More

    ಗೋಕಾಕದಲ್ಲಿ ರಮೇಶ ಬೆಂಬಲಿಗರ ಪ್ರತಿಭಟನೆ

    ಗೋಕಾಕ: ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ರಮೇಶ ಜಾರಕಿಹೊಳಿ ಪರ ಹಾಗೂ ವಿರೋಧ ಪ್ರತಿಭಟನೆಗಳಿಗೆ ಸ್ಥಳೀಯ ಬಸವೇಶ್ವರ ವೃತ್ತ ಬುಧವಾರ ಸಾಕ್ಷಿಯಾಯಿತು.

    ಅಶ್ಲೀಲ ಸಿಡಿ ವಿಚಾರವಾಗಿ ರಮೇಶ ಜಾರಕಿಹೊಳಿ ಅವರ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರ ನೇತೃತ್ವದಲ್ಲಿ ಹಲವರು ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸಿದರು. ರಮೇಶ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲು ಮುಂದಾದಾಗ ಅವರನ್ನು ಪೊಲೀಸರು ತಡೆದರು.

    ಬೆಂಬಲಿಗರಿಂದ ಪ್ರತಿಭಟನೆ: ಬಳಿಕ ಇದೇ ಬಸವೇಶ್ವರ ವೃತ್ತದಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರು ಸಚಿವ ರಮೇಶ ನೀಡಿದ ರಾಜೀನಾಮೆ ಅಂಗೀಕಾರ ಮಾಡಬಾರದು ಎಂದು ಆಗ್ರಹಿಸಿ ವಾಹನ ಸಂಚಾರ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ರಮೇಶ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿದರು.

    ಇಂದೊಂದು ರಾಜಕೀಯ ಪ್ರೇರಿತ ಆರೋಪವಾಗಿದ್ದು, ರಮೇಶ ಜಾರಕಿಹೊಳಿ ಅವರ ಏಳಿಗೆ ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಡೆಸಿದ ಕುತಂತ್ರ ಇದಾಗಿದೆ. ವಿವಾದಿತ ಸಿಡಿ ಕುರಿತು ಸಂಪೂರ್ಣ ತನಿಖೆಯಾಗುವವರೆಗೂ ಸಚಿವ ರಮೇಶ ಅವರ ರಾಜೀನಾಮೆ ಅಂಗೀಕಾರ ಮಾಡಬಾರದು. ಸಿಬಿಐ ಅಥವಾ ಸಿಐಡಿಗೆ ಈ ಸಿಡಿ ಪ್ರಕರಣದ ತನಿಖೆ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಆತ್ಮಹತ್ಯೆಗೆ ಯತ್ನ: ಇದೇ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಅವರ ಇಬ್ಬರು ಅಭಿಮಾನಿಗಳು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಪೊಲೀಸರು ಕೂಡಲೇ ಅದನ್ನು ತಡೆದರು. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

    ಕಲ್ಲು ತೂರಾಟ: ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದಂತೆ ಕೆಲವೆಡೆ ಕಲ್ಲು ತೂರಾಟ ನಡೆದು, ಮಾರುಕಟ್ಟೆ ಕ್ಷಣಾರ್ಧದಲ್ಲೇ ಸ್ತಬ್ಧವಾಯಿತು. ಕಲ್ಲು ತೂರಾಟದಲ್ಲಿ ಕೆಲ ಅಂಗಡಿ ಹಾಗೂ ಸರ್ಕಾರಿ ಬಸ್ ಕಿಟಕಿಯ ಗಾಜುಗಳು ಜಖಂಗೊಂಡವು. ಏಕಾಏಕಿ ಗೋಕಾಕ ಬಂದ್ ಕರೆ ಕೊಟ್ಟ ಹಿನ್ನೆಲೆಯಲ್ಲಿ ಬೇರೆ ಊರುಗಳ ಪ್ರಯಾಣಿಕರು ಮರಳಿ ಮನೆಗೆ ಸೇರಲು ಪರದಾಡಿದರು. ಶಾಲಾ-ಕಾಲೇಜ್ ವಿದ್ಯಾರ್ಥಿಗಳನ್ನು ಡಿವೈಎಸ್ಪಿ ಜಾವೀದ್ ಇನಾಮದಾರ ಅವರು ಖಾಸಗಿ
    ಬಸ್ ವ್ಯವಸ್ಥೆ ಮಾಡಿ ಮನೆಗೆ ತಲುಪಿಸಿದರು.

    ಗೋಕಾಕ ನಗರದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹಾಗೂ ಸಿಬ್ಬಂದಿ ನಗರಾದ್ಯಂತ ಗಸ್ತು ತಿರುಗುತ್ತಿದ್ದು, ಹೆಚ್ಚಿನ ಭದ್ರತೆಗಾಗಿ ಬೇರೆ-ಬೇರೆ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts