More

    ಹಾವೇರಿ ಜಿಲ್ಲಾ ಮಟ್ಟದಲ್ಲಿ ದೊಡ್ಡ ಉದ್ಯಮ ಸ್ಥಾಪನೆಗೆ ಹಣಕಾಸಿನ ನೆರವು

    ಹಾವೇರಿ: ಚೈತನ್ಯ ಯೋಜನೆಯಡಿ 10 ಲಕ್ಷ ರೂ. ಬಡ್ಡಿ ರಹಿತ ಸಾಲದ ಮೊತ್ತ ದ್ವಿಗುಣಗೊಳಿಸಿ 20 ಲಕ್ಷ ರೂ. ನೀಡಲು ನಿಗಮ ಮುಂದಾಗಿದೆ. ಮಹಿಳೆಯರು ಸೇರಿ ಜಿಲ್ಲಾ ಮಟ್ಟದಲ್ಲಿ ದೊಡ್ಡ ಮಟ್ಟದ ಉದ್ಯಮ ಸ್ಥಾಪಿಸಲು ಮುಂದಾದರೆ ನಿಗಮ ಹಣಕಾಸಿನ ನೆರವು ನೀಡಲಿದೆ ಎಂದು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟಿಂಗಳೆ ಎಂದು ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು, ಉದ್ಯೋಗಿನಿ, ಕಿರುಸಾಲ ಯೋಜನೆ, ಧನಶ್ರೀ ಯೋಜನೆ, ಚೇತನ, ಸಮೃದ್ಧಿ ಸೇರಿ ವಿವಿಧ ಮಹಿಳಾ ಆರ್ಥಿಕ ನೆರವಿನ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಮಹಿಳೆಯರು ಶೇಂಗಾ ಚಟ್ನಿ ಉತ್ಪಾದಿಸುವ ದೊಡ್ಡ ಪ್ರಮಾಣದ ಉದ್ಯಮ ಸ್ಥಾಪಿಸಿದ್ದಾರೆ ಎಂದರು.

    ಮಾಜಿ ದೇವದಾಸಿಯರು, ದಮನಿತರು, ಮಹಿಳೆಯರು ಜೀವನಕ್ಕಾಗಿ ಬೇರೆಯವರ ಬಳಿ ಕೈಚಾಚಬಾರದು. ನೆಮ್ಮದಿ ಜೀವನಕ್ಕೆ ಸಾಲ ಸೌಲಭ್ಯ ನೀಡಿ ಆರ್ಥಿಕ ಸಬಲತೆಗೆ ಸರ್ಕಾರ ಒತ್ತು ನೀಡಿದೆ. ಸಾಲದ ನೆರವಿನ ಅವಕಾಶ ವಂಚಿತರನ್ನು ಗುರುತಿಸಿ ಅವರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡುವ ನಿಟ್ಟಿನಲ್ಲಿ ವಾಸ್ತವತೆಯನ್ನು ಅರಿಯಲು ಸಂವಾದ ನಡೆಸಲಾಗುತ್ತಿದೆ. ನಿಮ್ಮ ಅನಿಸಿಕೆ ಹಾಗೂ ಯೋಜನೆಗಳ ಸಫಲತೆ, ಬದಲಾವಣೆ ಕುರಿತ ನಿಮ್ಮ ಅಭಿಪ್ರಾಯ ಸಂಗ್ರಹಿಸಿ ನೆರವು ಒದಗಿಸಲು ನಿಗಮ ಬದ್ಧವಾಗಿದೆ ಎಂದರು.

    ಮಹಿಳಾ ಅಭಿವೃದ್ಧಿ ನಿಗಮದಿಂದ ಸವಲತ್ತುಗಳನ್ನು ಪಡೆದ ಮಹಿಳೆಯರ ಬದುಕಿನಲ್ಲಿ ಉಂಟಾಗಿರುವ ಬದಲಾವಣೆಯನ್ನು ತಿಳಿಯುವ ಆಸಕ್ತಿಯಿಂದ ಜಿಲ್ಲಾವಾರು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ನೆರವಿನ ಅಗತ್ಯವಿರುವ ಮಹಿಳೆಯರಿಗೆ ಈವರೆಗೆ ನಿಗಮದ ಸೌಲಭ್ಯ ದೊರೆತಿಲ್ಲವೋ ಅಂತಹವರನ್ನು ಗುರುತಿಸಿ ಸೌಲಭ್ಯ ನೀಡಲಾಗುವುದು ಎಂದರು.

    ಸಂವಾದಲ್ಲಿ ಮಹಿಳೆಯರು ಮಕ್ಕಳ ಶಿಕ್ಷಣ, ಮನೆ ನಿರ್ವಣಕ್ಕೆ ನೆರವು, ಚೇತನ, ಉದ್ಯೋಗಿನಿ, ಕಿರುಸಾಲ ಮೊತ್ತವನ್ನು ದ್ವಿಗುಣಗೊಳಿಸುವಂತೆ ಕೋರಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಇಲಾಖೆಯ ನಿರೂಪಣಾಧಿಕಾರಿ ಶ್ರೀನಿವಾಸ ಆಲಗತ್ತಿ, ಮಹಿಳಾ ಅಭಿವೃದ್ಧಿ ನಿಗಮ ಅಧಿಕಾರಿ ಮಂಜುಳಾ ಭರಡಿ ಉಪಸ್ಥಿತರಿದ್ದರು.

    ಮನೆ ದುರಸ್ತಿಗೆ ಅನುದಾನ: ಹಾವೇರಿಯಲ್ಲಿ 40 ಮನೆ ನಿರ್ವಿುಸಿಕೊಳ್ಳಲು ನಿಗಮದಿಂದ ನೆರವು ನೀಡಲಾಗಿತ್ತು. ಕಡಿಮೆ ಅನುದಾನ ಕಾರಣ ಗುಣಮಟ್ಟದ ಮನೆ ನಿರ್ಮಾಣ ಸಾಧ್ಯವಾಗಿಲ್ಲ ಎಂದು ಕೆಲ ಮಾಜಿ ದೇವದಾಸಿಯರು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಶಶಿಕಲಾ, ಸರ್ಕಾರ ಜಿಲ್ಲಾವಾರು ಸಮೀಕ್ಷೆ ನಡೆಸಿ ಶಿಥಿಲಗೊಂಡ ಮನೆಗಳ ದುರಸ್ತಿಗೆ ಅನುದಾನ ಒದಗಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮನೆ ನಿರ್ವಿುಸಿಕೊಂಡ ಮಾಜಿ ದೇವದಾಸಿಯರು ಮಹಿಳಾ ನಿಗಮಕ್ಕೆ ಮಾಹಿತಿ ನೀಡುವಂತೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts