More

    48 ಸಾರಿಗೆ ನೌಕರರ ವಿರುದ್ಧ ಎಫ್​ಐಆರ್

    ಹಾವೇರಿ: ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಗುರುವಾರವೂ ಮುಂದುವರಿದಿದ್ದು, ಇದರ ಮಧ್ಯೆ ಕರ್ತವ್ಯಕ್ಕೆ ಹಾಜರಾಗಲು ಅಡ್ಡಿಪಡಿಸಿದ ಆರೋಪದಲ್ಲಿ ಜಿಲ್ಲೆಯ ವಿವಿಧ ಡಿಪೋಗಳ 48 ಸಿಬ್ಬಂದಿ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಲ್ಲೆಯಲ್ಲಿ 25 ಬಸ್​ಗಳು ರಸ್ತೆಗಳಿದಿದ್ದು, ಕೊಂಚಮಟ್ಟಿಗೆ ಪ್ರಯಾಣಿಕರಿಗೆ ಅನುಕೂಲವಾಗಿದೆ.

    ಕರ್ತವ್ಯಕ್ಕೆ ಹಾಜರಾಗುವ ನೌಕರರಿಗೆ ಬೆದರಿಸಿ ಅವಾಚ್ಯವಾಗಿ ಬೈದಾಡಿ, ಬಸ್ ವಾಪಸ್ ಕಳುಹಿಸುವ ಮೂಲಕ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ರಾಣೆಬೆನ್ನೂರ ಡಿಪೋಕ್ಕೆ ಸೇರಿದ 12 ಸಿಬ್ಬಂದಿ ವಿರುದ್ಧ ಘಟಕ ವ್ಯವಸ್ಥಾಪಕರು ದೂರು ದಾಖಲಿಸಿದ್ದಾರೆ. ಅದೇರೀತಿ ಬ್ಯಾಡಗಿ ಡಿಪೋದ 5 ನೌಕರರು ವಾಟ್ಸ್ ಆಪ್ ಗ್ರೂಪ್​ನಲ್ಲಿ ಕರ್ತವ್ಯಕ್ಕೆ ಹಾಜರಾಗದಂತೆ ಪ್ರಚೋದನೆ ನೀಡಿ, ಕೆಲಸಕ್ಕೆ ಬರುತ್ತಿದ್ದ ಸಿಬ್ಬಂದಿಯನ್ನು ಮಾರ್ಗ ಮಧ್ಯೆ ತಡೆದು ಕರ್ತವ್ಯಕ್ಕೆ ಹೋಗದಂತೆ ಅಡೆತಡೆ ಮಾಡಿದ ಆಪರಾಧಡಿ 5 ಜನರ ಮೇಲೆ ಕೇಸ್ ದಾಖಲಾಗಿದೆ. ಹಾವೇರಿಯಲ್ಲಿ ಡಿಪೋ ವ್ಯವಸ್ಥಾಪಕರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಕಂಟ್ರೋಲರ್ ಮೇಲೆ ಕೇಸ್ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಅಡ್ಡಿಪಡಿಸಿದ ಆರೋಪದಲ್ಲಿ ಒಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಹಿರೇಕೆರೂರಿನಿಂದ ಮಾಸೂರಿಗೆ ಹೊರಟಿದ್ದ ಬಸ್ ಅನ್ನು ಅಡ್ಡಗಟ್ಟಿ 45 ನಿಮಿಷ ಸ್ಥಳದಲ್ಲಿಯೇ ನಿಲ್ಲಿಸಿದ ಆರೋಪದಲ್ಲಿ ಮೂವರು ಸಿಬ್ಬಂದಿ ಮೇಲೆ ಕೇಸ್ ದಾಖಲಾಗಿದೆ. ಹೀಗೆ ಜಿಲ್ಲಾದ್ಯಂತ ಒಟ್ಟು 48 ಸಿಬ್ಬಂದಿ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಂಚರಿಸಿದ 25 ಬಸ್: ಮುಷ್ಕರದಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ಆದರೂ ಕೆಲ ನೌಕರರು ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಗುರುವಾರ ಚಾಲಕರು, ನಿರ್ವಾಹಕರು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದರಿಂದ 25 ಬಸ್​ಗಳ ಓಡಾಟಕ್ಕೆ ಅನುಕೂಲವಾಗಿದೆ. ಹಾವೇರಿಯಿಂದ 8, ರಾಣೆಬೆನ್ನೂರಿನಿಂದ 3, ಹಾನಗಲ್ಲ 6, ಬ್ಯಾಡಗಿಯಿಂದ 1 ಹಾಗೂ ಸವಣೂರಿನಿಂದ 7 ಬಸ್​ಗಳು ಸಂಚರಿಸಿದವು. ಪ್ರಮುಖ ಮಾರ್ಗಗಳಲ್ಲಿ ಒಂದೆರಡು ಬಸ್​ಗಳು ಓಡಾಡಿದ್ದರಿಂದ ಪ್ರಯಾಣಿಕರಿಗೆ ಅಲ್ಪ ಪ್ರಮಾಣದಲ್ಲಿ ಅನುಕೂಲವಾಯಿತು. ಆದರೆ, ಗ್ರಾಮೀಣ ಭಾಗಕ್ಕೆ, ದೂರ ಮಾರ್ಗದ ಬಸ್​ಗಳ ಸಂಚಾರ ಇನ್ನೂ ಸಾಧ್ಯವಾಗಿಲ್ಲ. ಪ್ರಯಾಣಿಕರ ಪರದಾಟ ಮುಂದುವರಿದಿದ್ದು, ಖಾಸಗಿ ವಾಹನಗಳನ್ನೇ ಅವಲಂಬಿಸುತ್ತಿದ್ದಾರೆ. ಬಹುತೇಕರು ನಿಲ್ದಾಣಕ್ಕೆ ಬರುವುದನ್ನು ಕಡಿಮೆ ಮಾಡಿದ್ದು, ಟೆಂಪೋ, ಟ್ರ್ಯಾಕ್ಸ್ ಬಳಸಿ ವಿವಿಧೆಡೆ ಸಂಚರಿಸುತ್ತಿದ್ದಾರೆ. ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ಬರುವವರು ಬಸ್ ಇಲ್ಲದೆ ದುಪ್ಪಟ್ಟು ತೆತ್ತು ಖಾಸಗಿ ವಾಹನಗಳ ಮೂಲಕ ಬರುವಂತಾಗಿದೆ.

    ಗುರುವಾರ 25 ಬಸ್​ಗಳನ್ನು ಓಡಿಸಲಾಗಿದೆ. ಶೇ. 50ರಷ್ಟು ಮೆಕಾನಿಕಲ್ ಸಿಬ್ಬಂದಿ ಕರ್ತವ್ಯಕ್ಕೆ ಮರಳಿದ್ದಾರೆ. ಕರ್ತವ್ಯಕ್ಕೆ ಬರುವ ನೌಕರರಿಗೆ ಅಡ್ಡಿಪಡಿಸಿದ ಆರೋಪದಲ್ಲಿ 48 ಸಿಬ್ಬಂದಿ ಮೇಲೆ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಾಗಿದೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಹೋಗುವ ವಿಶ್ವಾಸವಿದೆ.

    | ವಿ.ಎಸ್. ಜಗದೀಶ, ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts