More

    ಗಾಯತ್ರಿ ದರ್ಶನ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧ

    ಯಲ್ಲಾಪುರ: ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿವಾಹ, ಉಪನಯನ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಕ್ಷಗಾನ, ತಾಳಮದ್ದಲೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಟ್ರೆಂಡ್ ಆರಂಭವಾಗಿದೆ.

    ಗಾಯತ್ರಿ ದರ್ಶನ ಯಕ್ಷಗಾನ ಪ್ರಸಂಗ

    ಇಂತಹ ಕಾರ್ಯಕ್ರಮಗಳಲ್ಲಿ ಯಾವುದೋ ಪ್ರಸಂಗಗಳ ಪ್ರದರ್ಶನಕ್ಕಿಂತ, ವಿವಾಹ, ಉಪನಯನ ಸಂಸ್ಕಾರಗಳ ಮಹತ್ವ ಸಾರುವ, ಧಾರ್ಮಿಕ ಸಂದೇಶಗಳನ್ನು ನೀಡುವ ಪ್ರಸಂಗಗಳು ಪ್ರಸ್ತುತಗೊಂಡರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

    ಆ ನಿಟ್ಟಿನಲ್ಲಿ ಉಪನಯನದ ಸಂದರ್ಭದಲ್ಲಿ ಉಪದೇಶಿಸುವ ಗಾಯತ್ರಿ ಮಂತ್ರದ ಮಹತ್ವ ಸಾರುವ ‘ಗಾಯತ್ರಿ ದರ್ಶನ’ ಎಂಬ ಪ್ರಸಂಗವೊಂದನ್ನು ಪ್ರಸಿದ್ಧ ಭಾಗವತ ಅನಂತ ಹೆಗಡೆ ದಂತಳಿಗೆ ರಚಿಸಿದ್ದಾರೆ.

    ಗಾಯತ್ರಿ ಮಂತ್ರದ ಮಹತ್ವ ಸಾರುವ ’ಗಾಯತ್ರಿ ಮಹಿಮೆ’ ಎಂಬ ಪ್ರಸಂಗ ತೆಂಕಿನಲ್ಲಿ ಇದ್ದರೂ, ಅದು ಸುದೀರ್ಘವಾಗಿದೆ.
    ಬಡಗಿನಲ್ಲಿ ಅಂತಹ ಪ್ರಸಂಗಗಳ ಲಭ್ಯತೆ ಇಲ್ಲದ ಕಾರಣ, ಗಾಯತ್ರಿ ಮಂತ್ರ ಮಹಿಮೆಯನ್ನು ಸಮಯಮಿತಿಯಲ್ಲಿ ಸಾರುವ, ತಾಳಮದ್ದಲೆಗೆ ಅನುಕೂಲವಾಗುವ ಪ್ರಸಂಗವನ್ನು ಅನಂತ ಹೆಗಡೆ ರಚಿಸಿದ್ದಾರೆ.

    ಉಪನಯನ, ಗಾಯತ್ರಿ ಹವನ, ಗಾಯತ್ರಿ ಪುನಶ್ಚರಣೆಯಂತಹ ಕಾರ್ಯಕ್ರಮಗಳಲ್ಲಿ ಗಾಯತ್ರಿ ಮಂತ್ರದ ಮಹತ್ವವನ್ನು ತಾಳಮದ್ದಲೆಯ ಮೂಲಕ ತಿಳಿಸಲು ಈ ಪ್ರಸಂಗ ಸಹಕಾರಿಯಾಗಲಿದೆ.

    ಮಹಾಬ್ರಾಹ್ಮಣ ಕೃತಿ ಆಧಾರ

    ದೇವುಡು ನರಸಿಂಹ ಶಾಸ್ತ್ರಿ ಅವರ ಮಹಾಬ್ರಾಹ್ಮಣ ಕೃತಿಯನ್ನು ಆಧಾರವಾಗಿಟ್ಟುಕೊಂಡು, ಪ್ರಸಂಗ ರಚನೆ ಮಾಡಿದ್ದಾರೆ. ವಿಶ್ಚಾಮಿತ್ರ, ವಸಿಷ್ಠ, ಬ್ರಹಸ್ಪತಿ, ಪೂಷ ಹಾಗೂ ಗಾಯತ್ರಿ ದೇವಿ ಪಾತ್ರಗಳಿವೆ.

    ಯಕ್ಷಗಾನ ತಾಳ ಮದ್ದಳೆ ಪ್ರಥಮ ಪ್ರಯೋಗ ನಾಳೆ

    ಇದರ ಪ್ರಥಮ ಪ್ರಯೋಗ ಮೇ 24 ರಂದು ಸಂಜೆ 7.30 ಕ್ಕೆ ಚಂದಗುಳಿಯ ಸಿದ್ಧಿವಿನಾಯಕ ಸಭಾಭವನದಲ್ಲಿ ಪ್ರಸಿದ್ಧ ಕಲಾವಿದರಿಂದ ನಡೆಯಲಿದೆ.

    ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ, ಅನಂತ ಹೆಗಡೆ, ಮದ್ದಲೆವಾದಕರಾಗಿ ಎ.ಪಿ.ಪಾಠಕ, ನರಸಿಂಹ ಭಟ್ಟ ಹಂಡ್ರಮನೆ ಭಾಗವಹಿಸಲಿದ್ದಾರೆ.

    ವಿದ್ಯಾವಾಚಸ್ಪತಿ ವಿದ್ವಾನ್ ಉಮಾಕಾಂತ ಭಟ್ಟ, ವಾಸುದೇವ ರಂಗ ಭಟ್ಟ, ವಿದ್ವಾನ್ ಗಣಪತಿ ಭಟ್ಟ ಸಂಕದಗುಂಡಿ, ಡಾ. ಮಹೇಶ ಭಟ್ಟ ಇಡಗುಂದಿ, ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ ಅರ್ಥಧಾರಿಗಳಾಗಿ ಭಾಗವಹಿಸುವರು.

    ಮೂರನೇ ಯಕ್ಷಗಾನ ಪ್ರಸಂಗ

    ಗಾಯತ್ರಿ ದರ್ಶನ ಅನಂತ ಹೆಗಡೆ ಅವರು ರಚಿಸಿದ ಮೂರನೇ ಪ್ರಸಂಗವಾಗಿದ್ದು, ಈಗಾಗಲೇ ಶ್ರೀರಾಮ ದರ್ಶನ ಹಾಗೂ ಪುರುಷಮೃಗ ಎಂಬ ಎರಡು ಪ್ರಸಂಗಗಳು ಬಿಡುಗಡೆಗೊಂಡು, ಪ್ರದರ್ಶನ ಕಂಡಿವೆ.

    ಅನಂತ ಹೆಗಡೆ ದಂತಳಿಗೆ ಅವರು ಕಳೆದ ಎರಡು ದಶಕಗಳಿಂದ ಯಕ್ಷಗಾನ ಭಾಗವತರಾಗಿ, ಯಕ್ಷಗುರುವಾಗಿ ಕಲಾ ಸೇವೆ ಮಾಡುತ್ತಿದ್ದಾರೆ.

    ಇಡಗುಂಜಿ ಮೇಳದ ಭಾಗವತರಾಗಿರುವ ಇವರು, ಯಕ್ಷಗಾನದ ಸಾಂಪ್ರದಾಯಿಕ ಶೈಲಿಯ ಭಾಗವತಿಕೆಯಲ್ಲಿ ಪ್ರಸಿದ್ಧಿ ಹೊಂದಿದ್ದಾರೆ.

    ಇವರ ಕಲಾ ಸೇವೆಗೆ ಬಿಸ್ಮಿಲ್ಲಾ ಖಾನ್ ರಾಷ್ಟ್ರೀಯ ಯುವ ಪುರಸ್ಕಾರ ಲಭಿಸಿದೆ. ಅಪರೂಪದ ಪೌರಾಣಿಕ ಸನ್ನಿವೇಶಗಳನ್ನು ಯಕ್ಷಗಾನ ಪ್ರಸಂಗಕ್ಕೆ ಇಳಿಸುವ ಮೂಲಕ ಪ್ರಸಂಗಕರ್ತರಾಗಿಯೂ ಗಟ್ಟಿಯಾದ ಹೆಜ್ಜೆ ಇಡುತ್ತಿದ್ದಾರೆ.

    ಗಾಯತ್ರಿ ದರ್ಶನ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧ

    ದೇವುಡು ನರಸಿಂಹಶಾಸ್ತ್ರಿಗಳ ಕೃತಿಯನ್ನು ಆಧರಿಸಿ, ಈ ಪ್ರಸಂಗ ರಚಿಸಿದ್ದೇನೆ. ಗಾಯತ್ರಿ ಉಪಾಸನೆ, ಉಪನಯನದಂತಹ ಕಾರ್ಯಕ್ರಮಗಳಲ್ಲಿ ಶೃದ್ಧೆಯ ಪ್ರೇಕ್ಷಕರಿಗೆ ಗಾಯತ್ರಿ ಮಂತ್ರ ಮಹತ್ವ ತಿಳಿಸಲು ಈ ಪ್ರಸಂಗ ಸಹಕಾರಿಯಾಗಲೆಂಬ ಆಶಯ ನನ್ನದು.
    ಅನಂತ ಹೆಗಡೆ ದಂತಳಿಗೆ, ಪ್ರಸಂಗಕರ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts