More

    ಕದ್ದುಮುಚ್ಚಿ ಗಿಲ್‌ನೆಟ್ ಮೀನುಗಾರಿಕೆ, ನಾಡದೋಣಿ ಮೀನುಗಾರರಿಂದ ಆಕ್ಷೇಪ

    ಗಂಗೊಳ್ಳಿ/ಉಡುಪಿ/ಮಂಗಳೂರು: ಲಾಕ್‌ಡೌನ್ ಸಂದರ್ಭ ರಾಜ್ಯದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶವಿದ್ದರೂ ಸರ್ಕಾರದ ಆದೇಶ ಉಲ್ಲಂಘಿಸಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಗಿಲ್‌ನೆಟ್ ದೋಣಿಯಲ್ಲೂ ಮೀನುಗಾರಿಕೆ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

    ಸಾಂಪ್ರದಾಯಿಕ ಮೀನುಗಾರಿಕೆಯವರು ಬೆಳಗಿನ ಜಾವ ಕಡಲಿಗಿಳಿದು 9 ಗಂಟೆಯೊಳಗೆ ದಡಕ್ಕೆ ಬಂದು ಮೀನುಗಳನ್ನು ವಿಲೇವಾರಿ ಮಾಡಬೇಕು. ಬೆಳಗ್ಗೆ 11ರ ತನಕ ಲಾಕ್‌ಡೌನ್ ಸಡಿಲಿಕೆ ಇರುವುದರಿಂದ ಅಷ್ಟರೊಳಗೆ ಮೀನು ಮಾರಾಟ ಮಾಡಬೇಕಿದೆ. ಇದರಿಂದ ಸಾಂಪ್ರದಾಯಿಕ ಮೀನುಗಾರರಿಗೆ ನಿರೀಕ್ಷಿತ ಮಟ್ಟದಲ್ಲಿ ಮೀನು ದೊರೆಯುತ್ತಿಲ್ಲ.

    ಆದರೆ 2-3 ದಿನ ಕಡಲಿನಲ್ಲಿದ್ದು, ಮೀನುಗಾರಿಕೆ ನಡೆಸುತ್ತಿರುವ ಗಿಲ್‌ನೆಟ್ ದೋಣಿಗಳು ಉತ್ತಮ ಮೀನುಗಾರಿಕೆ ನಡೆಸುತ್ತಿವೆ. ಇದರಿಂದ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಗಿಲ್‌ನೆಟ್ ಮೀನುಗಾರಿಕೆ ನಡೆಸುತ್ತಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಇದಕ್ಕೆ ಅವಕಾಶ ನೀಡಬಾರದು ಎಂದು ಸಾಂಪ್ರದಾಯಿಕ ಮೀನುಗಾರರು ಒತ್ತಾಯಿಸಿದ್ದಾರೆ.

    ಆಂಧ್ರ, ತಮಿಳುನಾಡು ಮೂಲದ ಮೀನುಗಾರರು ಹೆಚ್ಚಾಗಿ ಗಿಲ್‌ನೆಟ್ ಮೀನುಗಾರಿಗೆ ನಡೆಸುತ್ತಾರೆ. ಪ್ರಸ್ತುತ ಮಲ್ಪೆಯಲ್ಲಿಯೂ ಬೆರಳೆಣಿಕೆಯಷ್ಟು ಮೀನುಗಾರರು ಗಿಲ್‌ನೆಟ್ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಸಾಂಪ್ರದಾಯಿಕ ನಾಡದೋಣಿ ಬಿಟ್ಟು ಗಿಲ್‌ನೆಟ್ ಮೀನುಗಾರಿಕೆಗೆ ಅವಕಾಶ ಮಾಡಿಕೊಡಬಾರದು ಎನ್ನುತ್ತಾರೆ ಮಲ್ಪೆ ಮೀನುಗಾರರು.

    ಗಿಲ್ನೆಟ್ ಮೀನುಗಾರಿಕೆ ದಕ್ಷಿಣ ಕನ್ನಡ ವ್ಯಾಪ್ತಿಯ ಸಮುದ್ರ ತೀರದಲ್ಲಿ ನಡೆದಿರುವ ಬಗ್ಗೆ ದೂರುಗಳು ಬಂದಿಲ್ಲ. ಈ ಬಗ್ಗೆ ಜಿಲ್ಲೆಯ ಮೀನುಗಾರರು ಪೂರ್ಣ ಸಹಕಾರ ನೀಡಿದ್ದಾರೆ. ಗಿಲ್‌ನೆಟ್ ಮೀನುಗಾರಿಕೆಗೆ ಕೆಲವರು ಪ್ರಯತ್ನಿಸಿದ್ದರು. ಆದರೆ ಅಧಿಕಾರಿಗಳು ಮೀನುಗಾರರ ಮನವೊಲಿಸಿದ್ದಾರೆ ಎಂದು ಮಂಗಳೂರಿನ ಮೀನುಗಾರ ಮುಖಂಡ ದಿವಾಕರ ಉಳ್ಳಾಲ ತಿಳಿಸಿದ್ದಾರೆ.

    ಗಂಗೊಳ್ಳಿ, ಉಪ್ಪುಂದ, ಕೊಡೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಿಲ್‌ನೆಟ್ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಕಾನೂನು ಬಾಹಿರವಾಗಿ ಮೀನುಗಾರಿಕೆ ನಡೆಸುವ ಗಿಲ್‌ನೆಟ್ ದೋಣಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು.
    – ಸಂದೀಪ ಜಿ.ಎಸ್. ಇನ್‌ಸ್ಪೆಕ್ಟರ್, ಕರಾವಳಿ ಕಾವಲು ಪೊಲೀಸ್ ಠಾಣೆ, ಗಂಗೊಳ್ಳಿ

    ಲಾಕ್‌ಡೌನ್ ಸಮಯದಲ್ಲಿ ಗಿಲ್‌ನೆಟ್ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನು ಉಲ್ಲಂಘಿಸಿ ಗಿಲ್‌ನೆಟ್ ಮೀನುಗಾರಿಕೆ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
    – ಗಣೇಶ್, ಜಿಲ್ಲಾ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts