More

    ಕೇಂದ್ರ ಸರ್ಕಾರಿ ನೌಕರರ, ಪಿಂಚಣಿದಾರರ ತುಟ್ಟಿಭತ್ಯೆಗೆ ತಡೆ

    ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ತುಟ್ಟಿಭತ್ಯೆ ಹಾಗೂ ತುಟ್ಟಿಭತ್ಯೆ ಪರಿಹಾರದ ಹೆಚ್ಚುವರಿ ಮೊತ್ತವನ್ನು ತಡೆಹಿಡಿದು ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ.

    2020ರ ಜನವರಿಯಿಂದ ಬಾಕಿಯಿರುವ ಹಾಗೂ 2021ರ ಜುಲೈವರೆಗೆ ಅನ್ವಯವಾಗುವಂತೆ ತುಟ್ಟಿಭತ್ಯೆಯನ್ನು ತಡೆಹಿಡಿಯಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

    ಕರೊನಾ ಸಂಕಷ್ಟ ಹಿನ್ನೆಲೆಯಲ್ಲಿ ವೈದ್ಯಕೀಯ ಹಾಗೂ ಸಮಾಜದ ಬಡವರು ಹಾಗೂ ನಿರ್ಗತಿಕರ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಮೊತ್ತ ವ್ಯಯಿಸಲಾಗುತ್ತಿರುವ ಕಾರಣ ಹಣಕಾಸು ವೆಚ್ಚವನ್ನು ಸರಿದೂಗಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ಇದಲ್ಲದೇ, 2020 ಜನವರಿ ಹಾಗೂ 2021ರ ಜುಲೈವರೆಗಿನ ಅವಧಿಯಲ್ಲಿ ಬಾಕಿ ಉಳಿಸಿಕೊಂಡಿರುವುದನ್ನು ತಡೆ ಹಿಡಿಯಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ, ತುಟ್ಟಿಭತ್ಯೆಯನ್ನು ಈಗಿನ ದರದಲ್ಲಿಯೇ ಮುಂದುವರಿಸಲಾಗುವುದು ಎಂದು ಹೇಳಿದೆ.

    ಒಟ್ಟಾರೆ ಮೂರು ಕಂತಿನ ತುಟ್ಟಿ ಭತ್ಯೆಯನ್ನು ತಡೆಹಿಡಿದಿರುವ ಕಾರಣ ಕೇಂದ್ರ ಸರ್ಕಾರಕ್ಕೆ 37,530 ಕೋಟಿ ರೂ. ಉಳಿಕೆಯಾಗಲಿದೆ. ಇನ್ನು ರಾಜ್ಯ ಸರ್ಕಾರಗಳು ಕೂಡ ಇದೇ ಮಾದರಿಯನ್ನು ಅನುಸರಿಸುತ್ತವೆ. ಅಂತೆಯೆ ವಿವಿಧ ರಾಜ್ಯ ಸರ್ಕಾರಗಳು ಪಾವತಿಸಬೇಕಿರುವ ಮೊತ್ತದ ಪ್ರಮಾಣವೂ 82,566 ಕೋಟಿ ರೂ. ಆಗಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೊತ್ತ ಸೇರಿಸಿದರೆ 1.20 ಲಕ್ಷ ಕೋಟಿ ರೂ.ಗಳಷ್ಟು ಮೊತ್ತ ಕರೊನಾ ವಿರುದ್ಧದ ಹೋರಾಟಕ್ಕೆ ಲಭ್ಯವಾದಂತಾಗಲಿದೆ ಎಂದು ಅಂದಾಜಿಸಲಾಗಿದೆ.

    ಕರೊನಾ ಪತ್ತೆಗೆ ಬರಲಿವೆ ವೈದ್ಯಕೀಯ ಪತ್ತೇದಾರಿ ಶ್ವಾನಗಳು, ಅಪರಾಧಿಗಳಂತೆ ಸೋಂಕಿತರನ್ನು ಗುರುತಿಸಲಿವೆಯೇ ನಾಯಿಗಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts