More

    ಲಲಿತಕಲಾ ಅಕಾಡೆಮಿಗಿಲ್ಲ ಭೂಮಿ!

    ಬೆಳಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ ಹೇಳಿಕೊಳ್ಳುವಂಥ ರಾಜ್ಯಮಟ್ಟದ ಕಚೇರಿಗಳಿಲ್ಲ. ಈ ಕೊರತೆ ನೀಗಿಸಲು ಬೆಳಗಾವಿಯಲ್ಲಿ ಕೇಂದ್ರ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಕೆಲ ತಿಂಗಳಿಂದ ಅಗತ್ಯ ಪ್ರಯತ್ನ ನಡೆದಿದೆ.

    ಬೆಳಗಾವಿಯವರೇ ಆದ ಕೇಂದ್ರ ಲಲಿತ ಕಲಾ ಅಕಾಡೆಮಿ ಪರಿಷತ್ ಸದಸ್ಯೆ ಡಾ. ಸೋನಾಲಿ ಸರ್ನೋಬತ್ ಅವರು 5 ತಿಂಗಳಿಂದ ಕುಂದಾನಗರಿ ಬೆಳಗಾವಿಯಲ್ಲಿ ಅಕಾಡೆಮಿಯ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ. ಅಂದುಕೊಂಡಂತೆ ಯೋಜನೆ ಪೂರ್ಣಗೊಂಡರೆ ಬೆಳಗಾವಿ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಆಕರ್ಷಣೀಯ ವೇದಿಕೆಯಾಗಿ ಹೊರ ಹೊಮ್ಮಲಿದೆ. ಜತೆಗೆ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ.

    ಬೆಳಗಾವಿಗೆ ತನ್ನದೇ ಆದ ಸಾಂಸ್ಕೃತಿಕ ನೆಲೆಗಟ್ಟಿದೆ. ಇಲ್ಲಿ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ ಆರಂಭವಾದರೆ, ದಕ್ಷಿಣ ಭಾರತದಲ್ಲಿನ 2ನೇ ಕಚೇರಿಯಾಗಲಿದೆ. ಯೋಜನೆ ಸಾಕಾರಕ್ಕೆ ಭೂಮಿ ನೀಡುವುದಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಸ್ಥಳೀಯ ಶಾಸಕರಿಗೆ ಅಕಾಡಮಿ ಪರಿಷತ್ ಸದಸ್ಯೆ ಸೋನಾಲಿ ಸರ್ನೋಬತ್ ಅವರು ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ಪ್ರಥಮ: ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರಗಳು ದೆಹಲಿ, ಮುಂಬೈ, ಚೆನ್ನೈ, ಭುವನೇಶ್ವರ, ಲಕ್ನೋ, ಕೋಲ್ಕತ ಮತ್ತು ಶಿಮ್ಲಾದಲ್ಲಿವೆ. ಕರ್ನಾಟಕದಲ್ಲಿ ಲಲಿತಕಲಾ ಅಕಾಡೆಮಿಯ ಮೊದಲ ಪ್ರಾದೇಶಿಕ ಕಚೇರಿ ಬೆಳಗಾವಿಯಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ. ಕಚೇರಿ ಸ್ಥಾಪನೆಗೆ ಈಗಾಗಲೇ ನೀಲಿನಕ್ಷೆ ರೂಪಿಸಲಾಗಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಕಲಾ ಗ್ಯಾಲರಿಗಳು, ಉದ್ಯಾನ, ಡಿಜಿಟಲ್ ಗ್ರಂಥಾಲಯ, ಅತಿಥಿ ಗೃಹ ಸೇರಿ ಹಲವು ಸೌಲಭ್ಯಗಳನ್ನು ಕಚೇರಿ ಹೊಂದಲಿದೆ.

    2 ಎಕರೆ ಅಗತ್ಯ: ಕೇಂದ್ರ ಸ್ಥಾಪನೆಗೆ ಎರಡು ಎಕರೆ ಜಾಗದ ಅಗತ್ಯವಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಸಮೀಪ ಕೇಂದ್ರ ಸ್ಥಾಪಿಸಲು ಸೋನಾಲಿ ಸರ್ನೋಬತ್ ಅವರು ಉತ್ಸುಕರಾಗಿದ್ದಾರೆ. ಜುಲೈ 31ರಂದು ಸಚಿವ ಸಿ.ಟಿ. ರವಿ ಅವರು ಜಿಲ್ಲಾಧಿಕಾರಿಗೆ
    ಪತ್ರ ಬರೆದು ಭೂಮಿ ನೀಡುವಂತೆ ಕೋರಿದ್ದಾರೆ.

    ವಿಳಂಬವಾದರೆ ಯೋಜನೆ ಹುಬ್ಬಳ್ಳಿ ಪಾಲು

    ಈ ಯೋಜನೆಯನ್ನು ರಾಜ್ಯ ಸರ್ಕಾರ, ಕೇಂದ್ರ ಮತ್ತು ಲಲಿತಕಲಾ ಅಕಾಡೆಮಿ ಜಂಟಿಯಾಗಿ ನಿರ್ವಹಿಸುತ್ತವೆ. ಯೋಜನೆಗೆ ಭೂಮಿ ಹುಡುಕುವಲ್ಲಿ ಸ್ಥಳೀಯ ಆಡಳಿತದ ಪಾತ್ರ ಅತೀ ಮುಖ್ಯವಾಗಿದೆ. ಸ್ಥಳೀಯ ಆಡಳಿತ ಮಂಡಳಿ ಭೂಮಿ ಗುರುತಿಸಿದ ತಕ್ಷಣ, ಅಕಾಡೆಮಿಯು ಹಣ ಮಂಜೂರು ಮಾಡುತ್ತದೆ. 2 ರಿಂದ 3 ವರ್ಷದಲ್ಲಿ ಕೇಂದ್ರ ತಲೆ ಎತ್ತಲಿದೆ. ಈ ಯೋಜನೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಭೂಮಿ ಇದೆ. ಬೆಳಗಾವಿ ಜಿಲ್ಲಾಡಳಿತ ವೇಗವಾಗಿ ಭೂಮಿ ಗುರುತಿಸದಿದ್ದರೆ ಈ ಯೋಜನೆ ಹುಬ್ಬಳ್ಳಿ ಪಾಲಾಗಲಿದೆ.

    ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಸ್ಥಳದ ಅವಶ್ಯಕತೆ ಇದೆ. ಸ್ಥಳೀಯ ಸಂಸದರು, ಶಾಸಕರಿಗೆ ಈ ಕುರಿತು ಮನವಿ ಮಾಡಿದ್ದೇವೆ. ಸ್ಥಳ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಸ್ಥಳ ಗುರುತಿಸಿದರೆ ಬೆಳಗಾವಿಯಲ್ಲಿ ಕಚೇರಿ ಆಗುತ್ತದೆ. ಇಲ್ಲದಿದ್ದರೆ ನಗರಕ್ಕೆ ಕಚೇರಿ ಕೈ ತಪ್ಪಲಿದೆ.
    | ಡಾ. ಸೋನಾಲಿ ಸರ್ನೋಬತ್ ಕೇಂದ್ರ ಲಲಿತಕಲಾ ಅಕಾಡೆಮಿ ಪರಿಷತ್ ಸದಸ್ಯೆ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts