More

    ಭವಿಷ್ಯದ ದೃಷ್ಟಿಯಿಂದ ಜಲ ಸಂರಕ್ಷಣೆ ತುರ್ತು ಅಗತ್ಯ

    ಬೆಳಗಾವಿ: ನೀರೆಂದರೆ ಜೀವವಿದ್ದಂತೆ. ನೀರು ಜೀವನದ ಎಲ್ಲ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಭವಿಷ್ಯದ ದೃಷ್ಟಿಯಿಂದ ನೀರು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

    ನಗರದ ಕೆಎಲ್‌ಇ ಸೆಂಟೇನರಿ ಕನ್ವೆನ್ಶನ್ ಸೆಂಟರ್‌ನಲ್ಲಿ ಬೆಳಗಾವಿಯ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ವತಿಯಿಂದ ಕೆಎಲ್ಇ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಆಧುನಿಕ ತಂತ್ರಜ್ಞಾನ ಬಳಸಿ ನೀರಿನ ಬಳಕೆ’ ಕಾರ್ಯಾಗಾರ ಹಾಗೂ ತಾಂತ್ರಿಕ ವಸ್ತು ಪ್ರದರ್ಶನ’ ಉದ್ಘಾಟಿಸಿ ಅವರು ಮಾತನಾಡಿದರು. ಇನ್ಫೋಸಿಸ್ ಫೌಂಡೇಷನ್‌ನಿಂದ ರಾಜಸ್ಥಾನದ ಒಂದು ಪ್ರದೇಶದಲ್ಲಿ ವಿದ್ಯಾರ್ಥಿಗಳು ಶಾಲೆ ಬಿಡುವುದನ್ನು ತಪ್ಪಿಸಲು ಮಧ್ಯಾಹ್ನದ ಊಟ ಯೋಜನೆ ಜಾರಿಗೆ ತಂದಿದ್ದೇವೆ. ಆದರೂ ಶಾಲೆ ಬಿಡುವುದು ನಿಂತಿಲ್ಲ. ಈ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ನಾನೇ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದೆ. ಆಗ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ಸಿಗುತ್ತಿದ್ದರೂ ಸ್ಥಳದಲ್ಲಿ ಅಶುದ್ಧ ನೀರಿನ ಸಮಸ್ಯೆ ತಲೆದೋರಿತ್ತು. ಇದರಿಂದ ವಿದ್ಯಾರ್ಥಿಗಳು ಭೇದಿಯಿಂದ ಬಳಲುತ್ತಿದ್ದರು. ನಂತರ ಈ ಸಮಸ್ಯೆ ಪರಿಹರಿಸಿದ್ದೇವೆ. ಹೀಗಾಗಿ ನೀರು ಎನ್ನುವುದು ಶಿಕ್ಷಣ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು.

    ಪ್ರಪಂಚಾದ್ಯಂತ ಆರ್ಕಿಟೆಕ್ಚರಲ್ ಇಂಜಿನಿಯರ್‌ಗಳು ಕೇವಲ ಅನುಭವದ ಆಧಾರದ ಮೇಲೆ ಸಾಧನೆಗಳನ್ನು ಮಾಡಿದ್ದಾರೆ. ಹೀಗಾಗಿ ‘ಸಿವಿಲ್ ಇಂಜಿನಿಯರಿಂಗ್’ ಜಗತ್ತಿನ ಎಲ್ಲ ಇಂಜಿನಿಯರಿಂಗ್ ಶಾಖೆಗಳಿಗೂ ತಾಯಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರೂ ಸಿವಿಲ್ ಇಂಜಿನಿಯರಿಂಗ್ ನನ್ನ ಇಷ್ಟದ ವಿಷಯ. ಜಗತ್ತಿನ ಎಲ್ಲೆಲ್ಲಿ ಹೋದರೂ ಪುರಾತನ ಕಾಲದಲ್ಲಿ ನಿರ್ಮಿಸಿದ ಭವ್ಯ ಸ್ಮಾರಕಗಳು, ಕಟ್ಟಡಗಳನ್ನು ನೋಡಿದಾಗ, ಅಂದಿನ ಇಂಜಿನಿಯರ್‌ಗಳ ಕಾರ್ಯವೈಖರಿ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದರು.

    ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ನೀರಿಲ್ಲದಿದ್ದರೆ ಕೃಷಿ ಚಟುವಟಿಕೆಗಳು ಅಸಾಧ್ಯ. ನೀರಿಲ್ಲದ ಜೀವನ ಊಹಿಸಲು ಆಗುವುದಿಲ್ಲ. ಹೀಗಾಗಿ ನೀರಿನ ಸದ್ಭಳಕೆ ಕುರಿತು ಬೆಳಗಾವಿಯಲ್ಲಿ ಈ ಕಾರ್ಯಾಗಾರ ಆಯೋಜಿಸಿದ್ದು ಪ್ರಸ್ತುತ ಮತ್ತು ಶ್ಲಾಘನೀಯ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇರುವುದರಿಂದ ಕಾರ್ಯಾಗಾರ ಮಹತ್ವ ಪಡೆದಿದೆ. ಇಲ್ಲಿ ಹೊರಹೊಮ್ಮುವ ನಿರ್ಣಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಶಿಫಾರಸು ಮಾಡೋಣ ಎಂದರು.

    ಧಾರವಾಡ ಐಐಟಿ ನಿರ್ದೇಶಕ ಪ್ರೊ.ಡಾ.ವೆಂಕಪ್ಪಯ್ಯ ದೇಸಾಯಿ ಉದ್ಘಾಟಿಸಿದರು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ನಿರ್ದೇಶಕ ಡಾ.ಟಿ.ಜಿ.ಸೀತಾರಾಮ್, ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಅಖಿಲ ಭಾರತ ಅಧ್ಯಕ್ಷ ಶಿವಾನಂದ ರಾಯ್, ಅಖಿಲ ಭಾರತ ಸಿವಿಲ್ ವಿಭಾಗದ ಅಧ್ಯಕ್ಷ ಎಂ.ನಾಗರಾಜ್, ಬೆಳಗಾವಿ ಇಂಜಿನಿಯರ್ಸ್ ಸಂಘದ ಅಧ್ಯಕ್ಷ ರಮೇಶ ಜಂಗಲ, ಗೌರವ ಕಾರ್ಯದರ್ಶಿ ಪ್ರೊ.ಡಾ.ವೀರಣ್ಣ ಡಿ.ಕೆ., ಸಂಚಾಲಕ ಸಿ.ಬಿ.ಹಿರೇಮಠ, ಬಿ.ಜಿ.ಧರೆಣ್ಣವರ, ಎಸ್.ವೈ.ಕುಂದರಗಿ, ಎಸ್.ಎಂ.ಮೇಟಿ, ಎನ್.ಜಿ.ಬಾಗಲಕೋಟೆ, ಬಸವರಾಜ ಬಳಕಟ್ಟಿ ಇತತರು ಇದ್ದರು.

    ಗಮನಸೆಳೆದ ವಸ್ತು ಪ್ರದರ್ಶನ

    ಕಾರ್ಯಾಗಾರದಲ್ಲಿ ನೀರಾವರಿ ಸಂಬಂಧಿತ ವಿವಿಧ ಯಂತ್ರೋಪಕರಣಗಳು, ಕೃಷಿ ಸಲಕರಣೆಗಳ ವಸ್ತು ಪ್ರದರ್ಶನ ನಡೆಯಿತು. ರೈತರಿಗೆ ಉಪಯೋಗವಾಗುವಂತಹ ಮಿನಿ ಜೆಸಿಬಿ ಪ್ರದರ್ಶನ ಗಮನ ಸೆಳೆಯಿತು. ಕಾರ್ಯಾಗಾರದಲ್ಲಿ 10 ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಭಾಗಗಳ 100 ತಾಂತ್ರಿಕ ಅಧ್ಯಾಪಕರು, ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು. ಮಾಧವ, ಪ್ರೊ. ನಾಗೇಶ ಅಯ್ಯರ್ ಅವರಿಗೆ ಪ್ರತಿಭಾವಂತ ಇಂಜಿನಿಯರ್ ಪ್ರಶಸ್ತಿ ನೀಡಲಾಯಿತು. ಬಿ.ಎ.ರಡ್ಡಿ, ವಿ.ಬಿ.ಜಾವೂರ, ವಿನಯ ಗುಪ್ತಾ, ರಬಿಂದ್ರಕುಮಾರ ಶಂಕರ ಅವರಿಗೆ ನುರಿತ ಇಂಜಿನಿಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts