More

    ಮಾಜಿ ನಾಯಕ ಕಪಿಲ್ ದೇವ್ ಹೇಳಿದ ಹೃದಯದ ಮಾತು..

    ನವದೆಹಲಿ: ನನ್ನ ಹೃದಯ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ನಾನೀಗ ಸಂಪೂರ್ಣ ಆರೋಗ್ಯವಾಗಿದ್ದೇನೆ ಎಂದು ಭಾರತದ ಮೊಟ್ಟಮೊದಲ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಶುಕ್ರವಾರ ಹೇಳಿದ್ದಾರೆ. ಜತೆಗೆ ತಮ್ಮ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಅಕ್ಟೋಬರ್ 23ರಂದು ಕಪಿಲ್ ದೇವ್ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಬಳಿಕ ಅಕ್ಟೋಬರ್ 25ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ‘ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಹಬ್ಬ ನಿಮಗೆಲ್ಲರಿಗೂ ಸುಖ, ಶಾಂತಿ ನೆಮ್ಮದಿ ತರಲಿ. ಎಲ್ಲರಿಗೂ ಧನ್ಯವಾದಗಳು. ನಾನೀಗ ಸಂಪೂರ್ಣ ಗುಣಮುಖನಾಗಿ, ಖುಷಿಯಾಗಿದ್ದೇನೆ. ನನ್ನ ಹೃದಯ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು 61 ವರ್ಷದ ಕಪಿಲ್ ದೇವ್ ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.

    ಗುರುವಾರವಷ್ಟೇ ಕಪಿಲ್ ದೇವ್ ಸ್ನೇಹಿತರ ಜತೆಗೂಡಿ ಗಾಲ್ಫ್ ಆಡಿದ್ದರು. ಆ್ಯಂಜಿಯೋಪ್ಲಾಸ್ಟಿಗೆ ಒಳಗಾದ ಬಳಿಕ ಮೊದಲ ಬಾರಿಗೆ ಕಪಿಲ್ ಸ್ನೇಹಿತರೊಂದಿಗೆ ಕಾಣಿಸಿಕೊಂಡಿದ್ದರು. ಬಳಿಕ ಗಾಲ್ಫ್ ಆಡುತ್ತಿರುವ ವಿಡಿಯೋವನ್ನು ಕಪಿಲ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು.

    ಕಪಿಲ್ ನಾಯಕತ್ವದಲ್ಲಿಯೇ ಭಾರತ 1983ರಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಜಯಿಸಿತ್ತು. ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಈ ಸಾಧನೆ ಮಾಡಿತ್ತು. ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳಿಂದ 8 ಶತಕ ಸೇರಿದಂತೆ 5248 ರನ್‌ಬಾರಿಸಿ 434 ವಿಕೆಟ್ ಕಬಳಿಸಿದ್ದಾರೆ. 225 ಏಕದಿನ ಪಂದ್ಯಗಳಿಂದ 1 ಶತಕ ಸೇರಿದಂತೆ 3783 ರನ್, 253 ವಿಕೆಟ್ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts