More

    ಗಂಗಾವತಿ ಸಣಾಪುರದಲ್ಲಿ ವಿದೇಶಿಗರಿಂದ ಆಚರಣೆ

    ಗಂಗಾವತಿ: ಹೋಳಿ ನಿಮಿತ್ತ ನಗರ ಮತ್ತು ತಾಲೂಕುದಾದ್ಯಂತ ಓಕುಳಿಯಾಟ ವಿಜೃಂಭಣೆಯಿಂದ ಬುಧವಾರ ಜರುಗಿದ್ದು, ಬಣ್ಣದ ಗಡಿಗೆ ಒಡೆದು ಸಂಭ್ರಮಿಸಿದರು.
    ಸಾಂಪ್ರದಾಯದಂತೆ ಹೋಳಿ ಹುಣ್ಣಿಮೆ ಮಧ್ಯರಾತ್ರಿಯಂದು ನಗರದ ಶ್ರೀನೀಲಕಂಠೇಶ್ವರ ದೇವಾಲಯ ಮತ್ತು ಗಣೇಶ ವೃತ್ತದ ಬಳಿ ಕಾಮದಹನ ನೆರವೇರಿಸಲಾಯಿತು. ಬನ್ನಿಗಿಡದ ಕ್ಯಾಂಪ್, ಓಎಸ್‌ಬಿ ರಸ್ತೆ, ವಿರೂಪಾಪುರ ತಾಂಡದ ಬಳಿ ಡಿಜೆ ಹಾಡಿಗೆ ಹೆಜ್ಜೆ ಹಾಕಿದರು. ಬಣ್ಣದ ಗಡಿಗೆ ಒಡೆದು, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ವಿಪ್ರ, ಜೈನ್ ಸೇರಿ ವಿವಿಧ ಸಮುದಾಯದವರು ಗುಂಪು ಕಟ್ಟಿಕೊಂಡು ಬಣ್ಣ ಎರಚಾಡಿದ್ದು, ಈ ಬಾರಿ ಮಹಿಳೆಯರೇ ಹೆಚ್ಚು ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದರು. ಒಎಸ್‌ಬಿ ರಸ್ತೆ ಬಳಿ ತಾಂದಳೆ ಕುಟುಂಬದವರು ಅಯೋಜಿಸಿದ್ದ ಬಣ್ಣದ ಗಡಿಗೆ ಒಡೆಯುವ ಸಂದರ್ಭದಲ್ಲಿ ಕೆಲ ಯುವಕರು ಗದ್ದಲ ನಡೆಸಿದರು. ಪರಿಸ್ಥಿತಿ ತಿಳಿದ ನಗರ ಠಾಣೆ ಪಿಐ ಅಡಿವೆಪ್ಪ ಗುದಿಗೊಪ್ಪ ನೇತೃತ್ವದ ಪೊಲೀಸರು ಆಗಮಿಸಿ, ಲಾಠಿಯಿಂದ ಗಡಿಗೆ ಒಡೆಯುವ ಮೂಲಕ ಓಕುಳಿಯಾಟಕ್ಕೆ ತೆರೆ ಎಳೆದರು. ಸೈಲೆನ್ಸ್‌ರ್ ಬಿಚ್ಚಿದ ಬೈಕ್‌ನಲ್ಲಿ ಯುವಕರು ಯರ‌್ರಾಬಿರ‌್ರಿ ಸಂಚರಿಸಿದ್ದರೂ, ಪೊಲೀಸರು ಅಸಹಾಯಕರಾಗಿದ್ದರು. ತಾಲೂಕಿನ ಆನೆಗೊಂದಿ, ಪಂಪಾಸರೋವರ, ಹನುಮನಹಳ್ಳಿ, ಚಿಕ್ಕಜಂತಕಲ್, ಸಣಾಪುರದ ಬಳಿ ತುಂಗಭದ್ರ ನದಿ, ಎಡದಂಡೆ ಕಾಲುವೆ ಬಳಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು.
    ವಿದೇಶಿಗರ ಸಂಭ್ರಮ: ಹೋಳಿ ಹಬ್ಬದ ನಿಮಿತ್ತ ಹಂಪಿ ಮತ್ತು ಆನೆಗೊಂದಿ ವೀಕ್ಷಣೆಗೆ ಬಂದ ವಿದೇಶಿ ಪ್ರವಾಸಿಗರು ಸಣಾಪುರದಲ್ಲಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದು, ದಾರಿಯುದ್ದಕ್ಕೂ ಬಣ್ಣದೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಡಿಜೆ ಹಾಡಿಗೆ ಹೆಜ್ಜೆ ಹಾಕಿದರಲ್ಲದೇ, ಹೋಳಿ ಸಂಪ್ರದಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
    ವಿವಿಧೆಡೆ ಸಂಭ್ರಮ: ನಗರದ ಈದ್ಗಾ ಕಾಲನಿಯ ಪ್ರತಿಭಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹೋಳಿ ಹಬ್ಬದ ನಿಮಿತ್ತ ಬಣ್ಣ ಗಡಿಗೆ ಒಡೆಯಲಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಅಧ್ಯಕ್ಷೆ, ಪುಟ್ಟಮ್ಮ ಗಿಡ್ಡಿ ಕಾರ್ಯದರ್ಶಿ ಅರುಣ ಎಚ್ ಗಿಡ್ಡಿ, ಮುಖ್ಯ ಶಿಕ್ಷಕ ಕೆಂಚಪ್ಪ ಮಾಳಮ್ಮನವರ್, ಶಿಕ್ಷಕರಾದ ಶಿವಪ್ರಕಾಶ, ಮಂಜುನಾಥ, ಶ್ರೀದೇವಿ, ಶಿವಲೀಲಾ, ಎಲ್. ಲಕ್ಷ್ಮೀ, ಬಿ.ಜ್ಯೋತಿ, ಜಯಶ್ರೀ ಇತರರಿದ್ದರು. ನಗರದ ಅಕ್ಷರ ಪಬ್ಲಿಕ್ ಸ್ಕೂಲ್‌ನಲ್ಲಿ ಹೋಳಿ ಹಬ್ಬದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು. ನೈಸರ್ಗಿಕ ಬಣ್ಣಗಳು ಮತ್ತು ಉಪಯೋಗದ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು. ಮುಖ್ಯಸ್ಥ ರವಿಚೇತನರೆಡ್ಡಿ, ಮುಖ್ಯಶಿಕ್ಷಕಿ, ಹಿಮಾಸತ್ತಿ, ಶಿಕ್ಷಕರಾದ ಮೋಜೆಸ್ ಪಾಲ್, ವಿಜಯಲಕ್ಷ್ಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts