More

    ಎರಡು ಅಂಗಡಿಗಳಿಗೆ ಬೆಂಕಿ

    ಗಂಗೊಳ್ಳಿ: ಗಂಗೊಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿ ಎರಡು ಅಂಗಡಿಗಳು ಬೆಂಕಿಗಾಹುತಿಯಾಗಿವೆ.
    ಗ್ರಾಮದ ವಾಟರ್ ಟ್ಯಾಂಕ್ ಬಳಿ ಇರುವ ಜಿ. ದಿನೇಶ್ ನಾಯಕ್ ಅವರ ಸ್ಟೇಶನರಿ ಅಂಗಡಿ ಮತ್ತು ಹಾಲಿನ ಉತ್ಪನ್ನಗಳು ಮಾರಾಟ ಮಾಡುತ್ತಿದ್ದ ಕೊಠಡಿಯಲ್ಲಿ ಉಂಟಾದ ಬೆಂಕಿಯಿಂದಾಗಿ ಅಂಗಡಿಯೊಳಗಿದ್ದ ನಾಲ್ಕು ಫ್ರೀಜರ್‌ಗಳು ಸುಟ್ಟು ಭಸ್ಮವಾಗಿದ್ದು, ಹಾಲಿನ ಉತ್ಪನ್ನಗಳು, ಬೇಕರಿ ತಿಂಡಿಗಳು ಸೇರಿದಂತೆ ಇನ್ನಿತರ ಉಪಕರಣಗಳು ಹಾಗೂ ಪೀಠೋಪಕರಣಗಳು ಅಗ್ನಿಗಾಹುತಿಯಾಗಿದೆ.

    ಜಿ.ದಿನೇಶ ನಾಯಕ್ ಅವರ ಅಂಗಡಿಗೆ ತಾಗಿಕೊಂಡಿರುವ ಜಿ.ಪದ್ಮನಾಭ ನಾಯಕ್ ಅವರ ದಿನಸಿ ಅಂಗಡಿ ಕೂಡ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಅಂಗಡಿಯೊಳಗಿದ್ದ ದಿನಸಿ ವಸ್ತುಗಳು, ಕಪಾಟಿನಲ್ಲಿರಿಸಿದ್ದ 88 ಸಾವಿರ ರೂ. ನಗದು, ಪೀಠೋಪಕರಣಗಳು ಹಾಗೂ ಇನ್ನಿತರ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ಅಂಗಡಿ ಕಟ್ಟಡಗಳಿಗೆ ಸಂಪೂರ್ಣ ಹಾನಿಯಾಗಿದೆ. ಘಟನೆ ಮಾಹಿತಿ ತಿಳಿದು ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಗಂಗೊಳ್ಳಿ ಪೊಲೀಸರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ. ದೇವರ ದೀಪ ಬಿದ್ದು ಅಂಗಡಿಗೆ ಬೆಂಕಿ ಬಿದ್ದಿರಬಹುದೆಂದು ಶಂಕಿಸಲಾಗಿದೆ.

    ಗಂಗೊಳ್ಳಿ ಎಸೈ ಭೀಮಾಶಂಕರ್ ಎಸ್. ಮತ್ತು ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಖಾರ್ವಿ ಹಾಗೂ ಸ್ಥಳೀಯರು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು. ಗಂಗೊಳ್ಳಿ ಗ್ರಾಮ ಕರಣಿಕ ರಾಘವೇಂದ್ರ ಡಿ. ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ ಮತ್ತಿತರು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದಿಂದ ಪರಿಹಾರ ಒದಗಿಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ.

    ಪೋಟೋ: 07ಜಿಎಎನ್1, 07ಜಿಎಎನ್2, 07ಜಿಎಎನ್3, 07ಜಿಎಎನ್4
    ಅಗ್ನಿ ಅವಘಡದಿಂದಾಗಿ ಸಂಪೂರ್ಣವಾಗಿ ಸುಟ್ಟು ಹೋಗಿರುವ ಅಂಗಡಿಗಳು ಹಾಗೂ ವಸ್ತುಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts