More

    ಜಿಎಸ್​ಟಿ ಜಿಗಿತ: 8 ತಿಂಗಳ ಬಳಿಕ ಲಕ್ಷ ಕೋಟಿ ರೂ. ದಾಟಿದ ಸಂಗ್ರಹ

    ನವದೆಹಲಿ: ಕರೊನಾ ಲಾಕ್​ಡೌನ್​ನಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡ ಪರಿಣಾಮ ಒಂದು ಲಕ್ಷ ಕೋಟಿ ರೂ. ಗಡಿಯಿಂದ ಕೆಳಗೆ ಕುಸಿದಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹ 8 ತಿಂಗಳ ಬಳಿಕ ಜಿಗಿತ ಕಂಡಿದೆ. ಅಕ್ಟೋಬರ್​ನ ಜಿಎಸ್​ಟಿ ಸಂಗ್ರಹ ಮೊತ್ತ ಎಂಟು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಲಕ್ಷ ಕೋಟಿ ರೂ. ದಾಟಿ 1.05 ಲಕ್ಷ ಕೋಟಿ ರೂ.ಗೆ ತಲುಪಿದೆ.

    ಹಂತಹಂತವಾಗಿ ಲಾಕ್​ಡೌನ್ ತೆರವುಗೊಳಿಸಿದ ನಂತರ ಕ್ರಮೇಣವಾಗಿ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಕಂಡು ಬರುತ್ತಿರುವುದು ಆರ್ಥಿಕತೆಗೂ ಉತ್ತೇಜನ ನೀಡಿದೆ.

    ಅಕ್ಟೋಬರ್ ಸಂಗ್ರಹ ಮೊತ್ತ 1,05,155 ಕೋಟಿ ರೂ.ನಲ್ಲಿ ಕೇಂದ್ರೀಯ ಜಿಎಸ್​ಟಿ 19,193 ಕೋಟಿ ರೂ.ಗಳಾದರೆ, ರಾಜ್ಯಗಳದ್ದು 5,411 ಕೋಟಿ ರೂ. ಆಗಿದೆ. ಐಜಿಎಸ್​ಟಿ 52,540 ಕೋಟಿ ರೂ., ಸೆಸ್ ಮೊತ್ತ 8,011 ಕೋಟಿ ರೂ. ಎಂದು ಹಣಕಾಸು ಸಚಿವಾಲಯ ವಿವರಿಸಿದೆ.

    ಶೇ.10 ಹೆಚ್ಚಳ: ಕಳೆದ ವರ್ಷದ ಅಕ್ಟೋಬರ್​ಗೆ ಹೋಲಿಸಿದಲ್ಲಿ ಈ ಅಕ್ಟೋಬರ್​ನಲ್ಲಿ ಶೇ.10 ಹೆಚ್ಚು ಆದಾಯ ಬಂದಿದೆ. 2019 ಅಕ್ಟೋಬರ್​ನಲ್ಲಿ 95,379 ಕೋಟಿ ರೂ. ಸಂಗ್ರಹವಾಗಿತ್ತು. ಅ.31ರವರೆಗೆ ಸಲ್ಲಿಕೆಯಾದ ಜಿಎಸ್​ಟಿಆರ್-3ಬಿ ವಿವರ 80 ಲಕ್ಷ.

    ರಾಜ್ಯದಲ್ಲಿ ಶೇ.5 ಹೆಚ್ಚಳ: ಪ್ರಸಕ್ತ ವರ್ಷದ ಅಕ್ಟೋಬರ್​ನಲ್ಲಿ ಕರ್ನಾಟಕದ ಜಿಎಸ್​ಟಿ ಸಂಗ್ರಹ ಮೊತ್ತ 6,998 ಕೋಟಿ ರೂಪಾಯಿ. 2019ರ ಇದೇ ತಿಂಗಳಲ್ಲಿ 6,675 ಕೊಟಿ ರೂ. ಸಂಗ್ರಹವಾಗಿತ್ತು. ಅಂದರೆ ಈ ಬಾರಿ ಶೇ.5 ಏರಿಕೆಯಾಗಿದೆ.

    ಸರಕು ಸಾಗಣೆಗೆ ಅಗತ್ಯವಾದ ಇ-ವೇ ಬಿಲ್​ಗಳ ಸಂಖ್ಯೆ ಕೋವಿಡ್-19 ಮುಂಚಿನ ಮಟ್ಟಕ್ಕೆ ತಲುಪಿದೆ. ಆನ್​ಲೈನ್ ಪಾವತಿ ಪ್ರಮಾಣ ಭಾರಿ ಏರಿಕೆಯಾಗಿದೆ. ಎಇಎಸ್​ಟಿ ಸಂಗ್ರಹ ಸತತ 2ನೇ ತಿಂಗಳಲ್ಲೂ ಹೆಚ್ಚಿದೆ.
    | ಅಜಯ್ ಭೂಷಣ್ ಪಾಂಡೆ ಹಣಕಾಸು ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts