ಮಳೆಗಾಲದ ಆರ್ದ್ರತೆ ಮತ್ತು ನೆತ್ತಿಯ ಮೇಲಿನ ಜಿಗುಟ ತನದಿಂದಾಗಿ ಈ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಮಳೆಗಾಲದಲ್ಲಿ ನಿಮ್ಮ ಕೇಶರಾಶಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು.
ಕೂದಲನ್ನು ಒಣದಾಗಿಡಿ
ಮಳೆನೀರಿನಲ್ಲಿ ನೆನೆದರೆ ತಕ್ಷಣವೇ ಮೈಲ್ಡ್ ಶಾಂಪೂ ಬಳಸಿ ತೊಳೆಯಿರಿ. ಮಳೆನೀರಿನಲ್ಲಿರುವ ಆಮ್ಲೀಯತೆ ಮತ್ತು ಮಾಲಿನ್ಯವು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ. ತೊಳೆದ ನಂತರ ಕೂದಲನ್ನು ಸಂಪೂರ್ಣವಾಗಿ ಒಣಗಿಸಿ, ಒದ್ದೆ ಕೂದಲನ್ನು ಕಟ್ಟಬೇಡಿ.
ಅಂಟಿ-ಫಂಗಲ್ ಶಾಂಪೂ ಬಳಸಿ
ಮಳೆಗಾಲದಲ್ಲಿ ತಲೆಯಲ್ಲಿ ಶಿಲೀಂಧ್ರ ಸೋಂಕು ಮತ್ತು ಹೊಟ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಾರಕ್ಕೆ ಎರಡು ಬಾರಿ ಬೇವಿನ ಸಾರ ಅಥವಾ ಆಂಟಿ-ಫಂಗಲ್ ಗುಣವಿರುವ ಶಾಂಪೂ ಬಳಸಿ ನೆತ್ತಿಯನ್ನು ಸ್ವಚ್ಛವಾಗಿಡಿ.
ಮಸಾಜ್ ಮತ್ತು ಎಣ್ಣೆ ನಿಯಂತ್ರಿಸಿ
ಅತಿಯಾಗಿ ಎಣ್ಣೆ ಹಚ್ಚುವುದರಿಂದ ನೆತ್ತಿಯಲ್ಲಿ ಜಿಡ್ಡು ಹೆಚ್ಚಿ ಬ್ಯಾಕ್ಟೀರಿಯಾ ಬೆಳೆಯಬಹುದು. ವಾರಕ್ಕೊಮ್ಮೆ ಉಗುರುಬೆಚ್ಚಗಿನ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ಹಗುರವಾಗಿ ಮಸಾಜ್ ಮಾಡಿ, ಒಂದು ಗಂಟೆಯ ನಂತರ ತೊಳೆದುಕೊಳ್ಳಿ.
ಅಗಲ ಹಲ್ಲಿನ ಬಾಚಣಿಗೆ ಬಳಸಿ
ಒದ್ದೆಯಾದ ಕೂದಲನ್ನು ಎಂದಿಗೂ ಬಾಚಬೇಡಿ. ಕೂದಲು ಒಣಗಿದ ನಂತರ ಗೋಜು ಬಿಡಿಸಲು ಅಗಲವಾದ ಹಲ್ಲುಗಳಿರುವ ಮರದ ಬಾಚಣಿಗೆಯನ್ನು ಬಳಸಿ. ಇದು ಕೂದಲು ತುಂಡಾಗುವುದನ್ನು ತಡೆಯುತ್ತದೆ.
ಪೌಷ್ಟಿಕ ಆಹಾರ ಮತ್ತು ಹೈಡ್ರೇಶನ್
ಕೂದಲಿನ ಆರೋಗ್ಯಕ್ಕೆ ಒಳಗಿನ ಪೋಷಣೆಯೂ ಮುಖ್ಯ. ಪ್ರೊಟೀನ್, ಕಬ್ಬಿಣಾಂಶ ಹಾಗೂ ಒಮೆಗಾ-3 ಕೊಬ್ಬಿನಾಮ್ಲವಿರುವ ಆಹಾರಗಳಾದ ಮೊಟ್ಟೆ, ಪಾಲಕ್, ಒಣಫಲಗಳು ಮತ್ತು ಮೊಳಕೆಕಾಳುಗಳನ್ನು ಸೇವಿಸಿ. ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯಿರಿ.