More

    ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ: ಜೆಡಿಎಸ್​ಗೆ ಕೊಂಚ ಹಿನ್ನಡೆ, ಕನಕಪುರದಲ್ಲಿ ಕಮಲ ಕಮಾಲ್

    ರಾಮನಗರ: ತೀವ್ರ ಜಿದ್ದಾ ಜಿದ್ದಿನಿಂದ ಕೂಡಿದ್ದ ಗ್ರಾಪಂ ಚುನಾವಣೆಗೆ ತೆರೆ ಬಿದ್ದಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಮೆಲುಗೈ ಸಾಧಿಸಿದ್ದರೆ, ಜೆೆಡಿಎಸ್ ಕೊಂಚ ಹಿನ್ನಡೆ ಅನುಭವಿಸುವ ಮೂಲಕ ತಳಪಾಯ ಗಟ್ಟಿಮಾಡಿಕೊಳ್ಳಬೇಕಾದ ಸೂಚನೆ ಪಡೆದುಕೊಂಡಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಬಿಜೆಪಿ ಕಮಲವನ್ನು ಅರಳಿಸುವಲ್ಲಿ ಯಶಸ್ವಿಯಾಗಿದೆ.

    ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಅದರಲ್ಲೂ ಕನಕಪುರ ತಾಲೂಕಿನಲ್ಲಿ 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ಷೇತ್ರ ದಲ್ಲಿ ಕಮಾಲ್ ಮಾಡಿದೆ. ಇದರೊಂದಿಗೆ ಕಮಲ ಅರಳಲು ಸಾಧ್ಯವೇ ಇಲ್ಲ ಎನ್ನುತ್ತಿದ್ದ ಕನಕಪುರದಲ್ಲಿ ಕೇಸರಿ ಬಾವುಟ ಹಾರಿದ್ದು, ಇದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿಸಿದೆ. ಇನ್ನು ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಸುಮಾರು 140ರ ಆಜುಬಾಜಿನ ಸ್ಥಾನಗಳನ್ನು ಬೆಂಬಲಿತರು ಗೆಲ್ಲುವ ಮೂಲಕ ಜೆಡಿಎಸ್ ನಂತರದ ಸ್ಥಾನ ಪಡೆದುಕೊಂಡಿದ್ದು, ಈ ಬಾರಿಯೂ ಯೋಗೇಶ್ವರ್ ಅವರನ್ನು ಕ್ಷೇತ್ರದ ಜನತೆ ತಿರಸ್ಕಾರ ಮಾಡಿದ್ದಾರೆ.

    ಎಚ್​ಡಿಕೆ ಅವರ ಕರ್ಮ ಭೂಮಿ ರಾಮನಗರದ ಕೈಲಾಂಚ ಮತ್ತು ಕಸಬಾ ಹೋಬಳಿಗಳಲ್ಲಿ ಬಿಜೆಪಿ ಭರ್ಜರಿ ಆರಂಭ ಪಡೆದುಕೊಂಡು 22 ಸ್ಥಾನಗಳನ್ನು ಗೆದ್ದಿದೆ. ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಂದರಲ್ಲೇ 10 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗಳಿಸಿಕೊಂಡಿದ್ದಾರೆ. ಮಾಗಡಿಯಲ್ಲಿಯೂ ಸಹ ಬಿಜೆಪಿ ಉತ್ತಮವಾಗಿಯೇ ಖಾತೆ ತೆರೆದಿದ್ದು, ಲಭ್ಯ ಮಾಹಿತಿ ಪ್ರಕಾರ ಇಲ್ಲಿ ಬಿಜೆಪಿ ಬೆಂಬಲಿತರು ಸುಮಾರು 40 ಸ್ಥಾನಗಳನ್ನು ಗಳಿಸಿದ್ದಾರೆ.

    ಜಿಲ್ಲೆಯಲ್ಲಿ ಕೈ ಮುಂದು: ಜಿಲ್ಲೆಯ ಚನ್ನಪಟ್ಟಣ ಹೊರತುಪಡಿಸಿ ಉಳಿದ ಮೂರು ತಾಲೂಕುಗಳಲ್ಲಿ ಕೈ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಶಕ್ತಿ ಪ್ರದರ್ಶಿಸಿದ್ದಾರೆ. ಜಿಲ್ಲೆಯಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಇದರ ಹೊರತಾಗಿಯೂ ಎಚ್​ಡಿಕೆ ಕರ್ಮಭೂಮಿ ರಾಮನಗರದಲ್ಲಿ ಜೆಡಿಎಸ್​ಗಿಂತ ಕಾಂಗ್ರೆಸ್ ಮುಂದೆ ಇದ್ದು, ಇಲ್ಲಿ 190ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಕನಕಪುರದಲ್ಲಿ ಸ್ವಾಭಾವಿಕವಾಗಿ ಕಾಂಗ್ರೆಸ್ ಭರ್ಜರಿ ಗೆಲುವು ಪಡೆದುಕೊಂಡಿದೆ. ಮಾಗಡಿಯಲ್ಲಿಯೂ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತೆ ಶಕ್ತಿ ಪ್ರದರ್ಶನ ಮಾಡಿದ್ದು, ಜೆಡಿಎಸ್​ಗೆ ಕೊಂಚ ಹಿನ್ನಡೆಯಾಗಿದೆ.

    ಜೆಡಿಎಸ್​ಗೆ ಹಿನ್ನಡೆ

    ಜಿಲ್ಲೆಯ ಚನ್ನಪಟ್ಟಣ ಹೊರತುಪಡಿಸಿ ಉಳಿದ ಮೂರು ತಾಲೂಕುಗಳಲ್ಲಿ ಈ ಬಾರಿ ಜೆಡಿಎಸ್ ಹಿನ್ನಡೆ ಅನುಭವಿಸಿದೆ. ಅದರಲ್ಲೂ ಎಚ್​ಡಿಕೆ ಅವರ ನೆಚ್ಚಿನ ಕ್ಷೇತ್ರ ರಾಮನಗರದಲ್ಲಿ ಮತದಾರ ಪ್ರಭುಗಳು ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರಿಗೆ ನೀಡಿದ್ದು ಇದು ಸ್ಥಳೀಯ ಶಾಸಕಿ ಅನಿತಾ ಅವರ ಕಾರ್ಯವೈಖರಿಗೆ ನೀಡಿದ ಉತ್ತರವೇ ಎನ್ನುವಂತೆ ಇದೆ. ಮಾಗಡಿಯಲ್ಲಿಯೂ ಸಹ ಶಾಸಕ ಎ.ಮಂಜುನಾಥ್ ಅವರ ನಿರೀಕ್ಷೆಗೆ ತಕ್ಕ ಯಶಸ್ಸು ಲಭ್ಯವಾಗಿಲ್ಲ. ಇನ್ನು ಕನಕಪುರದಲ್ಲಿ ಪಕ್ಷದ ನಾಯಕರ ಯಾವುದೇ ಬೆಂಬಲವಿಲ್ಲದೆ, ತಮ್ಮದೇ ಶಕ್ತಿ ಮೇಲೆ ಸುಮಾರು 45 ಸ್ಥಾನಗಳನ್ನು ಜೆಡಿಎಸ್ ಬೆಂಬಲಿತರು ಪಡೆದುಕೊಂಡು ಪಕ್ಷಕ್ಕೆ ಹೆಮ್ಮೆ ಪಡುವಂತೆ ಮಾಡಿದ್ದಾರೆ.

    ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ನೆಲೆ ಕಳೆದುಕೊಳ್ಳುತ್ತಿವೆ. ಬಂಡೆಗಳು ಛಿದ್ರವಾಗುತ್ತಿವೆ. ಹಳ್ಳಿ ಹಳ್ಳಿಯಲ್ಲೂ ಕಮಲದ ವಿಕಾಸವಾಗಿ ನರೇಂದ್ರ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಧ್ಯೇಯ ವಾಕ್ಯ ಇಲ್ಲಿ ಸಾಕ್ಷಾತ್ಕಾರವಾಗಿದೆ. ಸತ್ಯ ಮಾರ್ಗದಲ್ಲಿ ನಡೆದು ಜನಸೇವೆ ಮಾಡುವವರಿಗೆ ಮಾತ್ರ ಅವಕಾಶ ಕೊಡುತ್ತೇವೆ ಎಂದು ಮತದಾರ ಪ್ರಭುಗಳು ಸ್ಪಷ್ಟ ತೀರ್ಪು ನೀಡಿದ್ದಾರೆ.

    ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಡಿಸಿಎಂ ಹಾಗೂ ಜಿಲ್ಲಾಉಸ್ತುವಾರಿ ಸಚಿವ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts