More

    ಗ್ರಾಪಂಗೆ ಹೊರೆಯಾದ ರಸ್ತೆ ರಿಪೇರಿ!

    ಬೆಳಗಾವಿ: ಗ್ರಾಮೀಣ ಭಾಗದಲ್ಲಿಯೂ ದೀರ್ಘ ಬಾಳಿಕೆಗಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿದರೂ ರಸ್ತೆಗಳ ಗುಣಮಟ್ಟದ ಬಗ್ಗೆ ಆರೋಪಗಳೂ ಕೇಳಿಬರುತ್ತವೆ. ಆದರೆ, ನಿರ್ಮಿಸಿರುವ ರಸ್ತೆಗಳನ್ನು ವಿವಿಧ ಕಾರಣಕ್ಕೆ ಅಗೆದು, ಬಳಿಕ ಮತ್ತೆ ತೇಪೆ ಹಚ್ಚುವುದು ಅಥವಾ ದುರಸ್ತಿ ಮಾಡಿಸಲು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಪರದಾಡುತ್ತಿದೆ. ಸೂಕ್ತ ಅನುದಾನ ಇಲ್ಲದ್ದರಿಂದ ಅಗೆದ ರಸ್ತೆಗಳ ದುರಸ್ತಿ ಕಾರ್ಯವೀಗ ಗ್ರಾಪಂಗಳಿಗೆ ಹೊರೆಯಾಗಿದೆ.

    ಹಳ್ಳಿಗಳಲ್ಲಿನ ವಾರ್ಡ್, ಕಾಲನಿಗಳಲ್ಲಿ ಚರಂಡಿಗಳ ನಿರ್ಮಾಣ, ಸ್ವಚ್ಛತೆ ಇತರ ಅನುಕೂಲಕ್ಕಾಗಿ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಸುವರ್ಣ ಗ್ರಾಮ, ನರೇಗಾ ಯೋಜನೆ, ಶಾಸಕರು, ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೋಟ್ಯಂತರ ರೂ. ಖರ್ಚು ಮಾಡಿ ಕಾಂಕ್ರೀಟ್ ರಸ್ತೆ ನಿರ್ಮಿಸಿದೆ. ಆದರೆ, ಈ ರಸ್ತೆಗಳನ್ನು ಇತರ ಕಾಮಗಾರಿಗಳಿಗಾಗಿ ಆಗಾಗ ಅಗೆಯುತ್ತಲೇ ಇರುತ್ತಾರೆ.

    ಸಾವಿರಾರು ರೂ. ಖರ್ಚು: ಬೆಳಗಾವಿ ಜಿಲ್ಲೆಯ 506 ಗ್ರಾಪಂ ವ್ಯಾಪ್ತಿಯ 750ಕ್ಕೂ ಅಧಿಕ ಹಳ್ಳಿಗಳಲ್ಲಿ ಸಾವಿರಾರು ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ, ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ, ಪೈಪ್‌ಲೈನ್ ದುರಸ್ತಿಗಾಗಿ ಪ್ರತ್ಯೇಕ ಸ್ಥಳ ಮೀಸಲಿಟ್ಟಿಲ್ಲ. ಅಲ್ಲದೆ, ಬಹುತೇಕ ಕಡೆ ಕುಡಿಯುವ ನೀರಿನ ಪೈಪ್‌ಲೈನ್‌ಗಳ ಮೇಲೆಯೇ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಸಂಪರ್ಕ ಕೊಡಲು, ಪೈಪ್‌ಲೈನ್ ದುರಸ್ತಿ ಮಾಡಲು ಸುಸ್ಥಿತಿಯಲ್ಲಿರುವ ರಸ್ತೆಯನ್ನು ಅಗೆಯಬೇಕಾಗುತ್ತಿದೆ. ಬಳಿಕ ಆ ರಸ್ತೆಯನ್ನು ಸರಿಪಡಿಸಲು ಮತ್ತೆ ಸಾವಿರಾರು ರೂ. ಖರ್ಚು ಮಾಡಬೇಕಾದ ಸ್ಥಿತಿ ಗ್ರಾಪಂಗಳಿಗೆ ಎದುರಾಗಿದೆ.

    ಪಾಲನೆಯಾಗದ ನಿಯಮ: ಸರ್ಕಾರಿ ನಿಯಮದ ಪ್ರಕಾರ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸುವ ಸಂದರ್ಭದಲ್ಲೇ ಕುಡಿಯುವ ನೀರಿನ ಪೈಪ್‌ಲೈನ್, ಒಳಚರಂಡಿ ಮಾರ್ಗಗಳನ್ನು ರಸ್ತೆಯ ಬದಿಯಲ್ಲಿ ನಿರ್ಮಿಸಬೇಕು. ದುರಸ್ತಿಗೆ ಮತ್ತು ಕುಡಿಯುವ ನೀರಿನ ಸಂಪರ್ಕಕ್ಕೆ ಅಗತ್ಯ ವ್ಯವಸ್ಥೆ ಮಾಡಬೇಕು. ಆದರೆ, ಬಹುತೇಕ ಗ್ರಾಪಂ ವ್ಯಾಪ್ತಿಯಲ್ಲಿ ಈ ನಿಯಮ ಪಾಲನೆ ಆಗಿಲ್ಲ. ಕಾಂಕ್ರೀಟ್ ರಸ್ತೆಯ ಮಧ್ಯಭಾಗದಲ್ಲಿಯೇ ಕುಡಿಯುವ ನೀರಿನ ಮತ್ತು ಒಳಚರಂಡಿ ಪೈಪ್‌ಲೈನ್‌ಗಳನ್ನು ಬಿಟ್ಟು ಮೇಲೆಯೇ ಕಾಂಕ್ರೀಟ್ ಹಾಕಿದ್ದಾರೆ. ಇದರಿಂದಾಗಿ ಸಾಮಾನ್ಯ ಜನರಿಗೆ ಮತ್ತು ಗ್ರಾಪಂಗಳಿಗೆ ದೊಡ್ಡ ಸಮಸ್ಯೆ ಆಗಿದೆ. ಈ ಕುರಿತು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಪಂ, ತಾಪಂ ಇಂಜಿನಿಯರ್‌ಗಳಿಗೆ ಮೇಲಿಂದ ಮೇಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ.

    ಜಲಜೀವನ ಯೋಜನೆಗೆ ಮತ್ತೆ ರಸ್ತೆ ಅಗೆತ

    ಕೇಂದ್ರ ಸರ್ಕಾರವು ಪ್ರತಿ ವ್ಯಕ್ತಿಗೆ ಪ್ರತಿದಿನ 55 ಲೀಟರ್ ನೀರು ನೀಡುವ ‘ಜಲ ಜೀವನ ಮಿಷನ್’ ಯೋಜನೆಯಡಿ ಮನೆಮನೆಗೆ ನಳ ಸಂಪರ್ಕ ಕಲ್ಪಿಸುತ್ತಿದೆ. ಆದರೆ, ನಳದ ಸಂಪರ್ಕ ನೀಡಲು ರಸ್ತೆ ಅಗೆಯುವ ಅನಿವಾರ್ಯತೆ ಇದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಕಾಂಕ್ರೀಟ್ ರಸ್ತೆಗಳಿಗೆ ತೇಪೆ ಹಾಕುವುದಕ್ಕಾಗಿಯೇ ಪ್ರತ್ಯೇಕ ಕ್ರಿಯಾಯೋಜನೆ ರೂಪಿಸುವ ಪರಿಸ್ಥಿತಿ ಬರಲಿದೆ. ಕಾಂಕ್ರೀಟ್ ರಸ್ತೆಗಳಿಂದ ಓಣಿಗಳಲ್ಲಿ ಕಲ್ಲು ಹಾಸಿನ ರಸ್ತೆಯೇ ಉತ್ತಮ ಎಂದು ಗ್ರಾಪಂ ಮಾಜಿ ಸದಸ್ಯ ಭೀಮಶಿ ಅರಕೇರಿ ತಿಳಿಸಿದ್ದಾರೆ.

    ಗ್ರಾಮೀಣ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿದ್ದರಿಂದ ಸಮಸ್ಯೆ ಉಂಟಾಗಿರುವುದು ನಿಜ. ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್, ಒಳಚರಂಡಿಗೆ ಪ್ರತ್ಯೇಕ ಮಾರ್ಗ ನಿರ್ಮಿಸಬೇಕು. ಈ ಬಗ್ಗೆ ಗ್ರಾಪಂಗಳಿಗೆ ಸೂಚನೆ ನೀಡಲಾಗುವುದು.
    | ಡಾ. ಕೆ.ವಿ. ರಾಜೇಂದ್ರ, ಜಿಪಂ ಸಿಇಒ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts