
ಏಷ್ಯಾ ಭಾಗದಲ್ಲಿ ಬೆಳೆಯುವ ಸೇವಂತಿಗೆ ಹೂವುನ್ನು ಶ್ಯಾಮಂತಿ ಹೂ, ಶ್ಯಾಮಂತಿಗೆ ಎಂದು ಕರೆಯಲಾಗುತ್ತದೆ. ಹಳದಿ, ಬಿಳಿ, ಕಂದು ನೇರಳೆ ಬಣ್ಣದಲ್ಲಿ ಕಂಡುಬರುತ್ತದೆ. ಸೇವಂತಿಗೆ ಹೂವು ಕರ್ನಾಟಕದ ಅತ್ಯಂತ ಲಾಭದಾಯಕ ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟಿದೆ. ಪೂಜೆ..ಫೋಟೋಶೂಟ್, ಹಬ್ಬ ಹರಿದಿನದಲ್ಲಿ ಮಲ್ಲಿಗೆಗಿಂತ ಇದರದ್ದೇ ಪಾರಮ್ಯ.
ನೀವು ಸಹ ಈ ಸೇವಂತಿಗೆ ಹೂವನ್ನು ನಿಮ್ಮ ಮನೆಯ ತಾರಸಿಯಲ್ಲಿ ಅಥವಾ ಕೈತೋಟದಲ್ಲಿ ಬೆಳೆಯಬೇಕು ಎಂದು ಬಯಸಿದ್ದೀರಾ?. ವರ್ಷಪೂರ್ತಿ ಬೆಳೆದು ಮಾರಾಟ ಮಾಡಿದರೂ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿರುವ ಈ ಹೂವನ್ನು ನಾನು ಬೆಳೆಯಬೇಕು, ಸ್ವಚ್ಛಂದವಾಗಿ ಅರಳಬೇಕು ಎಂದು ಬಯಸಿದ್ದೀರಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
ಸೇವಂತಿಗೆಯ ಕಾಂಡವನ್ನು ಮಳೆಗಾಲದಲ್ಲಿ ನೆಟ್ಟರೆ ಅಥವಾ ಸೆಪ್ಟೆಂಬರ್ನಲ್ಲಿ ಬೀಜ ಹಾಕಿದರೆ ಚಳಿಗಾಲದ ವೇಳೆಗೆ ಹೂ ಕೊಡುತ್ತದೆ ಎನ್ನಲಾಗುತ್ತದೆ, ಇದಕ್ಕೆ ವರ್ಮಿಕಾಂಪೋಸ್ಟ್, ಕೋಕೋಪಿಟ್ ಮತ್ತು ಮರಳು ಮಿಶ್ರಣ ಮಣ್ಣು ಇರಬೇಕು ಸೂರ್ಯನ ಬೆಳಕು ಇರುವ ಜಾಗ ಸೂಕ್ತ.
ಮಣ್ಣಿನ ಮೇಲ್ಭಾಗದಿಂದ 2 ಇಂಚು ಮಣ್ಣು ಒಣಗಿದಂತೆ ಇದೆಯಾ ಎಂದು ನೋಡಿಕೊಂಡು ನೀರುಣಿಸಿ. ಗಿಡದ ಬುಡದಲ್ಲಿ ಎಂದು ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೂಕ್ತ ವಿಧಾನವಾಗಿದೆ. ಆಗಾಗ್ಗೆ ಗೊಬ್ಬರ ಹಾಕಿ ಆರೈಕೆ ಮಾಡುವುದು ಉತ್ತಮ.
ಸೇವಂತಿ ಹೂ ಅಂದ ಮತ್ತು ಚಂದವಾಗಿ ಬೆಳೆಯಲು ನೂರು ಗ್ರಾಂ ಸಾಸಿವೆ ಪುಡಿಗೆ ನೀರು ಬೆಳೆಸಿ ಮೂರರಿಂದ ನಾಲ್ಕು ದಿನ ಬಿಡಿ. ಆನಂತರ ಆ ದ್ರಾವಣವನ್ನು ಕಲಿಸಿ, ಅದಕ್ಕೆ ಐದು ಲೀಟರ್ ನೀರನ್ನು ಸೇರಿಸಿ. ಸೇವಂತಿ ನೆಟ್ಟ ಆರಂಭಿಕ ಹಂತದಲ್ಲಿ 20 ದಿನಕ್ಕೊಮ್ಮೆ ನೀರು ಹಾಕಿ. ಇದು ಹೆಚ್ಚು ಹೂ ಬೆಳೆಯಲು ಸಹಾಯ ಮಾಡುತ್ತದೆ. ಗಿಡದ ಆರೋಗ್ಯಕ್ಕೂ ಸಹಕಾರಿ.
ಚಿವುಟಿದಷ್ಟು ಚಿಗುರು ಎನ್ನುವ ಹಾಗೆ ಸೇವಂತಿಗೆ ಆಗಲಿ ಯಾವುದೇ ಗಿಡವಾಗಲಿ ಅವುಗಳನ್ನು ಟ್ರಿಮ್ ಮಾಡಿದಷ್ಟು ಆರೋಗ್ಯಕರವಾಗಿ ಗಿಡ ಬೆಳೆಯುತ್ತದೆ. ಹೀಗಾಗಿ ಸೇವಂತಿಗೆ ಕೊಂಬೆಯನ್ನು ಕಟ್ ಮಾಡಿ, ಹೊಸತಾಗಿ ಬೆಳೆಯಲು ಆರೈಕೆ ಮಾಡಿ.
ಸೇವಂತಿಗೆ ಹೂವನ್ನು ದಿನಕ್ಕೆ ಐದರಿಂದ ಆರು ಗಂಟೆ ಸೂರ್ಯನ ಬೆಳಕಿನಲ್ಲಿ ಇರುವಂತೆ ಬಿಡಬೇಕು. ಆಗ ಹೊಸದಾಗಿ ಮೊಗ್ಗುಗಳು ಬಿಟ್ಟು, ಹೆಚ್ಚು ಹೂವನ್ನು ನೀಡಲು ಆರಂಭಿಸುತ್ತದೆ,.
8ರಿಂದ 10 ಇಂಚು ಆಳ ಮತ್ತು ಅಗಲವಿರುವ ಪಾಟ್ ತೆಗೆದುಕೊಂಡ ಮೇಲೆ ಉಲ್ಲೇಖಿಸಿದಂತೆ ಮಿಶ್ರಣ ಮಣ್ಣು ಹಾಕಿ. ಕಾಂಪೋಸ್ಟ್ ಹಾಕಿ. ಮರಳು ಕೊಕೋಪಿಟ್ ಹಾಕಿ ಬೆಳೆಸಬೇಕು. 5-6 ಇಂಚು ಎತ್ತರವಾದಾಗ ಅದರ ಕೊಂಬೆ ಮುರಿದು ಆರೈಕೆ ಮಾಡಿ..ನೀರು ಪಾಟ್ನಲ್ಲಿ ನಿಲ್ಲದಂತೆ ನೋಡಿಕೊಳ್ಳಿ,(ಏಜೆನ್ಸೀಸ್).