More

    ಖಾಸಗಿ ಜಾಗದಲ್ಲೂ ಹಸಿರೀಕರಣ, ಅರಣ್ಯ ಇಲಾಖೆಯಿಂದ ಗಿಡಗಳ ನಾಟಿ

    -ಅನ್ಸಾರ್ ಇನೋಳಿ, ಉಳ್ಳಾಲ
    ರಸ್ತೆಬದಿ, ಸರ್ಕಾರಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಹಸಿರೀಕರಣಕ್ಕೆ ಆದ್ಯತೆ ನೀಡಿರುವ ಅರಣ್ಯ ಇಲಾಖೆ, ಇದೀಗ ಸಂಘ-ಸಂಸ್ಥೆಗಳ ಬೇಡಿಕೆಯನ್ನಾಧರಿಸಿ ಎಒಎ ನಿಬಂಧನೆಯಡಿ ಖಾಸಗಿ ಜಾಗದಲ್ಲೂ ಗಿಡ ನೆಡಲು ಆದ್ಯತೆ ನೀಡಿದೆ.

    ಇದೀಗ ಮಂಗಳೂರು ವಲಯದಲ್ಲಿ ಪ್ರಥಮವಾಗಿ ಕೊಣಾಜೆಯಲ್ಲಿ ಈ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ.
    ಕೊಣಾಜೆ ಸಮೀಪದ ನಡುಪದವು ಪಿ.ಎ.ಕಾಲೇಜು ಮುಖ್ಯಸ್ಥರ ಬೇಡಿಕೆಯನ್ನಾಧರಿಸಿ ಕ್ಯಾಂಪಸ್‌ನಲ್ಲಿರುವ ವಿಶಾಲ ಜಮೀನಿನಲ್ಲಿ ಅರಣ್ಯ ಇಲಾಖೆ 500 ಸಸಿಗಳನ್ನು ನಾಟಿ ಮಾಡಿದೆ.

    ಇದಕ್ಕೆ ನೀರಿನ ವ್ಯವಸ್ಥೆಯನ್ನೂ ಇಲಾಖೆಯೇ ಮಾಡಿಕೊಡಲಿದ್ದು, ಮೊದಲ ಒಂದು ವರ್ಷ ಗಿಡಗಳನ್ನು ಇಲಾಖೆ ನಿರ್ವಹಿಸಿದರೆ ನಂತರ ಕಾಲೇಜಿನವರು ನಿರ್ವಹಿಸಬೇಕಿದೆ. ಈ ಅವಧಿಯಲ್ಲಿ ಗಿಡಗಳಿಗೆ ಹಾನಿಯಾಗುವುದು, ಸತ್ತು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಬಂಧಪಟ್ಟ ಸಂಸ್ಥೆಯದ್ದಾಗಿರುತ್ತದೆ.

    ಗಿಡ ರಕ್ಷಣೆಗೆ ಆದ್ಯತೆ: ಹಿಂದೆಲ್ಲ ಅರಣ್ಯ ಇಲಾಖೆ ಎಂದರೆ ಹೆಸರಿಗೆ ಮಾತ್ರ ಸೀಮಿತ ಎನ್ನುವ ಆರೋಪವಿತ್ತು. ವನಮಹೋತ್ಸವದ ಹೆಸರಲ್ಲಿ ವರ್ಷಕ್ಕೊಮ್ಮೆ ಗಿಡಗಳನ್ನು ನೆಟ್ಟು, ಮರು ವರ್ಷವೂ ಅದೇ ಹೊಂಡಗಳಲ್ಲಿ ಗಿಡಗಳನ್ನು ನೆಡಲಾಗುತ್ತದೆ ಎನ್ನುವ ಆರೋಪ ಇತ್ತು.

    ಆದರೆ ಪ್ರಸ್ತುತ ದಿನಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ನೆಟ್ಟ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಹಿಂದಿಗಿಂತಲೂ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಸಂಘ-ಸಂಸ್ಥೆಗಳು, ಶಿಕ್ಷಣ, ಧಾರ್ಮಿಕ ಅಥವಾ ಇತರ ಖಾಸಗಿ ಸಂಸ್ಥೆಗಳು ಗಿಡಗಳ ಬಗ್ಗೆ ಬೇಡಿಕೆ ಇಟ್ಟಾಗ ಅದನ್ನು ಬೆಳೆಸುವ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲದೆ ಸ್ವತಃ ಅಧಿಕಾರಿಗಳೇ ಭೇಟಿ ನೀಡಿ ಜಾಗ ಪರಿಶೀಲಿಸುತ್ತಾರೆ. ಅದರಂತೆ ಪಿ.ಎ ಕಾಲೇಜಿನಿಂದಲೂ ಗಿಡಗಳ ಬೇಡಿಕೆ ಬಂದಾಗ ಇಲಾಖೆ, ಜಮೀನು ಮತ್ತು ಗಿಡಗಳಿಗೆ ಬೇಕಾದ ಭದ್ರತೆಯನ್ನು ಪರಿಶೀಲಿಸಿ ಐನೂರು ಗಿಡಗಳನ್ನು ನಾಟಿ ಮಾಡಿದೆ.

    ಇಲ್ಲಿದೆ ವಿಭಿನ್ನ ಸಸ್ಯರಾಶಿ: ಪಿ.ಎ.ಕಾಲೇಜು ಆವರಣದಲ್ಲಿ ನಾಟಿ ಮಾಡಲಾಗಿರುವ ವಿಭಿನ್ನ ತಳಿಯ ಐನೂರು ಗಿಡಗಳು ಜೀವ ತಳೆಯತೊಡಗಿದೆ. ಕ್ಯಾಂಪಸ್‌ಗೆ ಆವರಣ ಗೋಡೆ, ಸಿಸಿ ಕ್ಯಾಮರಾ, ಪಹರೇದಾರರ ಭದ್ರತೆ ಇರುವುದರಿಂದ ಗಿಡಗಳಿಗೆ ಯಾವುದೇ ರೀತಿಯಲ್ಲೂ ಹೊರಗಿನವರಿಂದ ಹಾನಿಯಾಗದು. ಇದನ್ನು ಗಮನಿಸಿಯೇ ಅರಣ್ಯ ಇಲಾಖೆ ಗಿಡಗಳನ್ನು ಪೂರೈಸಿದೆ. 25 ಸಂಪಿಗೆ, 50 ಕಾಯಿದೂಪ, 35 ಹೆಬ್ಬಲಸು, 25 ಪುನರ್ಪುಳಿ, 10 ಕಹಿಬೇವು, 25 ಹೊಳೆಮತ್ತಿ, 3 ಪನ್ನೇರಳೆ, 5 ನಾರದುಂಗ ಪುಷ್ಪ, 10 ಬೇಂಗ, 10 ಬೀಟಿ, 70 ಕದಂಬ, 50 ಬಾದಾಮಿ, 20 ಮಹಾಗವಿ, 20 ನೇರಳೆ, 20 ತಾರೆ, 20 ಕೆರೆನೇರಳೆ, 20 ಹೆಬ್ಬಲಸು, 20 ಕಿರಾಲ್‌ಬೋಗಿ, 15 ಹಲಸು, 10 ಅವಲಾಂಡ, 10 ಬೊಲ್ಸಾಲೆ ಹೀಗೆ ವಿಭಿನ್ನ ಜಾತಿಯ ಸಸ್ಯರಾಶಿ ಒಂದೇ ಜಾಗದಲ್ಲಿ ಕಾಣ ಸಿಗುತ್ತದೆ.

    ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಶೇ.33 ಅರಣ್ಯ ಪ್ರದೇಶ ಇರಬೇಕಾಗಿದ್ದು, ಈ ನೆಲೆಯಲ್ಲಿ ಇತರ ಜಮೀನಿನಲ್ಲೂ ಇಲಾಖೆ ಸಸಿಗಳನ್ನು ನೆಟ್ಟು ಬೆಳೆಸುತ್ತಿದೆ. ಒಂದು ವರ್ಷ ಇಲಾಖೆಯೇ ಗಿಡಗಳನ್ನು ನಿರ್ವಹಿಸುತ್ತಿದ್ದು, ನಂತರದ ಜವಾಬ್ದಾರಿ ಸಂಬಂಧಪಟ್ಟ ಸಂಸ್ಥೆಗಳ ಮೇಲಿರುತ್ತದೆ.
    -ರವಿ ಕುಮಾರ್ ಎಸ್., ಉಪವಲಯ ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts