More

    ಗದಗ: ವಿವಿಧ ಜನಪರ ಯೋಜನೆಗಳ ಸೌಲಭ್ಯಗಳ ಕುರಿತು ಗ್ರಾಮಗಳಲ್ಲಿ ಜನಜಾಗೃತಿ ಕಾರ್ಯಕ್ರಮ  

    ಗದಗ: ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಂಗಳವಾರದಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಳ್ಳಲಾದ ಜನಜಾಗೃತಿ ಕಾರ್ಯಕ್ರಮಕ್ಕೆ  ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹಾಗೂ ಹುಬ್ಬಳ್ಳಿಯ ಸಿದ್ದಾರೂಢಮಠದ ಮೇಲ್ಮನೆ ಸಮಿತಿ ಅಧ್ಯಕ್ಷರಾದ ಡಿ.ಆರ್. ಪಾಟೀಲ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.  

    ಸರ್ಕಾರದ ವಿವಿಧ ಜನಪರ ಯೋಜನೆಗಳ ಸೌಲಭ್ಯಗಳ ಕುರಿತು ಗ್ರಾಮೀಣ ಜನರಿಗೆ ಅರಿವು ಮೂಡಿಸಲು ವಾರ್ತಾ ಇಲಾಖೆಯಿಂದ ಗ್ರಾಮ ಸಂಪರ್ಕ ಯೋಜನೆಯಡಿಯಲ್ಲಿ ಜನಜಾಗೃತಿ  ಕಾರ್ಯಕ್ರಮಗಳನ್ನು ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

    ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಭಾಗ್ಯಲಕ್ಷ್ಮೀ, ಗೃಹ ಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳನ್ನು ಅರ್ಹರೆಲ್ಲರೂ ಪಡೆಯಬೇಕು. ಸಮಾಜದ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳ ಪ್ರಯೋಜನ ಒಂದಿಲ್ಲೊಂದು ರೀತಿಯಲ್ಲಿ ತಲುಪಬೇಕು. ಅದಕ್ಕಾಗಿ ವಾರ್ತಾ ಇಲಾಖೆಯಿಂದ ಜನರನ್ನು ಜಾಗೃತರನ್ನಾಗಿ  ಮಾಡಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಈ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ತಲುಪಲಿ ಎಂದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಬಿ. ಮಡ್ಲೂರ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲೆಯ ಗದಗ, ರೋಣ, ಶಿರಹಟ್ಟಿ, ಗಜೇಂದ್ರಗಡ ಹಾಗೂ ಲಕ್ಷ್ಮೇಶ್ವರ ತಾಲೂಕಿನಲ್ಲಿ  ಆಯ್ದ ಗ್ರಾಮಗಳಲ್ಲಿ ನವೆಂಬರ್ 21 ರಿಂದ 30 ರವರೆಗೆ  ಬೀದಿನಾಟಕ ಹಾಗೂ ಜಾನಪದ ಸಂಗೀತ  ಪ್ರಸ್ತುತಪಡಿಸುವ ಮೂಲಕ  ಗ್ರಾಮ ಸಂಪರ್ಕ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಎರಡು ಕಾರ್ಯಕ್ರಮಗಳಂತೆ ನಿರಂತರವಾಗಿ 10 ದಿನಗಳ ಕಾಲ ಜಾಗೃತಿ ಕಾರ್ಯಕ್ರಮಗಳು ಜರುಗಲಿವೆ ಎಂದರು.    

    ರೋಣದ ಜೀವನಬೆಳಕು ನಗರ ಗ್ರಾಮೀಣಾಭಿವೃದ್ಧಿ ಮಹಿಳಾ ಸಂಸ್ಥೆ ಹಾಗೂ ಅಡವಿಸೋಮಾಪುರದ ಸಿದ್ಧಲಿಂಗೇಶ್ವರ ಜಾನಪದ ಕಲಾ ತಂಡದವರಿಂದ ಬೀದಿ ನಾಟಕ ಕಾರ್ಯಕ್ರಮಗಳು ಹಾಗೂ  ನೀಲಗುಂದದ ಜೈ ಭೀಮ ಜನಪದ ಮೇಳ ಹಾಗೂ  ಕೊಣ್ಣೂರಿನ ಬೀರಲಿಂಗೇಶ್ವರ ಕಲಾ ತಂಡದವರಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.

    ಈ ಸಂದರ್ಭದಲ್ಲಿ ಸಿದ್ಧಲಿಂಗೇಶ್ವರ ಜಾನಪದ ಕಲಾ ತಂಡದ ಮುಖ್ಯಸ್ಥ ವೀರಣ್ಣ ಅಂಗಡಿ ಹಾಗೂ ಬೀದಿ ನಾಟಕ ಜನಪದ ತಂಡದ ಇತರ ಸದಸ್ಯರು  ಹಾಜರಿದ್ದರು.

    • ಗದಗ,ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಆಯ್ದ 20 ಗ್ರಾಮಗಳು : ಗದಗ ತಾಲೂಕಿನ  ಹಿರೇಹಂದಿಗೋಳ, ಬಿಂಕದಕಟ್ಟಿ, ಹುಲಕೋಟಿ, ಹೊಸಳ್ಳಿ, ಕುರ್ತಕೋಟಿ, ಮಲ್ಲಸಮುದ್ರ, ನಾಗಾವಿ, ಕಳಸಾಪುರ, ಅಡವಿಸೋಮಾಪುರ, ಪಾಪನಾಶಿ :  ಲಕ್ಷ್ಮೇಶ್ವರ ತಾಲೂಕಿನ ಯತ್ನಳ್ಳಿ, ಯಳವತ್ತಿ, ಗೊಜನೂರ, ಮಾಗಡಿ;  ಶಿರಹಟ್ಟಿ ತಾಲೂಕಿನ ಛಬ್ಬಿ, ವರವಿ, ದೇವಿಹಾಳ, ರಣತೂರ, ಕುಂದ್ರಳ್ಳಿ, ನಾದಿಗಟ್ಟಿ.
    • ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಆಯ್ದ 20 ಗ್ರಾಮಗಳು: ರೋಣ ತಾಲೂಕಿನ ಚಿಕ್ಕಮಣ್ಣೂರ, ಹಿರೇಮಣ್ಣೂರ, ಕೂರಟ್ಟಿ, ಮುದೇನಗುಡಿ, ಸಂದಿಗವಾಡ, ಮಲ್ಲಾಪುರ, ಹುಲ್ಲೂರ, ಸೊಮನಕಟ್ಟಿ, ಶಾಂತಗೇರಿ, ಬಮ್ಮಸಾಗರ ;   ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ, ಬೆನಕಟ್ಟಿ, ಮುಶಿಗೇರಿ, ಕಲ್ಲಿಗನೂರ, ಸೂಡಿ, ಗುಳಗುಳಿ, ಕುಂಟೋಜಿ, ಜಿಗೇರಿ, ನಾಗೇಂದ್ರಗಡ, ನೆಲ್ಲೂರ.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts