More

    ಅಮರೇಶ್ವರ ದೇವಸ್ಥಾನಕ್ಕೆ 1 ಕೋಟಿ ರೂ. ಆದಾಯ ನಿರೀಕ್ಷೆ

    ಗುರುಗುಂಟ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ದೇಗುಲಗಳಲ್ಲಿ ಒಂದಾದ ಗುರುಗುಂಟ ಶ್ರೀ ಅಮರೇಶ್ವರ ದೇವಸ್ಥಾನ, 2022-23ನೇ ಸಾಲಿನಲ್ಲಿ ಒಟ್ಟು 1,14,82,000 ರೂ. ಆದಾಯ ಹೊಂದಿದೆಯೆಂಬುದು ದೇವಸ್ಥಾನ ಸಮಿತಿ ಮುಂಗಡ ಪತ್ರಕ್ಕೆ ಮಂಜೂರಾತಿ ನೀಡಲು ಜಿಲ್ಲಾಧಿಕಾರಿಗೆ ಕಳುಹಿಸಿದ ಪತ್ರದಿಂದ ತಿಳಿದು ಬಂದಿದೆ.

    2021-22ನೇ ಸಾಲಿಗಿಂತ 10.50 ಲಕ್ಷ ರೂ. ಹೆಚ್ಚಿನ ಆದಾಯದೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ. ಕೋವಿಡ್-19 ಸಂದರ್ಭದಲ್ಲಿ ಖರ್ಚು ಹೆಚ್ಚಾಗಿ ದೇಗುಲದ ಆದಾಯಕ್ಕೆ 5.67 ಲಕ್ಷ ರೂ. ಹೊಡೆತ ಬಿದ್ದಿತ್ತು. ಪ್ರಸ್ತುತ 1.65 ಕೋಟಿ ರೂ. ದೇವಸ್ಥಾನ ಹೆಸರಿನ ಉಳಿತಾಯ ಖಾತೆಯಲ್ಲಿ ಜಮೆಯಿದ್ದರೆ, 1.50 ಕೋಟಿ ರೂ. ನಿಶ್ಚಿತ ಠೇವಣಿಯಲ್ಲಿದೆ. ಅಂಗಡಿ, ವಸತಿ, ಕಲ್ಯಾಣ ಮಂಟಪಗಳಿಂದ ಒಟ್ಟು 6,10,210 ರೂ. ಬಾಡಿಗೆ ಬಂದಿದೆ. ಒಂದು ವರ್ಷದ ತೆಂಗಿನಕಾಯಿ, ಕಲ್ಲುಸಕ್ಕರೆ, ಪ್ರಸಾದ ಮಾರಾಟ ಹರಾಜು, ಜಾತ್ರೆಯಲ್ಲಿ ಅಂಗಡಿ, ಪ್ಲಾಟುಗಳಿಂದ ಬಾಡಿಗೆ, ವಾಹನ ಪಾರ್ಕಿಂಗ್, ಹರಾಜಾದ ನಾಟಕ ಜಾಗೆಗಳಿಂದ 34.55 ಲಕ್ಷ ರೂ. ಜಮೆ ಆಗಿವೆ. ಅಭಿಷೇಕ, ತೆಂಗಿನಕಾಯಿ, ಮಂಗಳಾರತಿ ಟಿಕೆಟ್, ಜವಳ ಕಾಣಿಕೆ, ಹುಂಡಿ, ಶಾಶ್ವತ ರುದ್ರಾಭಿಷೇಕ ಇತರ ಬಾತ್ತುಗಳಿಂದ 59,03,911 ರೂ. ಸಂದಾಯ ಆಗಿದೆ.

    ಬ್ಯಾಂಕಿನ ಉಳಿತಾಯ ಖಾತೆಯಲ್ಲಿಟ್ಟ ಹಣಕ್ಕೆ 5 ಲಕ್ಷ ರೂ. ಬಡ್ಡಿ ಬಂದಿದೆ. ಅಧಿಕಾರಿ ನೌಕರರ ವೇತನ, ತುಟ್ಟಿ ಭತ್ಯೆ, ತಾತ್ಕಾಲಿಕ ನೌಕರರ ನಿಗದಿತ ವೇತನಕ್ಕೆ 20.67 ಲಕ್ಷ ರೂ, ಆರು ಮನೆತನದ ಅರ್ಚಕ-ಭಜಂತ್ರಿಯವರಿಗೆ ಗೌರವಧನ ಮತ್ತು ಪೂಜಾ ಖರ್ಚುಗಳಿಗೆ 98,150 ರೂ., ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವವರಿಗೆ 71,829 ರೂ., ಮುದ್ರಣ, ಲೇಖನ ಸಾಮಗ್ರಿಗಳಿಗೆ 37,400 ರೂ., ಜನರೇಟರ್ ಆಯಿಲ್, ಇಂಧನ ಹಾಗೂ ಸ್ಟೇಷನರಿಗೆ 1.15 ಲಕ್ಷ ರೂ, ಸಿಬ್ಬಂದಿ ಸಮವಸ್ತ್ರಕ್ಕೆ 95 ಸಾವಿರ ರೂ, ಕಾರ್ತಿಕ ಮಾಸದಲ್ಲಿ ದಾಸೋಹ, ಉತ್ಸವ, ದಸರಾ, ಶಿವರಾತ್ರಿಗೆ 1.15 ಲಕ್ಷ ರೂ., ರಥೋತ್ಸವಕ್ಕೆ ಉತ್ಸವ ಅಲಂಕಾರ, ವಿಡಿಯೋ, ಫೋಟೋ, ಆಳುಗಳಿಗೆ ಕೂಲಿ, ಬಾಬುದಾರರಿಗೆ ಸಂಭಾವನೆ, ಊಟದ ವ್ಯವಸ್ಥೆ, ಶಾಮಿಯಾನ ಇತ್ಯಾದಿಗಳಿಗೆ 5.17 ಲಕ್ಷ ರೂ, ದೇವಸ್ಥಾನದಲ್ಲಿರುವ ಕಟ್ಟಡಗಳಿಗೆ ಸಣ್ಣ ಪುಟ್ಟ ರಿಪೇರಿ ಕಾಮಗಾರಿ, ಸುಣ್ಣ-ಬಣ್ಣ, ಕುಡಿವ ನೀರು, ತಡಿಕೆ ಶೆಡ್ ಇತರ ಕೆಲಸಗಳಿಗಾಗಿ 4.80 ಲಕ್ಷ ರೂ, ವಿದ್ಯುತ್ ಸಾಮಗ್ರಿ ಖರೀದಿ, ದಾರಿದೀಪ ವ್ಯವಸ್ಥೆಗಾಗಿ 2.28 ಲಕ್ಷ ರೂ, ಕಳೆದ ಜಾತ್ರೆಯ ಲಾಕ್‌ಡೌನ್ ವೇಳೆಯ ವಿವಿಧ ಹರಾಜಿನ ಹಣ ವಾಪಸ್ ಕೊಟ್ಟಿದ್ದು 4.55 ಲಕ್ಷ ರೂ, ಕೋವಿಡ್ 19 ಲಾಕ್‌ಡೌನ್ ವೇಳೆಯಲ್ಲಿ ಸಿ ವರ್ಗದ ನೌಕರರಿಗೆ ಆಹಾರ ಕಿಟ್ ವಿತರಣೆಗೆ 36 ಸಾವಿರ ರೂ, ಕಂಪ್ಯೂಟರ್ ಖರೀದಿ ಮತ್ತು ರಿಪೇರಿಗೆ 3.10 ಲಕ್ಷ ರೂ, ಅಗ್ನಿಶಾಮಕದಳಕ್ಕೆ 20 ಸಾವಿರ ರೂ, ಹೀಗೆ ವಿವಿಧ ಮೂಲಗಳಿಂದ ಬಂದ ಒಟ್ಟು 1,04,24,119 ರೂ. ಆದಾಯದಲ್ಲಿ 49,72,786 ರೂ. ಖರ್ಚಾಗಿ 54,51,333 ರೂ. ನಿವ್ವಳ ಉಳಿತಾಯ ಹೊಂದಿದೆ.

    2022-23ನೇ ಸಾಲಿಗೆ 1,14,82,907 ರೂ. ಆದಾಯ ತರಬಹುದಿದ್ದು, ಇದರಲ್ಲಿ 1,06,70,000 ರೂ. ಖರ್ಚಾಗಬಹುದು ಎಂಬ ಮಾಹಿತಿ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರಿಗೆ ಮಂಜೂರಾತಿಗಾಗಿ ಕಳುಹಿಸಿದ ಮುಂಗಡ ಪತ್ರದಿಂದ ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts