಇತಿಹಾಸ ಮೆಲುಕು ಹಾಕಲು ಇಂಥ ಕಾರ್ಯಕ್ರಮಗಳು ನಡೆಯಬೇಕು. ಜ್ಞಾನ ಸಮಾಜದಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಜ್ಞಾನವೇ ಬಂಡವಾಳ. ಇದರಿಂದಲೇ ಕನ್ನಡಕ್ಕೆ ಎದುರಾಗುವ ಸವಾಲುಗಳನ್ನು ನಿವಾರಿಸಬೇಕಿದೆ. ಕನ್ನಡದಲ್ಲಿನ ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಅಂಶಗಳನ್ನು ಎಲ್ಲರಿಗೂ ತಿಳಿಸಬೇಕು. ಅದಕ್ಕೆ ತಂತ್ರಜ್ಞಾನ ಬೇಕು. ಯಾವಾಗ ಕನ್ನಡದ ಸ್ವಾಭಿಮಾನಕ್ಕೆ ಪೆಟ್ಟು ಬೀಳುತ್ತದೋ ಆಗೆಲ್ಲ ಒಬ್ಬೊಬ್ಬ ಕನ್ನಡಿಗ ಹುಟ್ಟಿ ಮತ್ತೆ ಭಾಷೆ ಮೆಟ್ಟಿ ನಿಲ್ಲುವಂತೆ ಮಾಡುತ್ತಾನೆ. ನಮ್ಮ ನಾಡು ಹುಟ್ಟಿದ್ದೇ ಸ್ವಾಭಿಮಾನಕ್ಕಾಗಿ. ಸಮಾನತೆ, ಸಮನ್ವಯ, ಸಮತಾವಾದತ್ವ ನಮ್ಮ ಮಣ್ಣಿನ ಗುಣಗಳು. ಪುರಾಣಿಕ ವಂಶವು ತಲೆಮಾರುಗಳಿಂದ ಕನ್ನಡದ ಕೆಲಸ ಮಾಡುತ್ತಿದೆ ಎಂದರು.

    ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಮಾತನಾಡಿದರು. ಸಾಹಿತಿ ಶೇಖರಗೌಡ ಸರನಾಡಗೌಡ್ರು ಅವರ ಕಥಾ ಸಂಕಲನ, ಶೋಭಾ ಪ್ರಕಾಶ ಮಲ್ಕಿ ಒಡೆಯರ್ ಅವರ ದೃಶ್ಯಕಾವ್ಯ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ರಾಜಶೇಖರ್ ಅಂಗಡಿ, ಕಸಾಪ ಸ್ಥಳೀಯ ಘಟಕದ ಅಧ್ಯಕ್ಷ ಮಂಜುನಾಥ ಗುಳೆದಗುಡ್ಡ, ಮುಖಂಡರಾದ ಕೆ.ಮಹೇಶ, ಮಲ್ಲಣ್ಣ ಪಲ್ಲೇದ, ಬಸವರಾಜ ಹಳ್ಳೂರು, ಮಾಲತಿ ನಾಯಕ, ಶರಣಪ್ಪ ಹುಲ್ಲೂರು, ಶೈಲಜಾ ಕರಪಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts