More

    ಆರೋಪ ಸಾಬೀತಾದರೆ ಚುನಾವಣೆಯಿಂದ ದೂರ

    ಹುಬ್ಬಳ್ಳಿ : ಕೇಂದ್ರದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಸಾಬೀತಾದರೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹಾಕುವುದಿಲ್ಲ. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಸುಳ್ಳಾಗಿದ್ದರೆ ಕಾಂಗ್ರೆಸ್​ನವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬಾರದು ಎಂದು ಮಾಜಿ ಸಚಿವ ಸಿ.ಟಿ. ರವಿ ಸವಾಲು ಹಾಕಿದ್ದಾರೆ.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಂಕಿ-ಅಂಶಗಳನ್ನು ಮುಚ್ಚಿಟ್ಟು ಕೇಂದ್ರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ, ಅನುದಾನವೂ ಕಡಿಮೆ ಬರುತ್ತಿದೆಯೆಂದು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.

    2004 ರಿಂದ 2014ರವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಮನಮೋಹನ ಸಿಂಗ್ ಪ್ರಧಾನಿ ಆಗಿದ್ದರು. ಆ ಸಂದರ್ಭದಲ್ಲಿ ಅನುದಾನ ಎಷ್ಟು? ಪಾಲು ಎಷ್ಟು? ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.

    ನರೇಂದ್ರ ಮೋದಿ ಪ್ರಧಾನಿ ಆದ ನಂತರ ಕರ್ನಾಟಕಕ್ಕೆ ಎಷ್ಟು ಅನುದಾನ ಬಂದಿದೆ ಎಂಬುದರ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಶ್ವೇತಪತ್ರ ಹೊರಡಿಸಲಿ. ಈ ಸವಾಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸುತ್ತಾರೆ ಎಂಬ ಭಾವನೆ ಇದೆ. ಮೋದಿ ಅವರು ಕಡಿಮೆ ಅನುದಾನ ಕೊಟ್ಟಿದ್ದರೆ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆಯೆಂದು ಒಪ್ಪಿಕೊಳ್ಳುತ್ತೇವೆ. ಆದರೆ, ಸಿದ್ದರಾಮಯ್ಯ ಅವರು ಸುಳ್ಳು ಹೇಳಿಕೆ ನೀಡಿದ್ದರೆ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲವೆಂದು ಘೋಷಿಸಬೇಕು ಎಂದರು.

    ಯುಪಿಎ ಅವಧಿಯ 10 ವರ್ಷದಲ್ಲಿ ಕರ್ನಾಟಕಕ್ಕೆ 81,795 ತೆರಿಗೆ ಪಾಲು ನೀಡಿದೆ. ನರೇಂದ್ರ ಮೋದಿ ಪ್ರಧಾನಿ ಆದ ನಂತರ ರಾಜ್ಯಕ್ಕೆ 2,80,130 ಕೋಟಿ ರೂ. ಹಣ ಹರಿದು ಬಂದಿದೆ. ಶೇ. 242ರಷ್ಟು ಹೆಚ್ಚು ಪಾಲನ್ನು ಮೋದಿ ಸರ್ಕಾರ ಕರ್ನಾಟಕಕ್ಕೆ ನೀಡಿದೆ. ಅದೇ ರೀತಿ ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಬಂದ ಅನುದಾನ 60,779 ಕೋಟಿ ರೂ. ಅದೇ ಎನ್​ಡಿಎ ಸರ್ಕಾರದ ಸಮಯದಲ್ಲಿ 2,08,832 ಕೋಟಿ ರೂ. ಬಂದಿದೆ. ಪ್ರಧಾನಿ ಮೋದಿ ಅವಧಿಯಲ್ಲಿ ಶೇ. 243ರಷ್ಟು ಹೆಚ್ಚು ಅನುದಾನ ಕರ್ನಾಟಕಕ್ಕೆ ಬಂದಿದೆ ಎಂದು ಹೇಳಿದರು.

    ಬಿಜೆಪಿಯ ಒಂದು ಸೀಟು ಇಲ್ಲದ ಕೇರಳಕ್ಕೂ ಕೇಂದ್ರ ಅನುದಾನ ನೀಡಿದೆ. ಕೇಂದ್ರ ಸರ್ಕಾರ ಅನುದಾನ ಹಾಗೂ ತೆರಿಗೆ ಪಾಲು ಹಂಚಿಕೆಯಲ್ಲಿ ಯಾವುದೇ ರಾಜ್ಯಕ್ಕೂ ತಾರತಮ್ಯ ಮಾಡಿಲ್ಲ ಎಂದರು.

    ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರು ಹಾಗೂ ದಲಿತರ ಮೇಲೆ ಪ್ರೀತಿ ಇಲ್ಲ. ತುಷ್ಟೀಕರಣಕ್ಕಾಗಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಘೋಷಣೆ ಮಾಡಿದೆ. ಆರ್ಥಿಕ ತಜ್ಞ ಎಂದೆನಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts