More

    ಲೋಕ ಫಲಿತಾಂಶ ಬಳಿಕ ಮೇಕೆದಾಟು ಯೋಜನೆಗೆ ಚಾಲನೆ

    ಪಾಂಡವಪುರ: ಲೋಕಸಭೆಯಲ್ಲಿ ಎನ್‌ಡಿಎ ಒಕ್ಕೂಟ ಹೆಚ್ಚು ಸ್ಥಾನ ಗೆಲ್ಲಲಿದ್ದು, ಚುನಾವಣಾ ಫಲಿತಾಂಶದ ಬಳಿಕ ಮೇಕೆದಾಟು ಯೋಜನೆಗೆ ಚಾಲನೆ ದೊರೆಯುವ ಜತೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಕಾವೇರಿ ಸಮಸ್ಯೆಗೆ ಶಾಸ್ವತ ಪರಿಹಾರ ಒದಗಿಸಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

    ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆ ಉದ್ಘಾಟಿಸಿ ಮಾತನಾಡಿದರು.

    ಕಾಂಗ್ರೆಸ್‌ನೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಾಗಲೆಲ್ಲ ಆ ಪಕ್ಷದ ನಾಯಕರು ಜೆಡಿಎಸ್‌ಗೆ ದ್ರೋಹ ಮಾಡಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಧಾನಿಯಾದರು. ಆದರೆ ಹತ್ತು ತಿಂಗಳಲ್ಲೇ ದೇವೇಗೌಡರನ್ನು ಕಾಂಗ್ರೆಸ್ ನಾಯಕರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದರು. ಅಲ್ಲದೆ ದೇವೇಗೌಡರು ಪ್ರಧಾನಿಯಾಗಿಯಾಗಿದ್ದ ಸಂದರ್ಭ ಕಾಶ್ಮೀರದಲ್ಲಿ ಚುನಾವಣೆ ನಡೆಸಿ ಸೈ ಎನ್ನಿಸಿಕೊಂಡರು ಎಂದರು.

    ಚುನಾವಣೆ ಪ್ರಕ್ರಿಯೆಗೂ ಆರು ತಿಂಗಳೇ ಮೊದಲೇ ಎಚ್‌ಡಿಕೆ ನೇತೃತ್ವದಲ್ಲಿ ಬಿಜೆಪಿಯ ಕೇಂದ್ರ ನಾಯಕರನ್ನು ಭೇಡಿ ಮಾಡಲಾಗಿತ್ತು. ಈ ವೇಳೆ ಬಿಜೆಪಿ ನಾಯಕರು ಮಂಡ್ಯ ಸೇರಿದಂತೆ ಕೇಳಿದಷ್ಟು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದಾಗಿ ಭರವಸೆ ನೀಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೆನ್ನಿಗೆ ಚೂರಿ ಹಾಕಿದರು. ಆದರೆ ಬಿಜೆಪಿಯವರು ಪಕ್ಷೇತರ ಅಭ್ಯರ್ಥಿ ಬೆಂಬಲಕ್ಕೆ ನಿಂತರು. ಕಾಂಗ್ರೆಸ್ ವಿಸ್ವಾಸಕ್ಕೆ ಅರ್ಹತೆ ಇಲ್ಲದ ಪಕ್ಷ ಎಂದರು.

    ಇಷ್ಟು ದಿನ ಜೆಡಿಎಸ್ ಕಾರ್ಯಕರ್ತರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದ್ದೆ. ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ. ನಾನು ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಬೇಕೆಂದು ಆಸೆ ಪಡಲಿಲ್ಲ. ನನ್ನ ಮೊದಲ ಆಯ್ಕೆ ನಿಖಿಲ್ ಕುಮಾರಸ್ವಾಮಿ, ಆ ನಂತರದಲ್ಲಿ ಕುಮಾರಸ್ವಾಮಿ ಹಾಗೂ ಡಿ.ಸಿ.ತಮ್ಮಣ್ಣ ಎಂದು ಸ್ಪಷ್ಟಪಡಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಮಾತನಾಡಿ, ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕು. ಭಾರತ ವಿಶ್ವಗುರು ಆಗಬೇಕೆಂಬ ಅಭಿಲಾಷೆಯೊಂದಿಗೆ ಮಾಜಿ ಪ್ರಧಾನಿ ಎಚ್‌ಡಿಡಿ ಮತ್ತು ಎಚ್‌ಡಿಕೆ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ರಾಜ್ಯದಲ್ಲಿ ಮೈತ್ರಿಕೂಟ 28 ಸ್ಥಾನಗಳಲ್ಲೂ ಗೆಲುವು ಸಾಧಿಸಲಿದೆ. ನಮ್ಮ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರೊಂದಿಗೆ ಯಾವುದೇ ಭಿನ್ನಾಬಿಪ್ರಾಯ ತೋರದೆ ಒಗ್ಗಟ್ಟಿನಿಂದ ಸೈನಿಕರಂತೆ ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಕುಮಾರಸ್ವಾಮಿ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದರು.

    ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾನವೀನ್, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಸುನೀಲ್ ಸುಬ್ರಹ್ಮಣ್ಯ ಮಾತನಾಡಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಕ್ಷೇತ್ರಾಧ್ಯಕ್ಷ ನೀಲನಹಳ್ಳಿ ಧನಂಜಯ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ನಿರಂಜನ್‌ಬಾಬು, ಜೆಡಿಎಸ್ ಮುಖಂಡರಾದ ಆರ್.ಸೋಮಶೇಖರ್, ಡಿ.ಶ್ರೀನಿವಾಸ್, ಕಣಿವೇ ಯೋಗೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts