More

    ಧ್ರುವತಾರೆಯಾದ ಸುಪ್ರಭಾತದ ಸಂತ !

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಸಗರನಾಡಿನ ಸಾಹಿತ್ಯ ಸೌರಭವನ್ನು ಉತ್ತುಂಗದ ಶಿಖರಕ್ಕೇರಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ ಕೀರ್ತಿ ಹಿರಿಯ ಸಾಹಿತಿ ಎ.ಕೃಷ್ಣ ಅವರಿಗೆ ಸಲ್ಲುತ್ತದೆ.

    ಸುರಪುರದ ಸಂಸ್ಕೃತ ವಿದ್ವತ್ ಪರಂಪರೆಯ ಪ್ರಸಿದ್ಧ ಬ್ರಾಹ್ಮಣ ಮನೆತನದಲ್ಲಿ 1941ರ ಮೇ 8ರಂದು ರಾಮಾಚಾರ್ಯ-ಕಮಲಾಬಾಯಿ ದಂಪತಿ ಉದರದಲ್ಲಿ ಜನಿಸಿದ ಕೃಷ್ಣ, ನೋಡಲು ಕುಳ್ಳನೆಯ ವ್ಯಕ್ತಿ. ಆದರೆ ದೈತ್ಯ ಪ್ರತಿಭೆ ಹೊಂದಿದವರು. ಗಾಯತ್ರಿ ಮಂತ್ರದ ಮೇಲೆ ಹೊಸ ವ್ಯಾಖ್ಯಾನ ಬರೆದ ಅವರು, 14ನೇ ವಯಸ್ಸಿನಲ್ಲೇ ಶ್ರೀಮಚ್ಛಂದ್ರಲಾಂಬಾ ಅಣುಪುರಾಣವೆಂಬ ಚೆಂಪು ಮಹಾಕಾವ್ಯ ರಚಿಸಿದ್ದರು.

    ವಿದ್ವಾಂಸರ ಪರಿಸರದಲ್ಲಿ ಅತ್ಯಂತ ಆಸಕ್ತಿಯಿಂದ ಬೆಳೆದ ಎ.ಕೃಷ್ಣ ಅವರು ಅಂದಿನ ಟಿಸಿಎಚ್ ಹಾಗೂ ಕನ್ನಡರತ್ನ ಪರೀಕ್ಷೆಗಳಲ್ಲಿ ಉರ್ತೀಣರಾಗಿ ಪವಿತ್ರವಾದ ಶಿಕ್ಷಕ ವೃತ್ತಿಗೆ ಪದಾರ್ಪಣೆ ಮಾಡಿದರು. ವೃತ್ತಿ ಜತೆಗೆ ವರಕವಿ ದ.ರಾ.ಬೇಂದ್ರೆ ಅವರಿಂದ ಪ್ರಭಾವಿತರಾಗಿ ಕಾವ್ಯದ ಗುಂಗು ಪಡೆದು ಶಬ್ದ ಗಾರುಡಿಗನ ನೆರಳಾದರು. ಅಂತಲೇ ಕೃಷ್ಣ ಅವರನ್ನು ಕಲ್ಯಾಣ ಕರ್ನಾಟಕದ ಬೇಂದ್ರೆ ಎಂದೂ ಕರೆಯಲಾಗುತ್ತದೆ. ಹಿಮಾಲಯದಲ್ಲಿ ತಿರುಗಾಡಿ, ಕೇದಾರ ಮಠದಲ್ಲಿದ್ದು ಅಲ್ಲಿನ ಮಹಿಮೆಯನ್ನು ತಮ್ಮದೇ ಆದ ಶೈಲಿಯಲ್ಲಿ ವಿಶ್ಲೇಷಿಸಿದ ಪ್ರತಿಭಾವಂತರು.

    ಚಿಕ್ಕಂದಿನಲ್ಲಿ ತಾಯಿ ಪ್ರೀತಿಯಿಂದ ವಂಚಿತರಾಗಿ ಅಜ್ಜ ಮಾರ್ಕಂಡೇಯ ಪಂಡಿತರಿಂದ ವಿದ್ಯೆಯನ್ನು ಬಳುವಳಿಯಾಗಿ ಪಡೆದ ಕೃಷ್ಣ ಅವರ ಇನ್ನೊಂದು ಮಹತ್ವದ ಸಾಧನೆ ಎಂದರೆ ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿಯನ್ನು ಉತ್ಕೃಷ್ಟ ರೀತಿಯಲ್ಲಿ ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಅವರದ್ದು.

    ಕಾಲಜ್ಞಾನ, ಕಾವ್ಯ ಜ್ಞಾನವನ್ನು ಮೇಳವಿಸಿದ ಕವಿ ಕೃಷ್ಣ, ಸಗರನಾಡು ದರ್ಶನವನ್ನು 1985ರಲ್ಲಿ ಸಂಪಾದಿಸಿ ಇಲ್ಲಿನ ಸಾಹಿತ್ಯ ನೆಲ-ಜಲದ ಪರಿಚಯ ಮಾಡಿಸಿದ್ದಾರೆ. ಯಾರೂ ತುಳಿಯದ ದುರ್ಗಮ ಮಾರ್ಗ ಅನುಸರಿಸುವ, ಮುರಿದು ಕಟ್ಟುವ ಕೆಲಸ ಇವರಿಗೆ ತುಂಬ ಇಷ್ಟವಾಗಿತ್ತು. ಪ್ರಸಿದ್ಧ ಕವಿ ತನ್ಹಾ ತಿಮ್ಮಾಪುರಿ ಗಜಲ್ನಲ್ಲಿ ಹೇಗೆ ಪ್ರಸಿದ್ಧಿಯೋ ಕೃಷ್ಣ ಅವರು ನವೋದಯ ಕಾವ್ಯಕ್ಕೆ ಪ್ರಸಿದ್ಧರು.

    ಕಂದಪದ್ಯ, ಚಂಪುಕಾವ್ಯ, ಷಟ್ಪದಿ, ರಗಳೆ, ನವೋದಯ, ನವ್ಯ ಬಂಡಾಯದವರೆಗೆ ಸಾಗಿದೆ ಇವರ ರಥ. ಗಾಯತ್ರಿ ಮಂತ್ರದ ಮೇಲಿನ ಹೊಸ ಅವಿಷ್ಕಾರ ಇವರ ಮಹತ್ಸಾಧನೆ. ಇದಕ್ಕಾಗಿ ಇವರು ವೇದ ಸೌರಭದ ಪ್ರಶಸ್ತಿಯನ್ನೂ ಪಡೆದಿದ್ದರು. ಅಧ್ಯಾತ್ಮದ ಔನ್ನತ್ಯಕ್ಕೆ ಏರಿದ್ದ ನಯ-ವಿನಯ, ಸರಳತೆಯ ಸಾಕಾರ ಮೂತರ್ಿಯಾಗಿದ್ದ ಅವರು, ಕರುಣ ಕಿರೀಟ, ಸಂತ ಹೃದಯದ ಶ್ರೀಮಂತ ನುಡಿಗಳು, ಗಾನಗಂಧರ್ವ ಸುರಪುರದ ಆನಂದದಾಸರು, ಸುಪ್ರಭಾತಗಳು, ಹಾಲೋಕುಳಿ, ಅನಂತಗಿರಿ ಮಹಾತ್ಮೆ, ಚಂದ್ರಗಂಗಾ ಮೊದಲಾದ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡಮಾಡಿದ್ದಾರೆ.

    ಎದೆಗಡಲ ಮುತ್ತುಗಳು ಇವರ ಶ್ರೇಷ್ಠ ಕವನ ಸಂಕಲನ. ಪ್ರಶಸ್ತಿ, ಗೌರವ ಸನ್ಮಾನಗಳು ಇವರನ್ನು ಅರಸಿ ಬಂದಿವೆ. ಕೃಷ್ಣ ಅವರು ತಮ್ಮ ಮನೆ ಮುಂದಿನ ಅಶ್ವತ್ಥ ವೃಕ್ಷದ ಪುಣ್ಯಾಶ್ರಮದಲ್ಲಿ ಅಚಲವಾದ ನಂಬಿಕೆಯಿತ್ತ ಸಾಹಿತ್ಯ ಸಂತ. 1976ರಲ್ಲಿ ಸುರಪುರದಲ್ಲಿ ಮಹಾಕವಿ ವಾಚನ ಸಂಘ ಆರಂಭಿಸಿ ವೈವಿಧ್ಯಮಯ 30 ಶ್ರೇಷ್ಠ ಕೃತಿಗಳನ್ನು ನಾಡಿಗೆ ಸಮರ್ಪಿಸಿದ್ದಾರೆ.

    ಸ್ವಯಂಸಿದ್ಧ ಕಾವ್ಯ, ಕೌಶಲ್ಯ ಕವಿತ್ವವನ್ನು ಕರಗತ ಮಾಡಿಕೊಂಡಿದ್ದ ಕೃಷ್ಣ ಅವರದ್ದು ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂಥ ವ್ಯಕ್ತಿತ್ವ. ಹಣ್ಣು ತುಂಬಿದಿ ಬಾಳೆಯ ಗೊನೆ ಸದಾ ಬಾಗಿರುವಂತೆ ಇವರ ವ್ಯಕ್ತಿತ್ವವೂ ಹಾಗೆ ಎಂದು ಕೃಷ್ಣರ ಗರಡಿಯಲ್ಲಿ ಬೆಳೆದ ನಾಡಿನ ಖ್ಯಾತ ಸಂಶೋಧಕ ಡಿ.ಎನ್. ಅಕ್ಕಿ ಸ್ಮರಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts