More

    ಗಾಂಧಿಗ್ರಾಮಗಳಿಗೆ ‘ಪುರಸ್ಕಾರ’ ಸಿಗುವುದೇ ?

    ಹೀರಾನಾಯ್ಕ ಟಿ. ವಿಜಯಪುರ

    ಗಾಂಧಿ ಜಯಂತಿ ಹಿನ್ನೆಲೆ ಪ್ರತಿ ವರ್ಷ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪ್ರತಿ ತಾಲೂಕಿನ ಒಂದು ಗ್ರಾಪಂ ಆಯ್ಕೆ ಮಾಡಿ 5 ಲಕ್ಷ ರೂ. ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸುತ್ತಿತ್ತು. ಆದರೆ, ಈ ಬಾರಿ ಕರೊನಾ ಮಹಾಮಾರಿಯಿಂದಾಗಿ ಬಹುಮಾನ ಹಾಗೂ ಪ್ರಶಸ್ತಿ ವಿತರಣೆಗಾಗಿ ಸಮಾರಂಭ ಏರ್ಪಡಿಸುವ ಬಗ್ಗೆ ಸರ್ಕಾರದಿಂದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಇನ್ನೂ ಮಾಹಿತಿ ಬಂದಿಲ್ಲ.
    ಪ್ರತಿವರ್ಷವೂ ಆಯ್ಕೆಯಾದ ಗಾಂಧಿ ಗ್ರಾಮಗಳಿಗೆ ಸರ್ಕಾರ ನೀಡುವ ಹಣ ಮೂಲ ಸೌಲಭ್ಯಗಳಿಗೆ ನೆರವಾಗುತ್ತಿತ್ತು. ಆದರೆ ಈ ಬಾರಿ ಸರ್ಕಾರ ಬಹುಮಾನ ವಿತರಿಸುವ ಬಗ್ಗೆ ಕೈಗೊಳ್ಳಲಿರುವ ನಿರ್ಧಾರದತ್ತ ಗ್ರಾಪಂಗಳ ಅಧಿಕಾರಿಗಳು ಚಿತ್ತ ಹರಿಸಿದ್ದಾರೆ.

    ಆಯ್ಕೆ ನಡೆದಿದ್ದು ಹೇಗೆ?

    ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಗ್ರಾಪಂಗಳಿಗೆ ಸರ್ಕಾರದಿಂದ ಮಾರ್ಗದರ್ಶಿಯನ್ನು ರೂಪಿಸಲಾಗಿದೆ. 100 ಅಂಕಗಳ ಪ್ರಶ್ನಾವಳಿ ಕೇಳಲಾಗಿರುತ್ತದೆ. ಅದರಲ್ಲಿ ಹಣಕಾಸಿನ ನಿರ್ವಹಣೆ, 14ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನದ ಬಳಕೆ, ವಿವಿಧ ಯೋಜನೆಗಳಲ್ಲಿ ಬಂದ ಅನುದಾನ ಬಳಕೆ, ಜಮಾಬಂಧಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ ಯೋಜನೆ ಸದ್ಬಳಕೆ, ಮೂಲ ಸೌಕರ್ಯಗಳ ವಿಭಾಗದಲ್ಲಿ ಕುಡಿಯುವ ನೀರು ಪೂರೈಕೆ, ಬೀದಿ ದೀಪ ಅಳವಡಿಕೆ, ವಸತಿ ಯೋಜನೆ ಅನುಷ್ಠಾನ, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ನಮ್ಮ ಗ್ರಾಮ ಯೋಜನೆ ಅನುಷ್ಠಾನ, ವಾರ್ಡ್ ಅಥವಾ ಗ್ರಾಮಸಭೆಗಳು, ಸ್ಥಾಯಿ ಸಮಿತಿ ಸಭೆ, ಸಕಾಲ ಸೇವೆಗಳು, ಮಾಹಿತಿ ಹಕ್ಕು ಅಧಿನಿಯಮ ನಿರ್ವಹಣೆ, ಗ್ರಾ.ಪಂ. ಹಣಕಾಸು ನಿರ್ವಹಣೆ, ಆಸ್ತಿಗಳ ನಿರ್ವಹಣೆ, ಸಿಬ್ಬಂದಿ ವಿಷಯ ನಿರ್ವಹಣೆ ಹೀಗೆ ವಿವಿಧ ವಿಭಾಗಗಳಲ್ಲಿ 100 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಅದರಲ್ಲಿ ಹೆಚ್ಚು ಅಂಕ ಪಡೆದ ಗ್ರಾಪಂಗಳನ್ನು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ.

    ಜಿಲ್ಲೆಯಲ್ಲಿ ಆಯ್ಕೆಯಾದ ಗ್ರಾಪಂಗಳು

    ವಿಜಯಪುರ-ಹಿಟ್ನಳ್ಳಿ , ತಿಕೋಟಾ-ಬಿಜ್ಜರಗಿ, ಬಬಲೇಶ್ವರ-ನಿಡೋಣಿ, ಬ.ಬಾಗೇವಾಡಿ- ಕುದುರೆ ಸಾಲವಾಡಗಿ, ಚಡಚಣ- ಬರಡೋಲ, ತಾಳಿಕೋಟೆ-ಬ.ಸಾಲವಾಡಗಿ, ಮುದ್ದೇಬಿಹಾಳ-ರೂಡಗಿ, ನಿಡಗುಂದಿ-ಬೇನಾಳ ಆರ್.ಸಿ., ಕೊಲ್ಹಾರ-ಕೂಡಗಿ, ಸಿಂದಗಿ- ಚಾಂದಕವಟೆ, ದೇವರ ಹಿಪ್ಪರಗಿ-ಕೊಂಡಗುಳಿ, ಇಂಡಿ- ಚೌಡಿಹಾಳ ಗ್ರಾಪಂಗಳು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

    ಜಿಲ್ಲೆಯಲ್ಲಿ 12 ಗ್ರಾಪಂಗಳನ್ನು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರತಿವರ್ಷ ಆಯ್ಕೆಯಾದ ಗ್ರಾಪಂಗಳಿಗೆ ಸರ್ಕಾರದಿಂದ ಐದು ಲಕ್ಷ ರೂ. ಪುರಸ್ಕಾರ ನೀಡಿ ಗೌರವಿಸಲಾಗುತ್ತಿತ್ತು. ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಬಹುಮಾನ ನೀಡುವ ಕುರಿತು ಇನ್ನೂ ಯಾವುದೇ ಮಾಹಿತಿ ಬಂದಿಲ್ಲ.
    ಗೋವಿಂದರೆಡ್ಡಿ, ಜಿಪಂ ಸಿಇಒ

    ಎರಡು ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡ ನಂತರ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕೆರೆ ಅಭಿವೃದ್ಧಿ, ನರೇಗಾ ಯೋಜನೆಯಡಿ ಅನೇಕ ಬಾಂದಾರ ನಿರ್ಮಾಣ ಮಾಡಲಾಗಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಪ್ರಶಸ್ತಿ ಸಿಕ್ಕಿರುವುದು ಖುಷಿ ನೀಡಿದೆ.
    ರಾಜಶೇಖರ ಬಿರಾದಾರ, ಪಿಡಿಒ ಹಿಟ್ನಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts