More

    ಗ್ರಾಪಂ ಚುನಾವಣೆ ಮತ ಎಣಿಕೆ ನಾಳೆ

    ಹಾವೇರಿ: ಜಿಲ್ಲೆಯ ಗ್ರಾಪಂಗಳ ಮತ ಎಣಿಕೆ ಡಿ. 30ರಂದು ಜಿಲ್ಲೆಯ ಎಂಟು ತಾಲೂಕು ಕೇಂದ್ರಗಳಲ್ಲಿ ಜರುಗಲಿದೆ. ಎಣಿಕೆಗಾಗಿ 323 ಟೇಬಲ್​ಗಳ ವ್ಯವಸ್ಥೆ ಮಾಡಲಾಗಿದೆ. ಮೂರು ಪಾಳೆಯಲ್ಲಿ ಪಂಚಾಯಿತಿಗಳನ್ನು ವಿಂಗಡಿಸಿ ಮತ ಎಣಿಕೆ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 22ರಂದು ನಡೆದ 104 ಹಾಗೂ ಡಿ. 27ರಂದು ನಡೆದ 105 ಗ್ರಾಪಂಗಳ ಚುನಾವಣೆ ಶಾಂತಿಯುತವಾಗಿದೆ. ಡಿ. 30ರಂದು ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದೆ ಎಂದರು.

    ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯುವ ಎಣಿಕೆ ಕಾರ್ಯಕ್ಕೆ ಪರಸ್ಪರ ಅಂತರ ಮತ್ತು ಜನದಟ್ಟಣೆ ನಿಯಂತ್ರಿಸಲು ಮೂರು ಅವಧಿ ನಿಗದಿಪಡಿಸಲಾಗಿದೆ. ಇದಕ್ಕಾಗಿ ಮೂರು ಪ್ರತ್ಯೇಕ ಬಣ್ಣದ ಪಾಸ್​ಗಳನ್ನು ಅಭ್ಯರ್ಥಿಗಳಿಗೆ ಹಾಗೂ ಏಜೆಂಟ್​ರಿಗೆ ನೀಡಲಾಗುವುದು. ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆವರೆಗೆ ಗುಲಾಬಿ ಬಣ್ಣದ ಕಾರ್ಡ್, ಮಧ್ಯಾಹ್ನ 12ರಿಂದ ಸಂಜೆ 4 ರವರೆಗೆ ನೀಲಿ ಬಣ್ಣದ ಕಾರ್ಡ್ ಹಾಗೂ ಸಂಜೆ 4ರಿಂದ ಎಣಿಕೆ ಮುಕ್ತಾಯದವರೆಗೆ ಹಳದಿ ಬಣ್ಣದ ಕಾರ್ಡ್ ವ್ಯವಸ್ಥೆ ಮಾಡಲಾಗಿದೆ. ಆಯಾ ಅವಧಿಯಲ್ಲಿ ಎಣಿಕೆಗೊಳ್ಳುವ ಪಂಚಾಯಿತಿಯ ಅಭ್ಯರ್ಥಿಗಳು ಹಾಗೂ ಏಜೆಂಟರು ಮಾತ್ರ ತಮಗೆ ನೀಡಿದ ಪಾಸ್​ಗಳೊಂದಿಗೆ ಎಣಿಕೆ ಕೇಂದ್ರಕ್ಕೆ ಪ್ರವೇಶ ಮಾಡಬಹುದು ಎಂದರು.

    ಮತ ಎಣಿಕೆಗೆ ಈಗಾಗಲೇ ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ. ಆಯಾ ತಾಲೂಕಿನ ಒಟ್ಟು ಪಂಚಾಯಿತಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುವುದು. ದೊಡ್ಡ ಪಂಚಾಯಿತಿಗಳನ್ನು ಮೊದಲ ಅವಧಿಯಲ್ಲಿ ಎಣಿಕೆಗೆ ತೆಗೆದುಕೊಳ್ಳಲಾಗುವುದು. ಮತ ಎಣಿಕೆಗೆ ಅಗತ್ಯಬಿದ್ದರೆ ತಹಸೀಲ್ದಾರ್ ಅವರು ಹೆಚ್ಚುವರಿ ಟೇಬಲ್ ವ್ಯವಸ್ಥೆಗೆ ನಿರ್ಧರಿಸಬಹುದು. ಪ್ರತಿ ಟೇಬಲ್​ಗೆ ಒಬ್ಬ ಎಣಿಕೆ ಉಸ್ತುವಾರಿ ಅಧಿಕಾರಿ, ಎರಡು ಜನ ಎಣಿಕೆ ಸಹಾಯಕರು, ಒಬ್ಬ ಗ್ರೂಪ್ ಡಿ ನೌಕರ ಸೇರಿ ನಾಲ್ಕು ಜನರನ್ನು ನೇಮಿಸಲಾಗಿದೆ. ಒಟ್ಟಾರೆ 704 ಎಣಿಕೆ ಸಹಾಯಕರು, 323 ಟೇಬಲ್ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಿ ಈಗಾಗಲೇ ತರಬೇತಿ ನೀಡಲಾಗಿದೆ. ಎಲ್ಲ ಎಣಿಕೆ ಕೊಠಡಿಗಳಲ್ಲಿ ಅಗತ್ಯ ಸ್ಯಾನಿಟೈಸರ್, ಅಧಿಕಾರಿ ಹಾಗೂ ಸಿಬ್ಬಂದಿಗೆ ಮಾಸ್ಕ್ ಪೂರೈಕೆಗೆ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ನಿಯೋಜಿಸಲಾಗಿದೆ. ಶಾಂತಿ ಸುವ್ಯವಸ್ಥೆಗಾಗಿ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.

    ಮತ ಎಣಿಕೆ ಕೇಂದ್ರದಲ್ಲಿ ನಿರ್ಬಂಧಿತ ವಸ್ತುಗಳನ್ನು ತರದಂತೆ ತಿಳಿಸಲಾಗಿದೆ. ಎಣಿಕೆ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೊಷಿಸಲಾಗುವುದು. ಎಣಿಕೆ ಕೇಂದ್ರಕ್ಕೆ ಚಾಕು ಚೂರಿಗಳಂಥ ಮಾರಕಾಸ್ತ್ರಗಳನ್ನು ತರುವಂತಿಲ್ಲ. ಗುಟ್ಖಾ, ಎಲೆ ಅಡಕೆ, ತಂಬಾಕು, ಬೆಂಕಿಪೊಟ್ಟಣ, ಬೀಡಿ, ಸಿಗರೇಟ್, ಮೊಬೈಲ್, ಇಲೆಕ್ಟ್ರಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಎಣಿಕೆ ಕಾರ್ಯ ಆರಂಭದಿಂದ ಮುಕ್ತಾಯವಾಗುವವರೆಗೆ ಉಪಸ್ಥಿತರಿರಬೇಕು. ಈ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದರೆ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಜಿಪಂ ಸಿಇಒ ಮಹಮ್ಮದ್ ರೋಷನ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ. ದಿಲೀಪ ಶಶಿ, ಚುನಾವಣಾ ತಹಸೀಲ್ದಾರ್ ಪ್ರಶಾಂತ ನಾಲವಾರ ಇತರರಿದ್ದರು.

    ಮತ ಎಣಿಕೆ ಕೇಂದ್ರಗಳು

    ಹಾವೇರಿ ನಗರದ ಶಿವಲಿಂಗೇಶ್ವರ ಮಹಿಳಾ ಕಾಲೇಜ್, ರಾಣೆಬೆನ್ನೂರು ನಗರದ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹಿರೇಕೆರೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ರಟ್ಟಿಹಳ್ಳಿಯ ತರಳಬಾಳು ಜಗದ್ಗುರು ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಬ್ಯಾಡಗಿ ಪಟ್ಟಣದ ಎಸ್​ಜೆವಿ ಹಿರಿಯ ಪ್ರಾಥಮಿಕ ಶಾಲೆ, ಸವಣೂರು ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಶಿಗ್ಗಾಂವಿ ನಗರದ ಜೆಎಂಜೆ ಶಾಲೆ ಹಾಗೂ ಹಾನಗಲ್ಲನ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜ್​ನಲ್ಲಿ ಎಣಿಕೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts