More

    ಅಗ್ನಿಶಾಮಕ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಶಾಸಕ ಈಶ್ವರಪ್ಪ ಗರಂ

    ಶಿವಮೊಗ್ಗ: ಯುವ ಉದ್ಯಮಿ ಶರತ್ ಭೂಪಾಳಂ ಅವರ ಸಾವಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ನಿರ್ಲಕ್ಷ್ಯ ವಹಿಸಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ 10 ದಿನದಲ್ಲಿ ಸಮಗ್ರ ವರದಿ ನೀಡಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.
    ಸಾಗರ ರಸ್ತೆಯ ಅಗ್ನಿಶಾಮಕ ದಳದ ಕಚೇರಿಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ವಾಹನಗಳಲ್ಲಿನ ಉಪಕರಣ ಪರಿಶೀಲಿಸಿ ನಿರ್ಲಕ್ಷೃಕ್ಕೆ ಕಾರಣವೇನು ಎಂಬುದನ್ನು ಅರಿಯಲು ಪ್ರಯತ್ನಿಸಿದರು. ಈ ವೇಳೆ ಅಗ್ನಿಶಾಮಕ ಜಿಲ್ಲಾ ಅಧಿಕಾರಿ ಅಶೋಕ್‌ಕುಮಾರ್ ಅವರು ಸಿಬ್ಬಂದಿ ಸಮರ್ಥನೆಗೆ ಮುಂದಾದಾಗ ಸಿಟ್ಟಿಗೆದ್ದರು. ಎಲ್ಲ ಉಪಕರಣಗಳಿದ್ದರೆ ಒಂದು ಜೀವವನ್ನು ಉಳಿಸಲು ನಿಮ್ಮಿಂದ ಏಕೆ ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
    ತಪಿತಸ್ಥರನ್ನು ಉಳಿಸಲು ಸಮರ್ಥನೆ ಮಾಡಿಕೊಳ್ಳಬೇಡಿ. ಇದರಿಂದ ನಿಮಗೆ ತೊಂದರೆ ಆಗಲಿದೆ. ಅವಘಡ ಸಂದರ್ಭದಲ್ಲಿ ಟಾರ್ಚ್, ಜೀವರಕ್ಷಕ ಜಾಕೆಟ್, ನೀರಿನ ಪೈಪ್ ಇರಲಿಲ್ಲವೆಂದು ಪ್ರತ್ಯಕ್ಷದರ್ಶಿಗಳೇ ಹೇಳುತ್ತಿದ್ದಾರೆ. ಹೀಗಿರುವಾಗ ಸಮರ್ಥನೆ ಮಾಡಿಕೊಳ್ಳುವುದು ಒಳ್ಳೆಯದಲ್ಲ. ನಿಮ್ಮ ಮೇಲೆಯೇ ತನಿಖೆಗೆ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಮೊದಲು ಬಂದ ವಾಹನದಲ್ಲಿ ಅಗತ್ಯ ಉಪಕರಣಗಳು ಇರಲಿಲ್ಲ. ಎರಡನೇ ವಾಹನ ಬಂದ ಮೇಲೆ ಆಕ್ಸಿಜನ್ ಮಾಸ್ಕ್ ಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ನಾನು ಇದುವರೆಗೂ ಯಾವುದೇ ಅಧಿಕಾರಿಗಳಿಗೆ ತೊಂದರೆ ಕೊಟ್ಟಿಲ್ಲ. ನೀವೇ ಸಮರ್ಪಕವಾಗಿ ಮಾಹಿತಿ ಕೊಡದಿದ್ದರೆ ಪರಿಣಾಮ ಸರಿಯಾಗಿ ಇರುವುದಿಲ್ಲ ಎಂದರು.
    ಡಿಸಿ ಡಾ. ಆರ್.ಸೆಲ್ವಮಣಿ ಮಾತನಾಡಿ, ಎಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಸಿಸಿ ಕ್ಯಾಮರಾ ತುಣುಕುಗಳ ಪರಿಶೀಲನೆ ಸೇರಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ವಾರ ಅಥವಾ 10 ದಿನದಲ್ಲಿ ವರದಿ ನೀಡಲಾಗುವುದು ಎಂದರು. ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಜ್ಞಾನೇಶ್ವರ್, ಸದಸ್ಯ ಎಸ್.ಎನ್.ಚನ್ನಬಸಪ್ಪ, ಕೆ.ವಿ.ಅಣ್ಣಪ್ಪ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜಿತ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts