More

    ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ: ಶಾಸಕ ಎಚ್​.ಕೆ. ಪಾಟೀಲರಿಗೆ ಅನಿಲ್​ ಮೆಣಸಿನಕಾಯಿ ಒತ್ತಾಯ

    ಗದಗ: ಶಾಸಕರಾದ ಎಚ್.ಕೆ.ಪಾಟೀಲ್ ಅವರು ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನುಡಿದಂತೆ ಗದಗ ಮತಕ್ಷೇತ್ರದ ಗ್ರಾಮೀಣ ಭಾಗದ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಈ ಭಾಗದ ರೈತರ ಬದುಕನ್ನು ಹಸನಾಗಿಸಬೇಕು. ಜೊತೆಗೆ ಗದಗ-ಬೆಟಗೇರಿ ಅವಳಿ ನಗರಕ್ಕೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು’ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಒತ್ತಾಯಿಸಿದ್ದಾರೆ‌.

    ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಶಾಸಕರಾದ ಎಚ್.ಕೆ.ಪಾಟೀಲ್ ಅವರು 1999ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗಲೂ ಕ್ಷೇತ್ರದ ಜಮೀನುಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಿಲ್ಲ. ಇದೀಗ ರಾಜ್ಯದಲ್ಲಿ ತಮ್ಮದೇ ಪೂರ್ಣ ಬಹುಮತದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸುವರ್ಣಾವಕಾಶ ಸಿಕ್ಕಿದೆ. ಹೀಗಾಗಿ ಈ ಬಾರಿಯಾದರೂ ಗದಗ ಗ್ರಾಮೀಣಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

    ಅದರಂತೆ, ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎಚ್.ಕೆ.ಪಾಟೀಲ್ ಅವರಿಗೆ ಅಭಿನಂದನೆಗಳನ್ನು ತಿಳಿಸುವುದರ ಜೊತೆಗೆ ಅವರ ಮೇಲಿರುವ ಹಲವು ಜವಾಬ್ದಾರಿಗಳನ್ನು ಗಮನಕ್ಕೆ ತರಲು ಇಚ್ಛಿಸುತ್ತೇನೆ. 

    ‘ಗದಗ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರಾಕೃತಿಕ ಸೊಬಗು ಅತ್ಯಂತ ಶ್ರೀಮಂತವಾಗಿದೆ. ಹಲವು ಧಾರ್ಮಿಕ, ಐತಿಹಾಸಿಕ, ಪ್ರಾಕೃತಿಕ ತಾಣಗಳಿದ್ದು, ಇವುಗಳ ವೀಕ್ಷಣೆಗೆ ನಿತ್ಯ ಬೇರೆ ಬೇರೆ ಸ್ಥಳಗಳಿಂದ ಜನರು ಆಗಮಿಸುತ್ತಿದ್ದಾರೆ. ಆದರೆ, ಬಹುತೇಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಬೇಕಿರುವ ಅಗತ್ಯ ಮೂಲಸೌಕರ್ಯಗಳಿಲ್ಲ‌. ಇದರಿಂದ ಪ್ರವಾಸಿಗರು ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗದಗ ಜಿಲ್ಲೆಯಲ್ಲಿರುವ ಇಂತಹ ಐತಿಹಾಸಿಕ ತಾಣಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬೇಕಿದೆ’ ಎಂದಿದ್ದಾರೆ.

    ‘ಪ್ರಾಚೀನ ಕಾಲದ ಐತಿಹಾಸಿಕ ಸ್ಥಳಗಳಾದ ಗದಗನ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ, ಲಕ್ಕುಂಡಿ, ಡಂಬಳ ದೊಡ್ಡಬಸವೇಶ್ವರ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಕಪ್ಪತಗುಡ್ಡ, ಗುಮ್ಮಗೋಳ, ಶಿಂಗಟಾಲೂರ, ಸೂಡಿ, ಮುಳಗುಂದದ ಸಿದ್ದೇಶ್ವರ ದೇವಸ್ಥಾನ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ವರವಿಯ ಮೌನೇಶ್ವರ, ಶ್ರೀಮಂತಗಡದ ಹೊಳಲಮ್ಮದೇವಿಯ ದೇವಸ್ಥಾನ, ಸಾಸಲವಾಡದ ಶಂಕರಲಿಂಗ ದೇವಸ್ಥಾನ, ಮಾಗಡಿ ಹಾಗೂ ಶೆಟ್ಟಿಕೇರಿಯ ಪಕ್ಷಿಧಾಮ, ಬಸವೇಶ್ವರ ಪುತ್ಥಳಿ, ಬಿಂಕದಕಟ್ಟಿ ಮೃಗಾಲಯ, ಸಾಲು ಮರದ ತಿಮ್ಮಕ್ಕ ಉದ್ಯಾನವನ ಸೇರಿದಂತೆ ಜಿಲ್ಲೆಯಲ್ಲಿರುವ ಐತಿಹ್ಯ ಪ್ರವಾಸಿ ತಾಣಗಳಿಗೆ ಹೊಸ ಕಾಯಕಲ್ಪ‌ ನೀಡಬೇಕು’ ಎಂದು ತಿಳಿಸಿದ್ದಾರೆ.

    ಇದಕ್ಕಾಗಿ, ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ರಸ್ತೆ, ಶೌಚಾಲಯ, ಸ್ನಾನಗೃಹ, ವಸತಿಗೃಹ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆಯಾಗದಂತೆ ಸುಧಾರಣೆ ಕೈಗೊಳ್ಳಬೇಕು. ವಸತಿ ಹಾಗೂ ಹೋಟೆಲ್‌ ವ್ಯವಸ್ಥೆ ಅಭಿವೃದ್ಧಿ ಪಡಿಸಬೇಕು ಎಂದು ಅನೀಲ್ ಮೆಣಸಿನಕಾಯಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts