More

    ಸಂಘಟಿತರಾಗಿ ಸರ್ಕಾರದ ಸವಲತ್ತು ಪಡೆಯಿರಿ

    ತಿ.ನರಸೀಪುರ: ಗ್ರಾಮೀಣ ವಲಯದ ಅಸಂಘಟಿತ ಕೂಲಿ ಕಾರ್ಮಿಕರು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳುವ ಸಂಘಟಿತರಾಗಬೇಕು ಎಂದು ಭಾರತ ಮಾತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸಿದ್ದರಾಜು ಸಲಹೆ ನೀಡಿದರು.

    ಪುರಸಭೆ ವ್ಯಾಪ್ತಿಯ ಹೆಳವರಹುಂಡಿ ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾಗಿರುವ ಭಾರತ್ ಮಾತಾ ಕಟ್ಟಡ ಕಾರ್ಮಿಕರ ಸಂಘದ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

    ಸರ್ಕಾರ ಶ್ರಮಿಕ ವರ್ಗದ ಜನರಿಗೆ ಹಲವು ಸವಲತ್ತುಗಳನ್ನು ನೀಡುತ್ತಿದ್ದು, ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ವಿಮೆ ಇನ್ನಿತರ ಸವಲತ್ತುಗಳನ್ನು ಪಡೆದುಕೊಳ್ಳಲು ಸಂಘಟಿತರಾಗುವ ಮೂಲಕ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವಂತೆ ಸಲಹೆ ನೀಡಿದರು.
    ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರ ಸಂಘ 5 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದೆ. ನೋಂದಾಯಿತ ಸಂಘದ ಸದಸ್ಯರಿಗೆ ಹೋರಾಟದ ಮೂಲಕ ಸರ್ಕಾರದಿಂದ ದೊರಕಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

    ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್ ನೀಡುವ ಭರವಸೆ ನೀಡಿ 3 ತಿಂಗಳು ಸೌಲಭ್ಯ ಕಲ್ಪಿಸಿ ನಂತರ ಬಸ್ ಪಾಸ್ ಸೌಲಭ್ಯಕ್ಕೆ ಕತ್ತರಿ ಹಾಕಿದೆ. ಸರ್ಕಾರದ ನಿರ್ಧಾರದಿಂದ ದೂರದ ಊರುಗಳಿಗೆ ತೆರಳುವ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.

    ಕಟ್ಟಡ ಕಾರ್ಮಿಕರ ಕಾರ್ಡ್‌ಗಳು ಇಂದು ಉಳ್ಳವರ ಪಾಲಾಗುತ್ತಿವೆ. ಬಡ್ಡಿ ವ್ಯವಹಾರ ಮಾಡುವ, ಜಮೀನು ಹೊಂದಿರುವ, ಮನೆಯಲ್ಲೇ ಕುಲಿತು ನೇಯ್ಗೆ ಮಾಡುವವರು ಕಾರ್ಮಿಕರ ಕಾರ್ಡ್‌ಗಳನ್ನು ಮಾಡಿಸಿಕೊಂಡು ನೈಜ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಇದರಿಂದ ನಿಜವಾದ ಕಟ್ಟಡ ಕಾರ್ಮಿಕರಿಗೆ ನಷ್ಟ ಉಂಟಾಗಿದ್ದು, ಈ ಬಗ್ಗೆ ದೊಡ್ಡ ಮಟ್ಟದ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಕೆಲಸ ಮಾಡಬೇಕಿದೆ ಎಂದರು.

    ಈ ಬಾರಿಯ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು, ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಯಾವುದೇ ಯೋಜನೆ ರೂಪಿಸಿಲ್ಲ. ನಮ್ಮನ್ನು ಕೇವಲ ಓಟ್ ಬ್ಯಾಂಕ್‌ಗಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ಹಿಂದೆ 5 ಸಾವಿರ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಈಗ 1500 ರೂ.ಗಳಿಗೆ ಇಳಿಸಿದ್ದಾರೆ. ಬಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಸರ್ಕಾರದ ಬಳಿ ಹಣ ಇಲ್ಲವೇ ಎಂದು ಪ್ರಶ್ನಿಸಿದರು.

    ಸರ್ಕಾರ ನಾವು ಕೇಳದಿದ್ದರೇ ಯಾವುದೇ ಸೌಲಭ್ಯಗಳನ್ನು ನೀಡುವುದಿಲ್ಲ. ಬದಲಿಗೆ ನೀಡುತ್ತಿರುವ ಸೌಲಭ್ಯಗಳನ್ನು ಮೊಟಕು ಗೊಳಿಸುತ್ತದೆ. ಆದ್ದರಿಂದ ಸಂಘಟಿತರಾಗಿ ಸರ್ಕಾರವನ್ನು ಪ್ರಶ್ನೆ ಮಾಡುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

    ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಅಧ್ಯಕ್ಷೆ ರುಕ್ಮಿಣಿ ಮಾತನಾಡಿ, ಕಾರ್ಮಿಕರು ಸಂಘಟಿತರಾದಾಗ ಮಾತ್ರವೇ ಸರ್ಕಾರದಿಂದ ದೊರಕಬಹುದಾದ ಸವಲತ್ತು ಪಡೆಯಲು ಸಾಧ್ಯ. ದೇಶದಲ್ಲಿ ದುಡಿಯುವ ವರ್ಗ ಶೇ.75ರಷ್ಟಿದ್ದರೆ, ಶ್ರೀಮಂತ ವರ್ಗ ಶೇ.25 ರಷ್ಟಿದೆ. ದುಡಿಯುವ ವರ್ಗ ಬಿಡಿ ಯಾಗಿರುವುದರಿಂದ ನಮ್ಮ ಶಕ್ತಿ ಅನಾವರಣವಾಗುತ್ತಿಲ್ಲ. ಕಾರ್ಮಿಕರು ಒಗ್ಗಟ್ಟಾದರೇ ದೇಶವನ್ನೇ ಆಳುವಷ್ಟು ಶಕ್ತಿ ಬರಲಿದೆ ಎಂದರು.

    ಮುಡುಕನಪುರ ಮಠದ ಶ್ರೀ ಷಡಕ್ಷರಿ ದೇಶೀಕೇಂದ್ರ ಸ್ವಾಮೀಜಿ, ಹಂಚ್ಯ ಶ್ರೀನಿವಾಸ್, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ರಾಜೇಶ್, ಅಶ್ವತ್ಥ್ ಮರಿಗೌಡ, ಶಿವಣ್ಣ, ಗೋವಿಂದರಾಜು, ಮಂಜುನಾಥ್, ದೊಡ್ಡರಾಜು, ಡ್ಯಾನ್ಸ್ ಬಸವರಾಜು, ಮಹೇಶ್(ಗುಂಡು), ಉಪನ್ಯಾಸಕ ಕುಮಾರಸ್ವಾಮಿ, ಶೃತಿ, ಸುಕನ್ಯಾ, ರೇಖಾ, ಶೋಭಾ, ಜಗದೀಶ್, ಶಂಕರ್, ತಲಕಾಡು ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts