ಗದಗ: ಕಾನೂನು ಸಚಿವ ಎಚ್. ಕೆ ಪಾಟೀಲ ಮೊದಲು ಕಾನೂನು ಪಾಲಿಸಬೇಕು. ಗಣೇಶ ವಿಸರ್ಜನೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದಿಯಾಗಿ ಪೊಲೀಸ್ ಇಲಾಖೆ ಸಮಯಕ್ಕೆ ಸರಿಯಾಗಿ ಡಿಜೆ ಬಂದ್ ಮಾಡಿಸಿದ್ದಾರೆ. ಆದರೆ, ನಸುಕಿನ ಜಾವ 5:00 ಗಂಟೆಗೆ ಮಸಿದಿ ಮೇಲಿನ ಮೈಕ್ ಬಂದ್ ಮಾಡಿಸುವ ಕೆಲಸವೂ ಆಗಬೇಕು. ಸುಪ್ರೀಂ ಕೋರ್ಟ್ ಆದೇಶ ಕೇವಲ ಹಿಂದೂಗಳ ಧಾರ್ಮಿಕ ಹಬ್ಬಗಳಿಗೆ ಮಾತ್ರ ಅನ್ವಯ ಅಲ್ಲ. ಎಲ್ಲ ಧರ್ಮಗಳಿಗೆ ಅನ್ವಯಿಸಬೇಕು. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕು ಅಂತ ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಆಗ್ರಹಿಸಿದರು
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರಿಂ ಕೋರ್ಟ್ ಆದೇಶ ಪ್ರತಿನಿತ್ಯ ಪಾಲನೆ ಆಗಬೇಕು. ಗಣೇಶ ವಿಸರ್ಜನೆ ವೇಳೆ ಸುಪ್ರಿಂ ಕೋರ್ಟ್ ಆದೇಶ ಪಾಲಿಸಬೇಕು ಅಂತ ಪೊಲೀಸರು ಹಿಂದೂ ಮುಖಂಡರುಗಳಿಗೆ ಬುದ್ದಿ ಹೇಳುತ್ತಾರೆ. ಆದರೆ, ಇದು ಕೇವಲ ಹಿಂದೂಗಳಿಗೆ ಅಷ್ಟೆನಾ..? ಮಸಿದಿಯಲ್ಲಿ ದಿನನಿತ್ಯ ಹೆಚ್ಚು ಮೈಕ್ ಸೌಂಡ್ ಇದ್ದರೂ ಕ್ಯಾರೆ ಎನ್ನುತ್ತಿಲ್ಲ. ಜಿಲ್ಲಾ ನ್ಯಾಯಾಲಯ, ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾಧಿಕಾರಿ ಕಛೇರಿಯ ಪಕ್ಕದಲ್ಲೇ ಹೆಚ್ಚು ಆಜಾನ್ ಸೌಂಡ್ ಬರುತ್ತದೆ ಇವರಿಗೆ ಕಾನೂನು ಪಾಲಿಸುವಂತೆ ಹೇಳುವರಾರು ಇಲ್ವಾ ಅಂತ ಪ್ರಶ್ನಿಸಿದರು.
ಕಾನೂನು ಸಚಿವ ಎಚ್. ಕೆ ಪಾಟೀಲರು ಈ ಹಿಂದೆ ನಗರದಲ್ಲಿ 50 ರ ಸಂಭ್ರಮ ಅಂತ ಮೂರು ದಿನ ಕಾರ್ಯಕ್ರಮ ಮಾಡಿದರು. ಅವರ ಅಭಿಮಾನಿಗಳು ಹೆಚ್ಚು ಸೌಂಡ್ ಹಾಕಿ ಕುಳಿದು ಕುಪ್ಪಳಿಸಿದರು. ಅವರ ವಿರುದ್ದ ಯಾಕೆ ಕ್ರಮ ಕೈಗೊಂಡಿಲ್ಲ. ನಮ್ಮ ಮೇಲೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ, ಮಸಿದಿ ಮೇಲೆ ಮೈಕ್ ಹಾಕುವವರ ವಿರುದ್ದ ಯಾಕೆ ಕ್ರಮ ಕೈಗೋಳ್ಳುತ್ತಿಲ್ಲ. ಸ್ವತಃ ಎಚ್ ಕೆ ಪಾಟೀಲ್ ಹತ್ತು ಹಲವಾರು ಕಾರ್ಯಕ್ರಮ ಮಾಡುತ್ತಾರೆ. ಅಲ್ಲಿ ಪೊಲೀಸರು ಯಾಕೆ ಈ ಡಿಸಿಬಲ್ ಸೌಂಡ್ ಪರೀಕ್ಷೆ ಮಾಡಲ್ಲ ಅಂತ ಕಿಡಿ ಕಾರಿದರು.
ಈದ್ ಮಿಲಾದ್ ದಿನ ಮುಸಲ್ಮಾನರು ಡಿಜೆ ಬಳಸಿದ್ದರು. ಅವರ ವಿರುದ್ದ ಯಾಕ್ ಕ್ರಮ ಇಲ್ಲ. ಸೆ. 19 ರಂದು ಮತ್ತೋಮ್ಮೆ ಈದ್ ಮಿಲಾದ್ ಕಾರ್ಯಕ್ರಮ ನಡೆಯಲಿದೆ ಅಂತ ಮಾಹಿತಿ ಬಂದಿದೆ. ಈ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಬಾರದು. ನೀಡಿದರೇ ಶಿವರಾಮಕೃಷ್ಣ ಸೇವಾ ಸಮಿತಿ ವತಿಯಿಂದ ತಡೆಯುವ ಕೆಲಸ ಮಾಡಬೇಕಾಗುತ್ತದೆ. ಮುಸಲ್ಮಾನ ಯುವಕರು ತಮ್ಮ ಸಮುದಾಯದ ಮುಖಂಡರ ಆದೇಶ ದಿಕ್ಕರಿಸಿ ಡಿಜೆ ಹಚ್ಟಿದ್ದಾರೆ. ನಿಮ್ಮ ಸಮುದಾಯದವರೇ ನಿಮ್ಮ ಮಾತು ಕೇಳುವುದಿಲ್ಲ ಅಂದ ಮೇಲೆ ಹಿಂದೂ ಹಬ್ಬಗಳಿದ್ದಾಗ ಬಹಿರಂಗ ಹೇಳಿಕೆ ಯಾಕೆ ನೀಡ್ತಿರಿ ಅಂತ ಇಸ್ಲಾಂ ಮುಖಂಡರ ವಿರುದ್ದ ಗುಡುಗಿದರು.