More

    ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ಸ್ಥಿತಿ!

    ಸೋಮವಾರಪೇಟೆ: ಉತ್ತಮ ರಸ್ತೆಗಾಗಿ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಹಳ್ಳಿ ಗ್ರಾಮ ನಿವಾಸಿಗಳ ಕೂಗು ಅರಣ್ಯರೋದನವಾಗಿದೆ. ಕಾಗಡಿಕಟ್ಟೆ ಸೇತುವೆಯಿಂದ ಹಾರೋಹಳ್ಳಿ ಗ್ರಾಮಕ್ಕೆ ತೆರಳುವ 2 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದ್ದು, ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕಬೇಕಾಗಿದೆ.

    25 ರೈತ ಕುಟುಂಬಗಳು ವಾಸಿಸುತ್ತಿರುವ ಗ್ರಾಮದಲ್ಲಿ 150 ಮತದಾರರಿದ್ದಾರೆ. ಗ್ರಾಮದಲ್ಲಿ ರಾಜಕೀಯ ಪ್ರಭಾವಿಗಳು ಇಲ್ಲದ ಹಿನ್ನೆಲೆಯಲ್ಲಿ ಇಂತಹ ಸಮಸ್ಯೆ ಎದುರಿಸುವಂತಾಗಿದೆ. ಯಾವುದೇ ಶಾಲಾ ಬಸ್‌ಗಳು ಬರುತ್ತಿಲ್ಲ. ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಕಳುಹಿಸಲು ಸಮಸ್ಯೆಯಾಗಿದೆ. ಕೆಲವೊಮ್ಮೆ ಕಾಲ್ನಡಿಗೆಯಲ್ಲೇ ತೆರಳಬೇಕು. ಬಾಡಿಗೆ ವಾಹನಗಳಿಗೆ ದುಪ್ಪಟ್ಟು ಹಣ ನೀಡಬೇಕಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

    ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರಿದ್ದಾರೆ. ಸೋಮವಾರಪೇಟೆ ಪಟ್ಟಣದಲ್ಲಿ ವಾಸವಿರುವವರಿಗೂ ನೂರು ಎಕರೆಯಷ್ಟು ಕಾಫಿ ತೋಟಗಳಿವೆ. ದಿನಂಪ್ರತಿ ಪ್ಲಾಂಟರ್‌ಗಳು ಇದೇ ರಸ್ತೆಯಲ್ಲಿ ತಮ್ಮ ವಾಹನಗಳನ್ನು ಚಲಾಯಿಸಬೇಕು. ಕೃಷಿ ಫಸಲನ್ನು ಸಾಗಿಸಬೇಕು. ಅದರಲ್ಲೂ ಕಾರ್ಮಿಕರನ್ನು ತುಂಬಿಕೊಂಡ ವಾಹನಗಳು ಈ ಗುಂಡಿ ಬಿದ್ದ ರಸ್ತೆಗಳಲ್ಲಿ ಸರ್ಕಸ್ ಮಾಡಬೇಕಾಗಿದೆ.

    ಕಳೆದ 28 ವರ್ಷಗಳ ಹಿಂದೆ ಕಾಂಗ್ರೆಸ್‌ನ ಎ.ಎಂ.ಬೆಳ್ಳಿಯಪ್ಪ ಸಚಿವರಾಗಿದ್ದಾಗ, ಸೋಲಿಂಗ್ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೆ ರಸ್ತೆ ಡಾಂಬರೀಕರಣ ಮಾಡಲು ಜನಪ್ರತಿನಿಧಿಗಳು ಅನುದಾನ ಕಲ್ಪಿಸಿಲ್ಲ. ಎರಡು ಸ್ಥಳದಲ್ಲಿ ಕೆಲವೇ ಮೀಟರ್‌ಗಳಷ್ಟು ರಸ್ತೆ ಡಾಂಬರೀಕರಣ ಮಾಡಲಾಗಿದೆ. ಆದರೆ ಒಂದೇ ವರ್ಷಕ್ಕೆ ರಸ್ತೆ ಗುಂಡಿ ಬೀಳುತ್ತಿದೆ ಎಂದು ಆರೋಪಿಸಿದ್ದಾರೆ.

    ಕಾಗಡಿಕಟ್ಟೆಯಿಂದ ಹಾರೋಹಳ್ಳಿ ಗ್ರಾಮ ಮೂಲಕ ತಣ್ಣೀರುಹಳ್ಳ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಎರಡು ಕಿ.ಮೀ. ದೂರಕ್ಕೆ ಆಟೋರಿಕ್ಷಾದವರು 200 ರೂ.ಗಳ ಬಾಡಿಗೆ ಕೇಳುತ್ತಾರೆ. ಈ ಕಾರಣದಿಂದ ಬಹುತೇಕ ಜನರು ಕಾಲ್ನಡಿಗೆಯಲ್ಲಿ ಕಾಗಡಿಕಟ್ಟೆ ಅಥವಾ ತಣ್ಣೀರುಹಳ್ಳಕ್ಕೆ ತೆರಳಿ ಬಸ್ ಹತ್ತಿ ಪಟ್ಟಣಕ್ಕೆ ಹೋಗಬೇಕಾಗಿದೆ.

    ರಸ್ತೆ ಡಾಂಬರೀಕರಣವಾಗದ ಹೊರತು ಈ ಗ್ರಾಮದ ಮೂಲಕ ಬಸ್ ಸಂಚಾರ ಸಾಧ್ಯವಿಲ್ಲ. ಗಿರಿಜನರು ಹಾಗು ದಲಿತರು ವಾಸವಿರುವ ಕಾಲನಿಯ ಮಕ್ಕಳು ಇವತ್ತಿಗೂ ನಡೆದುಕೊಂಡೇ ಸರ್ಕಾರಿ ಶಾಲೆಗಳಿಗೆ ತೆರಳುತ್ತಾರೆ. ಮಕ್ಕಳನ್ನು ದೂರದಲ್ಲಿರುವ ಅಂಗನವಾಡಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಶಾಲೆಗೆ ಹೋಗುವ ಮಕ್ಕಳು ಭಯಪಡುತ್ತಾರೆ. ವೃದ್ಧರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಮಸ್ಯೆಯಾಗಿದೆ ಎನ್ನುವುದು ಗ್ರಾಮಸ್ಥರ ಅಳಲು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts