More

    ಅಂತ್ಯಕ್ರಿಯೆಗೆ ಅಂಜದ ಅಂಜುಮನ್

    ಬೆಳಗಾವಿ: ಮಾರಕ ಕರೊನಾ ಸಂಕಷ್ಟ ಕಾಲದಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವುದು ದೊಡ್ಡ ಸವಾಲಾಗಿದೆ. ಕರೊನಾದಿಂದ ಮೃತಪಟ್ಟರೆ ಸ್ವತಃ ಕುಟುಂಬಸ್ಥರೇ ಅಂತ್ಯಕ್ರಿಯೆ ಮಾಡುತ್ತಿಲ್ಲ. ಇಂತಹ ವಿಚಿತ್ರ ಕಾಲಮಾನದಲ್ಲಿ ಬೆಳಗಾವಿಯ ‘ಅಂಜುಮನ್-ಎ-ಇಸ್ಲಾಂ’ ಸಂಸ್ಥೆ ಕರೊನಾದಿಂದ ನಿಧನರಾದ ಎಲ್ಲ ಧರ್ಮೀಯರ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಬೆಳಗುತ್ತಿದೆ.

    ಸಂಸ್ಥೆಯ ಜಿಲ್ಲಾ ಘಟಕದ 15 ಸ್ವಯಂಸೇವಕರು ತಮ್ಮ ಜೀವದ ಹಂಗು ತೊರೆದು, ಕರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ. ಮುಸ್ಲಿಮರು ಮಾತ್ರವಲ್ಲದೆ, ಹಿಂದು, ಕ್ರೈಸ್ತರ ಅಂತ್ಯಸಂಸ್ಕಾರದ ವಿಧಿ-ವಿಧಾನ ತಾವೇ ನಿರ್ವಹಿಸುತ್ತಿದ್ದಾರೆ. ಮಾನವೀಯ ಸಂಬಂಧ ಕ್ಷೀಣಿಸುತ್ತಿರುವ ಪ್ರಸ್ತುತ ದಿನದಲ್ಲಿ ಈ ಸ್ವಯಂಸೇವಕರ ಸೇವಾಕಾರ್ಯ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

    ಸುರಕ್ಷತಾ ಕ್ರಮ ಪಾಲನೆ: ಜಿಲ್ಲೆಯ ನಿರ್ದಿಷ್ಟ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸೋಂಕಿತರು ಮೃತಪಟ್ಟರೆ, ಕುಟುಂಬಸ್ಥರು ಮಾಹಿತಿ ನೀಡುತ್ತಾರೆ. ಅಂತ್ಯಕ್ರಿಯೆಗೆ ನೆರವಾಗುವಂತೆ ಕೋರುತ್ತಾರೆ. ಕೆಲವರು ತಾವೇ ಆಂಬುಲೆನ್ಸ್ ವ್ಯವಸ್ಥೆ ಮಾಡಿದರೆ, ಇನ್ನೂ ಕೆಲವರು ಆಂಬುಲೆನ್ಸ್ ತರುವಂತೆ ನಮಗೇ ತಿಳಿಸುತ್ತಾರೆ. ತಕ್ಷಣವೇ ಆಸ್ಪತ್ರೆಗೆ ತೆರಳಿ, ಅಲ್ಲಿಂದ ಸ್ಮಶಾನಭೂಮಿಯತ್ತ ಹೊರಡುತ್ತೇವೆ. ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಅಂತ್ಯಸಂಸ್ಕಾರ ವಿಧಿ ನೆರವೇರಿಸುತ್ತೇವೆ ಎನ್ನುತ್ತಾರೆ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಜಿಲ್ಲಾ ಘಟಕದ ನಿರ್ದೇಶಕ ಅಶ್ಫಾಕ್ ೋರಿ.

    ಆಯಾ ಧರ್ಮಗಳನುಸಾರ ಅಂತ್ಯ ಕಾರ್ಯ: ಮುಸ್ಲಿಮರು ಮೃತಪಟ್ಟರೆ ಅವರ ಸಂಬಂಧಿಕರ ಪೈಕಿ ಒಬ್ಬರು ಪಿಪಿಇ ಕಿಟ್, ಮಾಸ್ಕ್ ಮತ್ತು ಗ್ಲೌಸ್ ಧರಿಸಿ ನಮ್ಮೊಂದಿಗೆ ಬರುತ್ತಾರೆ. ‘ನಮಾಜ್’ ಮಾಡುತ್ತಾರೆ. ನಂತರ ಇಸ್ಲಾಂ ಧರ್ಮದ ಅನುಸಾರ ಅಂತ್ಯಕ್ರಿಯೆ ನೆರವೇರಿಸುತ್ತೇವೆ. ಹಿಂದು ಅಥವಾ ಕ್ರೈಸ್ತ ಸಮುದಾಯದವರು ಮೃತಪಟ್ಟರೆ, ಅವರ ಸಂಬಂಧಿಗಳು ದೂರದಿಂದಲೇ ನಿಂತು ನೀಡುವ ಸೂಚನೆ ಪಾಲಿಸಿ ವಿಧಿ-ವಿಧಾನ ನೆರವೇರಿಸುತ್ತೇವೆ ಎನ್ನುತ್ತಾರೆ (ಮೊ.ಸಂ. 9916899250) ಅಶ್ಫಾಕ್ ೋರಿ.

    ಮಾನವ ಜನ್ಮ ಶ್ರೇಷ್ಠವಾದದ್ದು. ಯಾವುದೇ ವ್ಯಕ್ತಿ ಮೃತಪಟ್ಟ ನಂತರ, ಸಂಪ್ರದಾಯಬದ್ಧವಾಗಿ ಅಂತ್ಯಕ್ರಿಯೆ ಮಾಡಿ ಗೌರವ ಸಲ್ಲಿಸಬೇಕು ಎಂಬುದು ನಮ್ಮ ಅಭಿಲಾಷೆ. ಹಾಗಾಗಿ, ಕೋವಿಡ್ ವಕ್ಕರಿಸಿದ ದಿನದಿಂದಲೂ ನಿಸ್ವಾರ್ಥ ಮನೋಭಾವದಿಂದ ಉಚಿತವಾಗಿ ಈ ಕೆಲಸದಲ್ಲಿ ತೊಡಗಿದ್ದೇವೆ. ಈವರೆಗೆ 100ಕ್ಕೂ ಅಧಿಕ ಸೋಂಕಿತರ ಅಂತ್ಯಕ್ರಿಯೆ ಮಾಡಿದ್ದೇವೆ.
    |ರಾಜು ಸೇಠ್, ಅಧ್ಯಕ್ಷ, ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಜಿಲ್ಲಾ ಘಟಕ, ಬೆಳಗಾವಿ

    ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆ ನಿಯಮಾನುಸಾರ ನೆರವೇರಿಸಲಾಗುತ್ತಿದೆ. ಬೆಳಗಾವಿಯ ಸದಾಶಿವ ನಗರ ಸ್ಮಶಾನದಲ್ಲಿ ಪಾಲಿಕೆ ಸಿಬ್ಬಂದಿ ಅಂತ್ಯಕ್ರಿಯೆ ನಡೆಸುತ್ತಾರೆ. ಬೇರೆ ಸ್ಮಶಾನಗಳಲ್ಲಿ ನಡೆಯುವ ಅಂತ್ಯಕ್ರಿಯೆಯನ್ನು ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಸ್ವಯಂಸೇವಕರು ನೆರವೇರಿಸಿ, ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸುತ್ತಿದ್ದಾರೆ. ಅವರ ಸೇವೆ ಮಾದರಿಯಾಗಿದೆ.
    |ಕೆ.ಎಚ್. ಜಗದೀಶ, ಪಾಲಿಕೆ ಆಯುಕ್ತ, ಬೆಳಗಾವಿ

    | ಇಮಾಮಹುಸೇನ್ ಗೂಡುನವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts