More

    ಕಟ್ಟೆಯ ‘ಗಾಂಧಿ’ ಬಂಧಮುಕ್ತ

    ಶ್ರವಣ್‌ಕುಮಾರ್ ನಾಳ, ಪುತ್ತೂರು
    ಪುತ್ತೂರು ಗಾಂಧಿ ಕಟ್ಟೆ ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಯಿಂದ 8 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ವೇಳೆ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಗಾಂಧಿ ಪ್ರತಿಮೆ ಸಮೀಪದ ಕೋಣೆಯೊಳಗೆ ಇರಿಸಲಾಗಿದ್ದು, ಕೋರ್ಟ್ ತೀರ್ಪಿನ ಬಳಿಕ ಪ್ರತಿಮೆ ಮರು ಮಾಡಲಾಗಿದೆ.

    ನಗರದ ಹೃದಯ ಭಾಗದ ಬಸ್ ನಿಲ್ದಾಣ ಬಳಿಯ ಗಾಂಧಿ ಕಟ್ಟೆ ಹಾಗೂ ಮಹಾತ್ಮ ಗಾಂಧಿ ಪ್ರತಿಮೆಯನ್ನು 2018ರ ಮಾರ್ಚ್ 17ರಂದು ತಾತ್ಕಾಲಿಕವಾಗಿ ತೆರವು ಮಾಡಿ ಕೆಎಸ್‌ಆರ್‌ಟಿಸಿ ವಾಣಿಜ್ಯ ಸಂಕೀರ್ಣದ ಕೋಣೆಯೊಳಗೆ ಇರಿಸಲಾಗಿತ್ತು. ಗಾಂಧಿ ಕಟ್ಟೆ ಮರು ನಿರ್ಮಿಸುವ ಉದ್ದೇಶದಿಂದ ನಗರಸಭೆ ಈ ಕ್ರಮ ಕೈಗೊಂಡಿತ್ತು. ಈ ವೇಳೆ ವ್ಯಕ್ತಿಯೋರ್ವ ಹೈಕೋರ್ಟ್ ಮೊರೆ ಹೋಗಿ ಕಾಮಗಾರಿಗೆ ತಡೆಯಾಜ್ಞೆ ತಂದಿದ್ದರಿಂದ ಗಾಂಧಿ ಕಟ್ಟೆ- ಅಶ್ವಥ ಕಟ್ಟೆ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿತ್ತು.
    ತಿಂಗಳೊಳಗೆ ಗಾಂಧಿ ಕಟ್ಟೆ ಲೋಕಾರ್ಪಣೆ

    ಪುತ್ತೂರು ನಗರಸಭೆ ಪರ ಹೈಕೋರ್ಟ್ ಆದೇಶ ನೀಡಿದ್ದರಿಂದ ಕಳೆದ ತಿಂಗಳು ಗಾಂಧಿ ಕಟ್ಟೆ ಕಾಮಗಾರಿ ಮತ್ತೆ ಆರಂಭಗೊಂಡಿತ್ತು. ಪ್ರಸ್ತುತ ಗಾಂಧಿ ಪ್ರತಿಮೆಯನ್ನು ಮರು ಸ್ಥಾಪಿಸಿದ್ದು ಉಳಿದ ಕೆಲಸ ವೇಗವಾಗಿ ನಡೆಯುತ್ತಿದೆ. ಫೆಬ್ರವರಿ ಕೊನೆಯ ವಾರ ದ.ಕ. ಜಿಲ್ಲಾಧಿಕಾರಿ ಪುತ್ತೂರಿಗೆ ಆಗಮಿಸಲಿದ್ದು, ಈ ವೇಳೆ ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಫೆಬ್ರವರಿ ಕೊನೇ ವಾರದಲ್ಲಿ ಕೆಲಸ ಪೂರ್ಣಗೊಳಿಸಿ ಬಳಿಕ ರಾಜ್ಯ ನಾಯಕರನ್ನು ಕರೆಸಿ ಅಥವಾ ಹಿರಿಯ ಗಾಂಧಿ ಚಿಂತಕರ ಮೂಲಕ ಕಟ್ಟೆ ಲೋಕಾರ್ಪಣೆಗೊಳಿಸಲು ನಗರಸಭೆ ತೀರ್ಮಾನಿಸಿದೆ.

    ಎಂಟು ಲಕ್ಷ ರೂ. ವೆಚ್ಚದ ಯೋಜನೆ
    ಎಂಟು ಲಕ್ಷ ರೂ. ವೆಚ್ಚದಲ್ಲಿ ಗಾಂಧಿ ಕಟ್ಟೆ ಅಭಿವೃದ್ಧಿ ನಡೆಯಲಿದ್ದು, ಕಟ್ಟೆಯನ್ನು ರಸ್ತೆಗೆ ಸಮಾನಾಂತರವಾಗಿ ಕೆಳಭಾಗಕ್ಕೆ ಮರು ನಿರ್ಮಿಸುವುದು ಮತ್ತು ಅಶ್ವತ್ಥ ಮರಕ್ಕೆ ಸುತ್ತಲೂ ಭದ್ರ ಕಟ್ಟೆ ಕಟ್ಟುವ ಯೋಜನೆ ನಗರಸಭೆ ಹಾಕಿಕೊಂಡಿದೆ. ಅಶ್ವತ್ಥ ಮರಕ್ಕೆ ಹಾನಿಯಾಗದಂತೆ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳುವ ಯೋಜನೆ ನಗರಸಭೆ ರೂಪಿಸಿದೆ. ಅಬ್ದುಲ್ ರಜಾಕ್ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದಾರೆ.

    ಪುತ್ತೂರಿನ ಐತಿಹಾಸಿಕ ಸ್ಥಳ
    1934ರಲ್ಲಿ ಮಹಾತ್ಮ ಗಾಂಧಿಯವರು ಪುತ್ತೂರಿಗೆ ಆಗಮಿಸಿದ ಮತ್ತು ಅಶ್ವತ್ಥ ಮರದ ಕೆಳಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನೆನಪಿನಲ್ಲಿ ಪುತ್ತೂರಿನಲ್ಲಿ ಗಾಂಧಿ ಕಟ್ಟೆ ನಿರ್ಮಿಸಿ, 30 ವರ್ಷಗಳ ಹಿಂದೆ ಗಾಂಧಿ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. ಇದೇ ಜಾಗದಲ್ಲಿ ಅಶ್ವತ್ಥ ಮರವೂ ಇದೆ. ಪುತ್ತೂರು ನೂತನ ಬಸ್ ನಿಲ್ದಾಣ ನಿರ್ಮಾಣ ಸಂದರ್ಭದಲ್ಲೂ ಗಾಂಧಿ ಕಟ್ಟೆಯನ್ನು ಹಾಗೆಯೇ ಉಳಿಸಲಾಗಿತ್ತು. ಆದರೆ ನಗರಸಭೆಯಿಂದ ಗಾಂಧಿ ಕಟ್ಟೆ ಅಭಿವೃದ್ಧಿ ಮಾಡುವ ಕೆಲಸ ಕೈಗೆತ್ತಿಕೊಂಡಾಗ ವೇಳೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದರಿಂದ ಗಾಂಧಿ ಕಟ್ಟೆ ಬಳಿ ನಡೆಯುತ್ತಿದ್ದ ಸ್ವಾತಂತ್ರೃ ದಿನ, ಗಾಂಧಿ ಜಯಂತಿ ಕಾರ್ಯಕ್ರಮವೂ ಸ್ಥಗಿತಗೊಂಡಿತ್ತು.

    ಪುತ್ತೂರು ನಗರಸಭೆ ಪರ ಹೈಕೋರ್ಟ್ ಆದೇಶ ಬಂದಿರುವುದರಿಂದ ಗಾಂಧಿ ಕಟ್ಟೆ ಅಭಿವೃದ್ದಿಗೆ ಹೆಚ್ಚಿನ ಬಲ ಬಂದಂತಾಗಿದೆ. ಈಗಾಗಲೇ ಗಾಂಧಿ ಪ್ರತಿಮೆ ಮರು ಕಾರ್ಯ ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಐತಿಹಾಸಿಕ ಪುತ್ತೂರಿನ ಗಾಂಧಿ ಕಟ್ಟೆ ಲೋಕಾರ್ಪಣೆಗೊಳ್ಳಲಿದೆ.
    ರೂಪಾ ಶೆಟ್ಟಿ
    ನಗರಸಭಾ ಪೌರಾಯುಕ್ತೆ ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts