More

    ರೋಗಿಗಳಿಗೆ ‘ಇ- ಸಂಜೀವಿನಿ’ ಆಸರೆ

    ಬೆಳಗಾವಿ: ಕರೊನಾ ಅಟ್ಟಹಾಸದಿಂದಾಗಿ ಅನ್ಯ ಕಾಯಿಲೆ ಇರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸೂಕ್ತವಾದ ಚಿಕಿತ್ಸೆ ಲಭಿಸದೆ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಕೇಂದ್ರ ಆರೋಗ್ಯ ಮಂತ್ರಾಲಯವು, ರೋಗಿಗಳು ಮನೆಯಲ್ಲಿದ್ದುಕೊಂಡೇ ತಮಗಿರುವ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಲು ‘ಇ- ಸಂಜೀವಿನಿ ಒಪಿಡಿ’ ಎಂಬ ಆ್ಯಪ್ ಬಿಡುಗಡೆ ಮಾಡಿದೆ.

    ರಾಷ್ಟ್ರೀಯ ದೂರಸಂಪರ್ಕ ಸಮಾಲೋಚನಾ ಸೇವೆ (ನ್ಯಾಷನಲ್ ಟೆಲಿ ಕನ್ಸಲ್ಟೇಷನ್ ಸರ್ವಿಸ್)ಯಡಿ ‘ಇ- ಸಂಜೀವಿನಿ ಒಪಿಡಿ’ ಆ್ಯಪ್ ಕಾರ್ಯನಿರ್ವಹಿಸಲಿದೆ. ಕರ್ನಾಟಕದ 730 ವೈದ್ಯರು ಸೇರಿ ದೇಶದ 22 ರಾಜ್ಯಗಳಲ್ಲಿ 3,874 ವೈದ್ಯರು ಸೇವೆ ನೀಡುತ್ತಿದ್ದಾರೆ.

    ಎಲ್ಲೆಲ್ಲಿ ಎಷ್ಟು ವೈದ್ಯರು?: ಕೋಲಾರ 65, ಉತ್ತರ ಕನ್ನಡ 53, ಗದಗ, ಕಲಬುರ್ಗಿ ತಲಾ 52, ಮೈಸೂರು 50, ಬೆಂಗಳೂರು ನಗರ, ಬೀದರ ತಲಾ 47, ಬಳ್ಳಾರಿ 45, ಚಿಕ್ಕಮಗಳೂರು 37, ಹಾವೇರಿ 36, ಶಿವಮೊಗ್ಗ 30 ಚಿಕ್ಕಬಳ್ಳಾಪುರ 28, ದಕ್ಷಿಣ ಕನ್ನಡ 23, ಮಂಡ್ಯ 22, ಯಾದಗಿರಿ 20, ಧಾರವಾಡ, ರಾಮನಗರ, ಚಿತ್ರದುರ್ಗ ತಲಾ 16, ಕೊಪ್ಪಳ, ತುಮಕೂರು ತಲಾ 15, ಬೆಳಗಾವಿ, ಚಾಮರಾಜನಗರ ತಲಾ 12, ಕೊಡಗು 10, ವಿಜಯಪುರ 6, ಉಡುಪಿ ಜಿಲ್ಲೆಯಲ್ಲಿ 5 ವೈದ್ಯರನ್ನು ನಿಯೋಜಿಸಲಾಗಿದೆ. ಬಾಗಲಕೋಟೆ, ಹಾಸನ, ರಾಯಚೂರು ಹಾಗೂ ದಾವಣಗೆರೆಯಲ್ಲಿ ವೈದ್ಯರ ನಿಯೋಜನೆ ಆಗಬೇಕಿದೆ.

    ತಪ್ಪಲಿದೆ ಅಲೆದಾಟ: ಆಸ್ಪತ್ರೆಗಳು ಕೇವಲ ಕರೊನಾ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದುದರಿಂದ ಅನ್ಯಕಾಯಿಲೆ ಇರುವವರಿಗೆ ಚಿಕಿತ್ಸೆ ಸಿಗುತ್ತಿರಲಿಲ್ಲ. ಹೀಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾಗಿತ್ತು. ಇದೀಗ ‘ಇ-ಸಂಜೀವಿನಿ’ ಆ್ಯಪ್ ಮೂಲಕ ಆನ್‌ಲೈನ್‌ನಲ್ಲೇ ರೋಗಿಗಳು ಅನಾರೋಗ್ಯದ ಕುರಿತು ಹೇಳಿಕೊಂಡಾಗ, ವೈದ್ಯರು ಅದಕ್ಕೆ ಸೂಕ್ತವಾದ ಔಷಧ ಸೂಚಿಸಿ, ಸಲಹೆ ನೀಡುತ್ತಾರೆ. ಆ್ಯಪ್ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಲು ಆಶಾ ಕಾರ್ಯಕರ್ತರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಟೆಲಿಮೆಡಿಸಿನ್ ನೋಡಲ್ ಅಧಿಕಾರಿ ಡಾ. ಚಾಂದಿನಿ ದೇವಡಿ ಹೇಳಿದ್ದಾರೆ.

    ಆ್ಯಪ್ ಬಳಕೆ ಮಾಡುವುದು ಹೇಗೆ?

    ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ ‘ಇ-ಸಂಜೀವಿನಿ ಒಪಿಡಿ’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಅಥವಾ ಗೂಗಲ್‌ನಲ್ಲಿ ‘ಇ- ಸಂಜೀವಿನಿ ಒಪಿಡಿ’ ಆ್ಯಪ್ ಎಂದು ನಮೂದಿಸಿ, ರಿಜಿಸ್ಟರ್ ಆಗಬೇಕು. ಆಗ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದುಕೊಳ್ಳುತ್ತದೆ. ಮೊದಲು ರೋಗಿಯ ಹೆಸರು ನೋಂದಣಿ ಮಾಡಿದರೆ ಒಟಿಪಿ ಸಂಖ್ಯೆ ಬರಲಿದೆ. ಆ ಒಟಿಪಿ ಸಂಖ್ಯೆ ನಮೂದಿಸಿದ ಬಳಿಕ ಅರ್ಜಿಯೊಂದು ತೆರೆದುಕೊಳ್ಳುತ್ತದೆ. ಅದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ನಂಬರ್, ವಿಳಾಸ ಎಂಟ್ರಿ ಮಾಡಿ ಲಾಗಿನ್ ಆಗಬೇಕು. ಬಳಿಕ ಟೋಕನ್ ನಂಬರ್ ಬರಲಿದೆ. ಟೋಕನ್ ನಂಬರ್ ನೀಡಿ ವೈದ್ಯರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಬಹುದು. ಸಂಪರ್ಕಕ್ಕೆ ಬರುವ ವೈದ್ಯರು, ರೋಗಿಯ ಕಾಯಿಲೆ ವಿಚಾರಣೆ ನಡೆಸಿ ಔಷಧ ಬರೆದು ಕೊಡುತ್ತಾರೆ. ಬೆಳಗ್ಗೆ 10ರಿಂದ
    ಸಂಜೆ 5ರ ವರೆಗೆ ಈ ಸೇವೆ ಲಭ್ಯವಿದೆ.

    ‘ಇ-ಸಂಜೀವಿನಿ ಒಪಿಡಿ’ ಆ್ಯಪ್ ಮೂಲಕ ವೈದ್ಯರೊಂದಿಗೆ ವಿಡಿಯೋ ಸಂವಾದದ ಸಂದರ್ಭದಲ್ಲೇ ರೋಗಿಗಳು ತಮ್ಮ ಹಳೇ ರಿಪೋರ್ಟ್‌ಗಳನ್ನು ಅಪ್‌ಲೋಡ್ ಮಾಡಬಹುದು. ಇದುವರೆಗೆ ರಾಜ್ಯಾದ್ಯಂತ 6,445 ಜನರು ಆ್ಯಪ್‌ನ ಮೂಲಕ ವೈದ್ಯರನ್ನು ಸಂದರ್ಶಿಸಿದ್ದಾರೆ. ಈ ಸೇವೆಯ ಕುರಿತು ಜನರಿಗೆ ಇನ್ನೂ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ.
    | ಡಾ. ಅರುಣಕುಮಾರ ಡಿ.ಪಿ. ಡೆಪ್ಯುಟಿ ಡೈರೆಕ್ಟರ್, ಇ-ಹೆಲ್ತ್, ಬೆಂಗಳೂರು

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts