More

    ಯಲಬುರ್ಗಾದ ಬಹುತೇಕ ಗ್ರಾಪಂಗಳಲ್ಲಿ ಮಹಿಳೆಯರ ಮೇಲುಗೈ

    ವಿಜಯವಾಣಿ ವಿಶೇಷ ಯಲಬುರ್ಗಾ
    ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಈ ಬಾರಿ ಹಳ್ಳಿ ಗದ್ದುಗೆಯಲ್ಲಿ ಮಹಿಳೆಯರೇ ಹೆಚ್ಚು ಪ್ರಾಬಲ್ಯ ಮೆರೆದಿರುವುದು ವಿಶೇಷ.

    ತಾಲೂಕಿನ 22 ಗ್ರಾಮ ಪಂಚಾಯತಿಗಳ ಪೈಕಿ 19 ಗ್ರಾಪಂಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದೆ. ಜು.18ರಂದು ನಡೆಯಬೇಕಿದ್ದ ವಣಗೇರಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ದಿನದಂದು ಸದಸ್ಯರು ಸಭೆಗೆ ಬಾರದ ಕಾರಣ ಚುನಾವಣೆಯನ್ನು ಜು.21ಕ್ಕೆ ಮುಂದೂಡಲಾಗಿದೆ. ಇನ್ನೂ ಹಿರೇಮ್ಯಾಗೇರಿ, ಸಂಕನೂರು ಗ್ರಾಪಂಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾ ಆಯೋಗ ಮೀಸಲಾತಿ ನಿಗದಿ ಮಾಡಿದ್ದು, ಅವಧಿ ಮುಕ್ತಾಯವಾಗದ ಕಾರಣ ಆಯ್ಕೆ ತಡವಾಗಲಿದೆ.

    14 ಮಹಿಳಾ ಅಧ್ಯಕ್ಷರು: ತಾಲೂಕಿನ 14 ಗ್ರಾಪಂಗಳಿಗೆ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ತಲಾ 14 ಮಹಿಳೆಯರು ಆಯ್ಕೆಯಾಗಿದ್ದು, ಮೇಲುಗೈ ಸಾಧಿಸಿದ್ದಾರೆ. ಇನ್ನೂ ತಲಾ ಐವರು ಪುರುಷರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಎರಡನೇ ಅವಧಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಅಧ್ಯಕ್ಷರಾಗಲು ಹೆಚ್ಚು ಅವಕಾಶ ಸಿಕ್ಕಿದೆ. ಗ್ರಾಪಂ ಮಟ್ಟದಲ್ಲಿ ಅಧ್ಯಕ್ಷೆ-ಉಪಾಧ್ಯಕ್ಷರಾಗಿ ಹೆಚ್ಚಿನ ಅವಕಾಶ ಸಿಕ್ಕಿರುವುದು ಮಹಿಳಾ ಸಬಲೀಕರಣ, ರಾಜಕೀಯ ಆಸಕ್ತಿ ಮೂಡಿಸಿದೆ ಎನ್ನುತ್ತಾರೆ ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳು.

    ಬರುವಂಥ ಸರ್ಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಪ್ರಾಮುಖ್ಯತೆ ಕೊಡುತ್ತಿವೆ. ಆ ನಿಟ್ಟಿನಲ್ಲಿ ತಾಲೂಕಿನ ಗ್ರಾಪಂಗಳಿಗೆ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿರುವುದು ಸಂತಸದ ವಿಚಾರ. ಇದು ಮಹಿಳೆಯರಲ್ಲಿ ಮತ್ತಷ್ಟು ಸಮಾಜಸೇವೆ ಮತ್ತು ರಾಜಕೀಯ ಆಸಕ್ತಿ ತರುತ್ತದೆ. ಸಂತೋಷ ಬಿರಾದಾರ ಪಾಟೀಲ್ ತಾಪಂ ಇಒ, ಯಲಬುರ್ಗಾ

    ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಅನುಸಾರವಾಗಿ ಮಹಿಳೆಯರಿಗೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳು ಹೆಚ್ಚು ಲಭಿಸಿರುವುದು ಮಹಿಳಾ ಸಬಲೀಕರಕ್ಕೆ ಆದ್ಯತೆ ದೊರಕಿದಂತಾಗಿದೆ. ಅಲ್ಲದೇ, ಮಹಿಳಾ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
    ರತ್ನವ್ವ ಮಲ್ಲಪ್ಪ ವಣಗೇರಿ ಬಂಡಿ ಗ್ರಾಪಂ ಅಧ್ಯಕ್ಷೆ

    ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮಹಿಳಾ ಪ್ರತಿನಿಧಿಗಳಾಗುವ ಅವಕಾಶವಿದೆ. ಮಹಿಳೆಯರ ಸಬಲೀಕರಣದ ಜತೆಗೆ, ರಾಜಕೀಯ ಆಸಕ್ತಿ ಮೂಡಿಸುತ್ತದೆ. ಅಧ್ಯಕ್ಷೆಯಾಗಿ ಆಯ್ಕೆಯಾಗಲು ಅವಕಾಶ ಸಿಕ್ಕಿರುವುದು ಸಂತಸವಾಗಿದೆ.
    ಹುಲಿಗೆಮ್ಮ ಬಸಪ್ಪ ತಳವಾರ್ ಹಿರೇವಂಕಲಕುಂಟಾ ಗ್ರಾಪಂ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts