More

  ಗಿರ್​ಮಿಟ್​: ಸೇವಪುರಿ, ಪಾನಿಪುರಿ… ಶಿವರಾತ್ರಿ ಫರಾಳಕ್ಕ ಬರಂಗಿಲ್ಲಾ

  ಗಿರ್​ಮಿಟ್​: ಸೇವಪುರಿ, ಪಾನಿಪುರಿ... ಶಿವರಾತ್ರಿ ಫರಾಳಕ್ಕ ಬರಂಗಿಲ್ಲಾ‘ಲಂಗಣಂ ಪರಮೌಶಧಮ್ ಅಂತ ಸಂಸ್ಕೃತ ಒಳಗ ಒಂದ ಮಾತ ಅದ, ಅದರ ಅರ್ಥ ಉಪವಾಸನ ಔಷಧ ಇದ್ದಂಗ ಅಂತ. ನಮ್ಮಪ್ಪ ಇದನ್ನ ಭಾಳ ಪಾಲಸ್ತಿದ್ದಾ. ಅಂವಾ ಒಂದ ಸ್ವಲ್ಪ ಹೊಟ್ಟಿ ಅಪಸೆಟ್ ಆದರ ರಾತ್ರಿ ಊಟಾ ಬಿಟ್ಟ ಬಿಡ್ತಿದ್ದಾ. ಅವತ್ತ ಅವಂದ ಒಪ್ಪತ್ತ ಇದ್ದಂಗ. ಇನ್ನ ನಮ್ಮವ್ವ ತಿಂಗಳದಾಗ ಐದ-ಆರ ಒಪ್ಪತ್ತ-ಉಪವಾಸ ಮಾಡ್ತಾಳ. ಅಗದಿ ಸ್ಪೆಸಿಫಿಕ್ಕಾಗಿ ಶನಿವಾರ, ಏಕಾದಶಿ, ಸಂಕಷ್ಟಿ ಅಂತ ಮಾಡ್ತಾಳ.

  ನಮ್ಮಪ್ಪ ‘ಆರೋಗ್ಯವೇ ಭಾಗ್ಯ’ ಅಂತ ಒಪ್ಪತ್ತ ಮಾಡ್ತಿದ್ದಾ, ಇಕಿ ‘ದೇವರ ಭಾಗ್ಯ’ನ ಒಪ್ಪತ್ತ ಅಂತ ಮಾಡ್ತಾಳ.

  ಇನ್ನ ನಾ ಅಂತು ಎಂದೂ ಜೀವನದಾಗ ಒಪ್ಪತ್ತ, ಉಪವಾಸ ಮಾಡಿದೊವನ ಅಲ್ಲಾ. ದೇವರ ಹುಟ್ಟಿಸಿದ್ದ ಹುಲ್ಲ ಮೇಯಲಿಕ್ಕೆ ಅಂತ ಉಪವಾಸ ಮಾಡಿದೊರ ಜೊತಿ ಉಪವಾಸದ ಫರಾಳ, ಊಟಾ ಮಾಡೋರ ಜೊತಿ ಊಟಾ ಮಾಡ್ಕೋತ ಇರ್ತೆನಿ. ಇನ್ನ ಯಾವಾಗ ನಂದ ಮದ್ವಿ ಆತಲಾ ಆವಾಗ ಈ ಉಪವಾಸಕ್ಕ ಹೊಸಾ ಟ್ವಿಸ್ಟ್ ಬಂತ. ನನ್ನ ಹೆಂಡ್ತಿ, ನಮ್ಮವ್ವ ವಾರದಾಗ ಎರೆಡೆರಡ ಒಪ್ಪತ್ತ ಉಪವಾಸ ಅಂತ ಫರಾಳ ಹೊಡಿಯೋದ ನೋಡಿ, ‘ಅತ್ಯಾ..ನಾನು ಒಪ್ಪತ್ತ ಮಾಡ್ತೇನ್ರಿ’ ಅಂತ ಹಟಾ ಹಿಡದ್ಲು.

  ‘ನಮ್ಮವ್ವ ಬ್ಯಾಡ್ವಾ, ನಿಂದ ಇನ್ನೂ ಆಗೋದ ಹೋಗೊದ ರಗಡ ಅದ, ಅದರಾಗ ಉಪ್ಪು ಖಾರಾ ತಿನ್ನೋ ವಯಸ್ಸ ಬ್ಯಾರೆ ಒಪ್ಪತ್ತ ಗಿಪ್ಪತ್ತ ನಿಂಗ್ಯಾಕ’ ಅಂತ ಎಷ್ಟ ಬಡ್ಕೊಂಡರು ಕೇಳಲಿಲ್ಲಾ. ಅದರಾಗ ಇಕಿ ತವರಮನಿ ಒಳಗ ದಿನಕ್ಕ ಮೂರ ಹೊತ್ತ ಕಟಕೋತ ಬೆಳದೋಕಿ, ಇನ್ನ ಅತ್ತಿ ಮನಿಗೆ ಬಂದ ಮ್ಯಾಲೆ ‘ಅತ್ತಿ ಅಕಿಗೆ ಉಪವಾಸ ಮಾಡ ಅಂತ ಉಪವಾಸ ಕೆಡವಿದ್ಲು’ ಅಂತ ಎಲ್ಲೆ ಜನಾ ಅಂತಾರೊ ಅಂತ ನಮ್ಮವ್ವಗ ಸಂಕಟಾ. ಆದರೂ ಅಕಿ ಏನ ನಮ್ಮವ್ವನ ಮಾತ ಕೇಳಲಿಲ್ಲಾ. ‘ಉಪವಾಸ ಮಾಡಿದ್ದ ಪುಣ್ಯಾ ನಿಮಗೊಬ್ಬರಿಗೆ ಯಾಕ ನಂಗೂ ಬರಲಿ’ ಅಂತ ಇಕಿ ಮೊದ್ಲ ಶನಿವಾರ ಒಪ್ಪತ್ತ ಶುರು ಮಾಡಿದ್ಲು. ನಾ ಅಕಿ ಉಪವಾಸ ಮಾಡ್ತಾಳ ಅಂದಾಗ ಭಾಳ ತಲಿಕೆಡಸಿಕೊಳ್ಳಿಕ್ಕೆ ಹೋಗಲಿಲ್ಲಾ. ಹೆಂಗಿದ್ದರು ಲಗ್ನ ಆದ ಮ್ಯಾಲೆ ರೇಶನ್ ಖರ್ಚ್ ಜಾಸ್ತಿ ಆಗಿತ್ತ, ಸ್ವಲ್ಪ ಉಳಿತ ತೊಗೊ ಅಂತ ಸುಮ್ಮನಿದ್ದೆ.

  ಹಿಂಗ ಅತ್ತಿ ಜೊತಿ ಸೊಸಿನೂ ಶನಿವಾರ ಒಪ್ಪತ್ತ ಶುರು ಮಾಡಿದ್ಲು. ಮುಂದ ಅಕಿಗೆ ಯಾರೋ ಸಂಕಷ್ಟಿ ಮಾಡಿದರ ಒಂದನೇದ ಗಂಡ ಆಗ್ತದ ಅಂತ ಅಂದರಂತ ಸಂಕಷ್ಟಿ ಸೇರಸಿದ್ಲು. ಇನ್ನೊಬ್ಬರ ‘ತಿಂಗಳಿಗೆ ಎರಡ ಏಕಾದಶಿ ಇರ್ತಾವ ಅವನ್ನರ ಯಾಕ ಬಿಡ್ತಿ’ ಅಂದರಂತ ಅವನ್ನು ಶುರು ಮಾಡಿದ್ಲು.

  ಇನ್ನ ತಿಂಗಳಿಗೆ ಒಪ್ಪತ್ತ/ಉಪವಾಸ ಜಾಸ್ತಿ ಆಗಲಿಕತ್ತ ಕೂಡ್ಲೆ ಇಕಿಗೆ ಬರೇ ಅವಲಕ್ಕಿ ತಿಂದ ತಿಂದ ಬ್ಯಾಸರ ಆಗಲಿಕತ್ತ.

  ‘ಅತ್ಯಾ ನಮ್ಮವ್ವ ಹೇಳ್ಯಾಳ…ಬಟಾಟಿ ಉಪ್ಪಿಟ್ಟ ಉಪವಾಸಕ್ಕ ನಡಿತದಂತ… ಈ ಅವಲಕ್ಕಿ ತಿಂದ ತಿಂದ ಬ್ಯಾಸರ ಬಂದದ’ ಅಂತ ಅಂದ್ಲು. ಯಾಕೊ ನಮ್ಮವ್ವ ಒಂದ ಮಾತಿಗೆ ‘ಮಾಡ್ವಾ..ಏನ ಮಾಡ್ತಿ ಮಾಡ..ನಾ ಏನ್, ನೀ ಮಾಡಿದ್ದ ಎರಡ ತುತ್ತ ದೇವರ ಮ್ಯಾಲೆ ಭಾರಾ ಹಾಕಿ ತಿನ್ನೋಕಿ’ ಅಂದ ಸುಮ್ಮನಾದ್ಲು.

  ಹಂಗ ಇವರಿಬ್ಬರು ಉಪವಾಸ ಅಂದರ ಮೂರ ಹೊತ್ತ ಅವಲಕ್ಕಿ ಹೊಡಿತಿದ್ರು, ಮುಂಜಾನೆ ಹಚ್ಚಿದ್ದ ಪೇಪರ ಅವಲಕ್ಕಿ, ಮಧ್ಯಾಹ್ನ ತೊಯಿಸಿದ್ದ ಮಿಡಿಯಮ್ ಅವಲಕ್ಕಿ, ರಾತ್ರಿ ದಪ್ಪನಿ ಮಸರವಲಕ್ಕಿ. ಇನ್ನ ಹಿಂಗ ಅವಲಕ್ಕಿ ಮೂರ ಮೂರ ಹೊತ್ತ ತಿಂದರ ಬ್ಯಾಸರ ಆಗಲಾರದ ಏನರಿ? ಮುಂದ ಬಟಾಟಿ ಉಪ್ಪಿಟ್ಟ ಶುರು ಆತ. ‘ಉಪ್ಪಿಟ್ಟ ಮಾಡಿದರ ನಮ್ಮ ಮನೆಯವರಿಗೂ ಆಗ್ತದ’ ಅಂತ ಒಂದ ತಪ್ಪೇಲಿ ಕಾಂಕ್ರೀಟ್ ಮಾಡಿ ಇಡ್ತಿದ್ಲು. ಅಲ್ಲಾ ಇವರ ಅವಲಕ್ಕಿ ಮಾಡಿದಾಗ ‘ಸುದಾಮ ಒಲ್ಲೆ ಅನಬಾರದು’ ಅಂತ ನಂಗೂ ಮೂರು ಹೊತ್ತ ಒಂದೊಂದ ಮುಕ್ಕ ಕೊಡ್ತಿದ್ರ ಬಿಡ್ರಿ. ಹಂಗ ನನಗ ಅಸಿಡಿಟಿ ಸ್ಟಾರ್ಟ್ ಆಗಿದ್ದ ನನ್ನ ಹೆಂಡ್ತಿ ಒಪ್ಪತ್ತಿನ ಅವಲಕ್ಕಿಯಿಂದ.

  ಇನ್ನ ಉಪ್ಪಿಟ್ಟ ನನಗ ಸೇರತದ ಖರೇ ಆದರ ನನಗ ಸ್ವಲ್ಪ ಮುದ್ದಿಮುದ್ದಿ, ಮೆತ್ತಮೆತ್ತಗ ಅಗದಿ ಗುಳುಂ ಗುಳುಂ ಅಂತ ನುಂಗೋ ಹಂಗ ಇದ್ದರ ಛಲೋ. ಆದರ ನನ್ನ ಹೆಂಡ್ತಿ ಮಾಡೋ ಉಪ್ಪಿಟ್ಟ ಉದರ ಬುಕಣಿ ಅಗದಿ ಎಮ್​ಸ್ಯಾಂಡ್ ಇದ್ದಂಗ ಇರ್ತದ. ನಾ ಕಡಿಕೆ ನಂದೇನ ಉಪವಾಸ ಇಲ್ಲಾ ಗಿಪವಾಸ ಇಲ್ಲಾ ನೀವು ಅತ್ತಿ ಸೊಸಿ ಏನರ ಮಾಡ್ಕೋರಿ ಅಂತ ಮನ್ಯಾಗ ಅಡಗಿ ಮಾಡಿದ್ದರ ಉಣ್ತಿದ್ದೆ. ಇಲ್ಲಾ ಬಸವೇಶ್ವರ ಖಾನಾವಳಿಗೆ ಜೈ ಅಂತಿದ್ದೆ.

  ಇತ್ತಲಾಗ ಬರ ಬರತ ಇಕಿ ಉಪವಾಸ ಜಾಸ್ತಿ ಆಗಲಿಕತ್ವು. ಹಂಗ ಫೈನಾನ್ಸಿಯಲಿ ನಂಗಂತೂ ಇಕಿ ಉಪವಾಸ ಮಾಡೋದರಿಂದ ಫರಕ ಏನ ಬೀಳಲಿಲ್ಲಾ, ಉಲ್ಟಾ ಜಾಸ್ತಿ ಆತ ಅನ್ನರಿ. ಆದರ ಆ ಉಪವಾಸದ ಪ್ರಭಾವ ಅಕಿ ದೇಹದ ಮ್ಯಾಲೆ ಆತ. ಅಕಿ ವರ್ಷಕ್ಕ ಒಂದ ನಾಲ್ಕೈದ ಕೀಲೊ ವೇಟ್ ಜಾಸ್ತಿ ಮಾಡ್ಕೊತ ಹೊಂಟ್ಲು. ಅಲ್ಲಾ, ಒಪ್ಪತ್ತ ಉಂಡ ನಾಲ್ಕ ಹೊತ್ತ ಫರಾಳ ಹೊಡದರ ತೂಕ ಏರಲಾರದ ಏನ್ರಿ?

  ನಾ ಅಕಿಗೆ ‘ಒಪ್ಪೊತ್ತುಂಡವ ಯೋಗಿ, ಎರಡೊತ್ತುಂಡವ ಭೋಗಿ, ಮೂರೊತ್ತುಂಡವ ರೋಗಿ, ನಾಲ್ಕೊತ್ತುಂಡವನ ಹೊತ್ಕೊಂಡ್ಹೋಗಿ ಅಂತಾರ, ಅದ ಫರಾಳಕ್ಕೂ ಲಾಗೂ ಆಗ್ತದ’ ಅಂತ ಕಾಡಸ್ತಿದ್ದೆ. ಹಂಗ ಇಕಿ ಇವತ್ತೂ ತಪ್ಪದ ಉಪವಾಸ-ಒಪ್ಪತ್ತ ಮಾಡ್ತಾಳ ಆದರ ಈಗ ಫರಾಳ ಚೇಂಜ್ ಆಗ್ಯಾವ. ಸಾಬುದಾಣಿ ಖೀಸ್ ಮುಂಜಾನೆ ಆದರ ಮಧ್ಯಾಹ್ನಕ್ಕ ಹಾಲಿನಾಗ ಕಲಸಿದ್ದ ಚಪಾತಿ ನಡಿತದ. ರಾತ್ರಿ ಹಣ್ಣು ಹಂಪಲದ ಜೊತಿ ಅಳ್ಳಿಟ್ಟ ಇದ್ದದ್ದ. ಒಮ್ಮೊಮ್ಮೆ ಉಳ್ಳಾಗಡ್ಡಿ ಇಲ್ಲದ ಸೇವಪುರಿ ನಡಿತದ. ಇನ್ನೊಂದ ಮಜಾ ಅಂದರ ಬರೇ ಉಪವಾಸದ್ದ ಫರಾಳ ಚೇಂಜ್ ಆಗಿದ್ದರ ಮಾತ ಬ್ಯಾರೆ ಇತ್ತ. ಆದರ ಇಕಿದ ಉಪವಾಸದ ಪದ್ಧತಿನೂ ಚೇಂಜ್ ಆಗ್ಯಾವ. ನಾ ತಿಂಗಳಿಗೆ ಒಂದ್ಯಾರಡ ಸಲಾ ಶನಿವಾರಕ್ಕೊಮ್ಮೆ ದೋಸ್ತರ ಜೊತಿ ವೀಕೆಂಡ್ ಅಂತ ಹೊಂಟರ, ಇಕಿ ‘ಅಯ್ಯ…ಫ್ಯಾಮಿಲಿಗೆ ವೀಕೆಂಡ್ ಇಲ್ಲಾ’ ಅಂತ ಕೇಳೋಕಿ. ನಾ ‘ಏ, ನೀ ಬಂದ ಏನ್ಮಾಡ್ತೀ? ನಿಂದ ಇವತ್ತ ಒಪ್ಪತ್ತಲಾ, ರಾತ್ರಿ ಊಟ ಇಲ್ಲಲಾ’ ಅಂತ ನಾ ಅಂದರ, ಅಕಿ ‘ಮೊದ್ಲ ಹೇಳಿದ್ದರ ನಾ ಮಧ್ಯಾಹ್ನನ ಫರಾಳ ತಿಂದ ರಾತ್ರಿ ಊಟಕ್ಕ ಬರ್ತಿದ್ದೆ’ ಅಂತ ಶುರು ಮಾಡಿದ್ಲು.

  ಈಗ ಅಂತು ಅಕಿ ಒಪ್ಪತ್ತ ಇದ್ದ ದಿವಸ ರಾತ್ರಿ ಎಲ್ಲೇರ ಪಾರ್ಟಿ ಅದನೋ ಹೆಂಗ ಅನ್ನೋದನ್ನ ಕನಫಮ್ರ್ ಮಾಡ್ಕೊಂಡ ಅದರ ಪ್ರಕಾರ ಒಪ್ಪತ್ತ ಮಾಡ್ತಾಳ. ರಾತ್ರಿ ಪಾರ್ಟಿ ಇದ್ದರ ಮಧ್ಯಾಹ್ನ ಫರಾಳ. ಮಧ್ಯಾಹ್ನ ಯಾವದರ ಮದ್ವಿ, ಮುಂಜವಿ ಇದ್ದರ ಅಲ್ಲಿ ಹೋಗಿ ಜಡದ ಬಂದ ರಾತ್ರಿ ಫರಾಳ. ಅಗದಿ ಫ್ಲೇಕ್ಸಿಬಲ್ ಒಪ್ಪತ್ತ ಮಾಡ್ತಾಳ ಬಿಡ್ರಿ. ಅಲ್ಲಾ ಹಂಗ ನೀವ ಏನರ ಅಕಿದ ಈ ಉಪವಾಸದ್ದ ಸ್ಟೋರಿ ಓದಿ ಒಂದ ಸಂಡೆ ಅಕ್ಷಯ ಪಾರ್ಕನಾಗ ಅಕಿ ಎಡಗೈಯಾಗ ಸೇವಪುರಿ, ಬಲಗೈಯಾಗ ಮಸಾಲಾಪುರಿ, ಬಾಯಾಗ ಪಾನಿಪುರಿ ಇಟಕೊಂಡ ನಿಂತಿದ್ದ ನೋಡಿ ಬಿಟ್ಟರ ಅಕಿ ಹಿಂದಿನ ದಿವಸ ಸಿರಿಯಸ್ ಆಗಿ ನಿರಾಹಾರ ಮಾಡಿರ್ತಾಳ ಇಲ್ಲಾ ಸಂಕಷ್ಟಿ, ಶನಿವಾರ ಎರೆಡೂ ಕಂಟಿನ್ಯೂ ಬಂದಿರ್ತಾವ ಅನ್ನೋದ ಗ್ಯಾರಂಟಿನ ಮತ್ತ.

  ಅಲ್ಲಾ ಅನ್ನಂಗ ಇವತ್ತ ಈ ವಿಷಯ ಬರಿಲಿಕ್ಕೆ ಕಾರಣ ಅಂದರ ನನ್ನ ಹೆಂಡ್ತಿ ನಿನ್ನೆ ಶಿವರಾತ್ರಿ ಜಾಗರಣಿ ಮತ್ತ ಉಪವಾಸ ಬ್ಯಾರೆ ಮಾಡಿದ್ಲು. ಅದರಾಗ ನಮ್ಮವ್ವ ಇತ್ತೀಚಿಗೆ ಇಕಿ ಒಪ್ಪತ್ತ-ಉಪವಾಸ ಮಾಡೋ ಪದ್ಧತಿ ನೋಡಿ ಮೊನ್ನೆನ

  ‘ಸೇವಪುರಿ, ಪಾನಿಪುರಿ ಶಿವರಾತ್ರಿಗೆ ಬರಂಗಿಲ್ಲಾ, ಬರೇ ಹಣ್ಣು ಹಾಲು ತೊಗೊಳೊದಿತ್ತಂದರ ಇಷ್ಟ ಉಪವಾಸ ಮಾಡ’ ಅಂತ ವಾರ್ನಿಂಗ ಕೊಟ್ಟಿದ್ಲು. ‘ಅಯ್ಯ..ನಂಗೇಲ್ಲಾ ತಿಳಿತದ ತೊಗೊರಿ’ ಅಂತ ಅಕಿ ನಿನ್ನೆ ತನ್ನ ತುಲಾಭಾರ ಮಾಡೋ ಅಷ್ಟ ಹಣ್ಣ ತಂದಿದ್ಲು.

  ಹಂಗ ಹಗಲ ಹೊತ್ತಿನಾಗ ಉಪವಾಸ ಮಾಡಿದ್ದರ ಕಥಿನ ಇಷ್ಟ ದೊಡ್ಡದ ಅದ, ಅದರಾಗ ನಿನ್ನೆ ಜಾಗರಣಿ ಬ್ಯಾರೆ, ಹಗಲಿಲ್ಲಾ ರಾತ್ರಿಲ್ಲಾ….ಫರಾಳ ಹೊಡದಿದ್ದ ಹೊಡದಿದ್ದ. ಇವತ್ತ ಮುಂಜಾನೆ ಕಸದ ಗಾಡಿಯಂವಾ ‘ನಿಮ್ಮ ಮನ್ಯಾಗ ಕಲ್ಲಂಗಡಿ ಬಳ್ಳಿ ಅದ ಏನ್ರಿ ಅಕ್ಕಾರ’ ಅಂತ ಕೇಳಿ ಹೋದಾ ಅಂದರ ನೀವ ವಿಚಾರ ಮಾಡ್ರಿ ನಿನ್ನೆ ಜಾಗರಣಿ ಹೆಂಗ ಆಗೇದ ಅಂತ. ಇರಲಿ ‘ಬಿಡ್ರಿಮಳಿ ಬಂದರ ಕೆಟ್ಟಲ್ಲಾ…ಮಡದಿ ಉಂಡರ ಕೆಟ್ಟಲ್ಲಾ’ ಅಂತಾರ. ಎಷ್ಟಂದರೂ ಖಾಸ ಹೆಂಡ್ತಿ, ಅಕಿ ಉಪವಾಸನರ ಮಾಡ್ಲಿ ಒಪ್ಪತ್ತರ ಮಾಡ್ಲಿ ಗಂಡಾ ಅಂದ ಮ್ಯಾಲೆ ಒಪ್ಪಾ ಇಟಗೋಳಿಲ್ಲಾ ಅಂದರ ಹೆಂಗ. ನಿಮಗೆಲ್ಲ ಮಹಾ-ಶಿವರಾತ್ರಿಯ ಶುಭಾಶಯಗಳು.

  (ಲೇಖಕರು ಹಾಸ್ಯ ಬರಹಗಾರರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts