More

    ಬೀರಲದಿನ್ನಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

    ಗೊಳಸಂಗಿ: ಸಮೀಪದ ಬೀರಲದಿನ್ನಿ ಗ್ರಾಮದಲ್ಲಿ ಸುಟ್ಟ ಮೋಟಾರು ದುರಸ್ತಿಗೊಳಿಸದ ಕಾರಣದಿಂದ ಕಳೆದೊಂದು ವಾರದಿಂದ ನೀರು ಸರಬರಾಜು ಸ್ಥಗಿತಗೊಂಡ ಪರಿಣಾಮ ರೊಚ್ಚಿಗೆದ್ದ ಗ್ರಾಮಸ್ಥರು ಶುಕ್ರವಾರ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
    ಗ್ರಾಮದಲ್ಲಿರುವ ಎರಡು ಕೊಳವೆ ಬಾವಿಗಳು ಬಂದ್ ಆಗಿರುವುದರಿಂದ ಗ್ರಾಮಸ್ಥರಿಗೆ ಕುಡಿಯಲು ಹಾಗೂ ದಿನಬಳಕೆಗೆ ನೀರು ಸಿಗುತ್ತಿಲ್ಲ. ಚುನಾವಣೆ ನೆಪದಲ್ಲಿ ಅಧಿಕಾರಿಗಳ ಜಾಣ ಕುರುಡುತನ ಸಹಿಸಲು ನಮ್ಮಿಂದ ಆಗದು. ತುರ್ತು ನೀರು ಪೂರೈಕೆ ಆಗುವವರೆಗೂ ಬೀಗ ತೆರೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

    ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗೊಳಸಂಗಿ, ಅಂಗಡಗೇರಿ, ವಂದಾಲ ರಸ್ತೆಗಳು ಹದಗೆಟ್ಟು ಅದೆಷ್ಟೋ ವರ್ಷ ಕಳೆದಿವೆ. ರಸ್ತೆ ದುರಸ್ತಿಗಾಗಿ ಅನುದಾನ ಮೀಸಲಿರಿಸಿದ್ದರೂ ಪಿಡಿಒ ಹಿಂದಿನ ಸದಸ್ಯರ ಜತೆ ಹೊಂದಾಣಿಕೆ ಮಾಡಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ಊರಲ್ಲಿ ಯಾವುದೇ ಚರಂಡಿ ಕಾಮಗಾರಿಯನ್ನೂ ಸಮರ್ಪಕವಾಗಿ ಮಾಡಿಲ್ಲ. ಹೀಗಾಗಿ ಕೊಳಚೆ ನೀರು ನಡುಬೀದಿಯಲ್ಲೇ ನಿಂತು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನಿಸುವ ತಾಣಗಳಾಗಿ ಪರಿವರ್ತನೆಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
    ರಮೇಶ ಕಮದಾಳ, ಉಮೇಶ ಈಳಗೇರ, ರಾಯಪ್ಪಗೌಡ ಬಿರಾದಾರ, ಶಾಂತಗೌಡ ಬಿರಾದಾರ, ಅಶೋಕ ಪೂಜಾರಿ, ಸುರೇಶ ಬಾಳಿ, ಸೋಮಪ್ಪ ಮಾದರ, ಸಿದ್ದರಾಮ ಮಾದರ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

    ಬೀರಲದಿನ್ನಿ ಗ್ರಾಮಕ್ಕೆ ನಿತ್ಯ 50 ಸಾವಿರ ಲೀ. ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಅಲ್ಲಿನ ಸಿಬ್ಬಂದಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣದಿಂದಾಗಿ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ. ಕೂಡಲೇ ಸುಟ್ಟಿರುವ ಮೋಟಾರು ದುರಸ್ತಿ ಮಾಡಲಾಗುತ್ತದೆ. ಅದಾಗದಿದ್ದಲ್ಲಿ ಹೊಸ ಕೊಳವೆ ಬಾವಿ ಕೊರೆಸಿ ಗ್ರಾಮಸ್ಥರ ನೀರಿನ ಸಮಸ್ಯೆಗೆ ಸ್ಪಂದಿಸಲಾಗುವುದು.
    ವಿ.ಬಿ. ಗೊಂಗಡಿ, ಸಹಾಯಕ ಅಭಿಯಂತರ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಉಪವಿಭಾಗ, ಬಸವನ ಬಾಗೇವಾಡಿ.

    ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಗ್ರಾಮಸ್ಥರು ಬಿಡುತ್ತಿಲ್ಲ. ಸುಸಜ್ಜಿತವಾಗಿದ್ದ ಒಂದು ಕೊಳವೆ ಬಾವಿಗೆ ಗ್ರಾಮಸ್ಥರೇ ಕಲ್ಲು ಹಾಕಿ ಬಂದ್ ಮಾಡಿದ್ದಾರೆ.
    ಸುರೇಶ ಈಳಗೇರ, ಲೆಕ್ಕಿಗ, ಗ್ರಾಪಂ ಬೀರಲದಿನ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts