More

    ಸಾವಿನಲ್ಲೂ ಒಂದಾದ ಜೀವದ ಗೆಳೆಯರು

    ಬ್ಯಾಡಗಿ: ಇಲ್ಲಿನ ಪುರಸಭೆ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಪ್ರಾಣ ಸ್ನೇಹಿತರು ತಾಲೂಕಿನ ತಡಸ ಗ್ರಾಮದಲ್ಲಿ ಶನಿವಾರ ತಡರಾತ್ರಿ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಜರುಗಿದ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಜರುಗಿದೆ.

    ಮೃತರನ್ನು ಮಂಜುನಾಥ ಎಲ್ಲಪ್ಪ ಪೂಜಾರ (26), ಪ್ರದೀಪ ಸುರೇಶ ಪೆದ್ದರ (23) ಎನ್ನಲಾಗಿದ್ದು, ತಾಲೂಕಿನ ತಡಸ ಗ್ರಾಮದಿಂದ ಬ್ಯಾಡಗಿಗೆ ಬರುವಾಗ ದುರ್ಘಟನೆ ಜರುಗಿದೆ.

    ಶಾಲಾ ಕಾಲೇಜುಗಳಿಂದಲೂ ಒಂದಾಗಿದ್ದ ಸ್ನೇಹಿತರು, ಕೆಲಸಕ್ಕೆ ಸೇರಿದ ಮೇಲೂ ಒಬ್ಬರನ್ನು ಒಬ್ಬರು ಬಿಟ್ಟು ಇರುತ್ತಿರಲಿಲ್ಲ. ಆದರೆ, ವಿಧಿಯಾಟ ಇಬ್ಬರನ್ನು ಒಂದಾಗಿ ಬದುಕಲು ಬಿಡಲಿಲ್ಲ. ಪ್ರಾಣ ಸ್ನೇಹಿತರು ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮವೇ ಮಮ್ಮಲ ಮರುಗಿತು.

    ಊಟದಲ್ಲಿ ಕೊನೆಯಾದ ಸ್ನೇಹ:

    ಬ್ಯಾಡಗಿಯ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ವಿುಕರಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು, ಶನಿವಾರ ಊಟಕ್ಕೆಂದು ತಡಸಕ್ಕೆ ತೆರಳಿದ್ದರು. ಮರಳಿ ಬರುವಾಗ ವಿಧಿ ಇವರ ಬಾಳಿಗೆ ಬೆಳಕು ತೋರದೆ, ಕತ್ತಲಾಗಿಸಿತು. ಊಟ ಮುಗಿಸಿದ ಕ್ಷಣಾರ್ಧದಲ್ಲಿ ಬ್ಯಾಡಗಿಗೆ ಬರಲು ಇಬ್ಬರೂ ಬೈಕ್ ಏರಿ ಕೆಲದೂರ ಸಾಗುತ್ತಿದ್ದಂತೆ ನಡೆದ ಅಪಘಾತದಲ್ಲಿ ಇಹಲೋಕ ತ್ಯಜಿಸಿದರು.

    ಗಾಂಧಿನಗರವೇ ಮೌನ:

    ಬ್ಯಾಡಗಿ ಗಾಂಧಿನಗರದ ನಿವಾಸಿಯಾಗಿದ್ದ ಇವರು ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ಎಲ್ಲೆಡೆ ನೀರವ ಮೌನ ಆವರಿಸಿತು. ಇಲ್ಲಿಯ ಶೇ. 75ರಷ್ಟು ನಿವಾಸಿಗಳು ಪುರಸಭೆ ಕಾರ್ವಿುಕರಾಗಿದ್ದು, ತಮ್ಮ ಸಂಬಂಧಿ ಹಾಗೂ ಸಹಪಾಠಿಯನ್ನು ಕಳೆದುಕೊಂಡ ಎಲ್ಲರಿಗೂ ದುಃಖ ಇಮ್ಮಡಿಗೊಂಡಿತು. ಸ್ಥಳೀಯ ಯುವಕರು, ಹಿರಿಜೀವಿಗಳು, ಮೃತರ ಮನೆಯತ್ತ ಹಾಗೂ ಆಸ್ಪತ್ರೆಯತ್ತ ಧಾವಿಸಿದ್ದರು. ಅಪಘಾತದಲ್ಲಿ ದುರ್ಮರಣಕ್ಕೀಡಾದ ಇಬ್ಬರ ದೇಹಗಳನ್ನು ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿ ಸಂರಕ್ಷಿಸಿ ಇಡಲಾಗಿತ್ತು. ಭಾನುವಾರ ಮಧ್ಯಾಹ್ನ ಮೃತರ ಕಳೇಬರ ತಂದ ವಾಹನವನ್ನು ಕಾಯುತ್ತಿದ್ದ ಸ್ಥಳೀಯರು, ಜಾತ್ರೆಯಂತೆ ಏಕಕಾಲಕ್ಕೆ ಜಮಾಯಿಸಿ ಅಂತಿಮ ನಮನ ಸಲ್ಲಿಸಿದರು.

    ಯುವಕರು ಗುಂಪುಗುಂಪಾಗಿ ಅಂತಿಮ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜೀವಿತ ಕಾಲದಲ್ಲಿ ಒಂದಾಗಿದ್ದ ಜೀವದ ಗೆಳೆಯರು ಅಪಘಾತದಲ್ಲಿ ಒಂದೇ ಜಾಗದಲ್ಲಿ ಪ್ರಾಣಬಿಟ್ಟ ಹಿನ್ನೆಲೆಯಲ್ಲಿ ಇಬ್ಬರ ದೇಹಗಳನ್ನು ಅಂತಿಮ ಸಂಸ್ಕಾರದಲ್ಲಿ ಒಂದಾಗಿಸಿ ಬೆಟ್ಟದ ಮಲ್ಲೇಶ್ವರ ಮುಕ್ತಿಧಾಮದಲ್ಲಿ ಚಿತೆ ಸ್ಪರ್ಶಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts