More

    ಗ್ರಾಮ ಸಹಾಯಕ ಅಸಹಾಯಕ!

    | ಗೋಪಾಲಕೃಷ್ಣ ಪಾದೂರು ಉಡುಪಿ

    ಕಂದಾಯ ಇಲಾಖೆಯಲ್ಲಿ 41 ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರು ಸೇವಾ ಭದ್ರತೆ ಇಲ್ಲದೆ ಅಸಹಾಯಕರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚುವರಿ ಕೆಲಸ ನಿರ್ವಹಿಸಿದರೂ, ಅತ್ಯಲ್ಪ ಗೌರವಧನದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ.
    ರಾಜ್ಯದಲ್ಲಿ ಸುಮಾರು 10,450 ಗ್ರಾಮ ಸಹಾಯಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇವರ ಸಂಖ್ಯೆ 570. ಕಂದಾಯ ಇಲಾಖೆ ಸೇವೆಗಳಾದ ಕಂದಾಯ ವಸೂಲಿ, ಜನನ-ಮರಣ ನೋಂದಣಿ, ಪ್ರಕೃತಿ ವಿಕೋಪ ನಿರ್ವಹಣೆ ಇವರ ಪ್ರಮುಖ ಜವಾಬ್ದಾರಿ. ಗ್ರಾಮಮಟ್ಟದಲ್ಲಿ ಸರ್ಕಾರದ ಯೋಜನೆಗಳ ಜಾರಿಗೆ ಗ್ರಾಮ ಸಹಾಯಕರ ಸೇವೆ ಅಗತ್ಯ. 2007ರಲ್ಲಿ ಇವರ ಹುದ್ದೆ ಕಾಯಂಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತಾದರೂ, ಇನ್ನೂ ಅನುಷ್ಠಾನಗೊಂಡಿಲ್ಲ.

    ಜಿಲ್ಲಾಡಳಿತದ ನಿರ್ಲಕ್ಷೃದಿಂದ ವಿಳಂಬ: ಕಳೆದ ವರ್ಷ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗ್ರಾಮ ಸಹಾಯಕರ ಸಮಸ್ಯೆ ಇತ್ಯರ್ಥಕ್ಕೆ ಸಭೆ ನಡೆಸಲಾಗಿತ್ತು. ಗ್ರಾಮ ಸಹಾಯಕರ ಸೇವೆ ಕಾಯಂಗೊಳಿಸುವಂತೆ ಅಡ್ವೊಕೇಟ್ ಜನರಲ್ ಸರ್ಕಾರಕ್ಕೆ ವರದಿ ನೀಡಿದ್ದರು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗ್ರಾಮ ಸಹಾಯಕರ ವಿವರ ಸಲ್ಲಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ವರ್ಷ ಕಳೆದರೂ 30 ಜಿಲ್ಲೆಗಳಿಂದ ಸರ್ಕಾರಕ್ಕೆ ವರದಿ ಬಂದಿಲ್ಲ. ಕೆಲವು ಜಿಲ್ಲಾಡಳಿತಗಳ ಉದಾಸೀನತೆಯಿಂದ ಗ್ರಾಮ ಸಹಾಯಕರು ತೊಂದರೆ ಅನುಭವಿಸುವಂತಾಗಿದೆ.

    ಹೆಚ್ಚುವರಿ ಕರ್ತವ್ಯ: ಸರ್ಕಾರದ ಹೊಸ ಯೋಜನೆಗಳ ಅನುಷ್ಠಾನ ಮತ್ತು ಹೆಚ್ಚುವರಿ ಕೆಲಸಗಳಿಗೆ ಗ್ರಾಮ ಸಹಾಯಕರನ್ನೇ ಬಳಸಿಕೊಳ್ಳಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಇವರು ರಾತ್ರಿ ಪಾಳಿಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು. ಕಂಟೇನ್ಮೇಂಟ್ ಜೋನ್, ಸೀಲ್‌ಡೌನ್ ಸಹಿತ ಹೆಚ್ಚುವರಿ ಕರ್ತವ್ಯ ಮಾಡುತ್ತಿರುವ ಈ ಸಹಾಯಕರಿಗೆ ಆರೋಗ್ಯ ಮತ್ತು ಸೇವಾ ಭದ್ರತೆಯಿಲ್ಲ. ಸಿಗುವುದು ಸಣ್ಣ ಪ್ರಮಾಣದ ಗೌರವಧನ ಮಾತ್ರ.

    ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಹಲವು ಬಾರಿ ಸರ್ಕಾರವನ್ನು ಆಗ್ರಹಿಸಲಾಗಿದೆ. ಆದರೂ ಪ್ರಯೋಜನ ಆಗಿಲ್ಲ. ಅಲ್ಪ ಮೊತ್ತದ ಗೌರವಧನ ನೀಡಲಾಗುತ್ತಿದೆ. ಆರೋಗ್ಯ ಭದ್ರತೆ, ಇಎಸ್‌ಐ, ಪಿಎಫ್ ಸಹಿತ ಹಲವು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ.
    | ಚಂದ್ರಶೇಖರ್ ಜಿಲ್ಲಾಧ್ಯಕ್ಷ, ಗ್ರಾಮ ಸಹಾಯಕರ ಸಂಘ, ಉಡುಪಿ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 345 ಮಂದಿ ಗ್ರಾಮ ಸಹಾಯಕರಿದ್ದಾರೆ. ಜಿಲ್ಲಾಡಳಿತ ಎಲ್ಲರ ವಿವರಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ಆದರೆ ಕಾಯಂಗೊಳಿಸುವ ಪ್ರಕ್ರಿಯೆ ನಡೆದಿಲ್ಲ. ಈ ನಡುವೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎನ್ನುವ ಸುಪ್ರೀಂಕೋರ್ಟ್ ಆದೇಶದಂತೆ ಕನಿಷ್ಠ ವೇತನ ನೀಡುವ ವಿಚಾರ ಅಂತಿಮ ಹಂತದಲ್ಲಿದೆ. ಈ ಕುರಿತ ಫೈಲ್ ಆರ್ಥಿಕ ಇಲಾಖೆಯಲ್ಲಿದ್ದು, ಕಾರ್ಯದರ್ಶಿಯವರು ಹಣಕಾಸು ಸಮಸ್ಯೆ ಇದೆ ಎಂದು ಉಳಿಸಿಕೊಂಡಿದ್ದಾರೆ. ಇಲಾಖೆ ಸಚಿವರಾಗಿರುವ ಯಡಿಯೂರಪ್ಪ ಅವರು ಒಪ್ಪಿಗೆ ನೀಡಿದ್ದಾರೆ. ಆದರೂ ಅಧಿಕಾರಿಗಳು ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ.
    | ಪ್ರಕಾಶ್ ಕೆ. ಜಿಲ್ಲಾಧ್ಯಕ್ಷ, ಗ್ರಾಮ ಸಹಾಯಕರ ಸಂಘ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts