ಅಯೋಧ್ಯೆ ರಾಮಮಂದಿರ ಅರ್ಚಕರ ನಕಲಿ ಅಶ್ಲೀಲ ವಿಡಿಯೋ ವೈರಲ್; ಕಾಂಗ್ರೆಸ್​​​​ ನಾಯಕನ ಬಂಧನ

589
Ayodhya Priest

ಅಹಮದಾಬಾದ್: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ದತೆಗಳು ಭರದಿಂದ ಸಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾವಿರಾರು ಜನರಿಗೆ ಆಹ್ವಾನ ನೀಡಲಾಗಿದೆ. ಗಾಜಿಯಾಬಾದ್ ವಿದ್ಯಾರ್ಥಿ ಮೋಹಿತ್ ಪಾಂಡೆ ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕರಾಗಿ ಆಯ್ಕೆಯಾಗಿದ್ದಾರೆ.

ಇದೀಗ ಹೊಸ ವಿಚಾರದಲ್ಲಿ ಅಯೋಧ್ಯೆಯ ಮುಖ್ಯ ಅರ್ಚಕರಾಗಿ ಆಯ್ಕೆಯಾಗಿರುವ ಮೋಹಿತ್​ ಪಾಂಡೆ ಹೋಲುವ ವ್ಯಕ್ತಿಯೋರ್ವ ಮಹಿಳೆಯೊಂದಿಗಿರುವ ಖಾಸಗಿ ಕ್ಷಣಗಳ ನಕಲಿ ಪೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಕಾಂಗ್ರೆಸ್​ ಮುಖಂಡನನ್ನು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಪೋಟೋ ಹಾಗೂ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಅರೆಬೆತ್ತಲಾಗಿ ಮಹಿಳೆಯೊಂದಿಗೆ ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವುದನ್ನು ನೋಡಬಹುದಾಗಿದೆ. ಇದನ್ನು ಗುಜರಾತ್​ ಮೂಲದ ಕಾಂಗ್ರೆಸ್​ ಮುಖಂಡ ಹಿತೇಂದ್ರ ಪಿತಾಡಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸುದ್ದಿ ವೈರಲ್​ ಆದ ಬೆನ್ನಲ್ಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹಾಗೂ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಫ್ಯಾಕ್ಟ್​ಚೆಕ್​ ಮಾಡಿರುವ ಪೊಲೀಸರು ಇದು ನಕಲಿ ಸುದ್ದಿ ಎಂದು ಸಾಬೀತುಪಡಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್​ ಮುಖಂಡ ಹಿತೇಂದ್ರ ಪಿತಾಡಿಯಾರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಆತನ ವಿರುದ್ಧ ಭಾರತ ದಂಡ ಸಂಹಿತೆ (IPC Section) 469, 509, 295A ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಪ್ರಶಾಂತ್​ ಉಮಾರೋ, ಕಾಂಗ್ರೆಸ್​ ನಾಯಕರು ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಜನರಲ್ಲಿ ಗೊಂದಲವನ್ನುಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಆದಲ್ಲಿ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.