More

    ಕೊನೆಗೂ ನರ್ಸರಿ ಸಸಿಗಳ ದರ ಪರಿಷ್ಕರಣೆ ಮಾಡಿದ ಅರಣ್ಯ ಇಲಾಖೆ

    ನವೀನ್ ಬಿಲ್ಗುಣಿ ಶಿವಮೊಗ್ಗ
    ಅರಣ್ಯ ಇಲಾಖೆ ಕಳೆದ ವರ್ಷ ಮಾಡಿದ ಎಡವಟ್ಟಿಗೆ ಮಾರಾಟವಾಗದೆ ವಿವಿಧ ಜಾತಿಯ ಲಕ್ಷಾಂತರ ಸಸಿಗಳು ನರ್ಸರಿಗಳಲ್ಲೇ ಒಣಗಿವೆ. ಪ್ರತಿ ವರ್ಷ ಮುಗಿಬಿದ್ದು ಸಸಿಗಳನ್ನು ಖರೀದಿ ಮಾಡುತ್ತಿದ್ದ ರೈತರು, ಸಾರ್ವಜನಿಕರು ನರ್ಸರಿಗಳತ್ತ ಸುಳಿಯಂತಾಗಿದ್ದು ಕೊನೆಗೂ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಏಳೆಂಟು ತಿಂಗಳ ಬಳಿಕ ಶ್ರೀಗಂಧ, ಬೀಟೆ, ಸಿಲ್ವರ್, ಹೆಬ್ಬೇವು ಸೇರಿದಂತೆ ನಾನಾ ಬಗೆಯ ಕಸಿ ಮಾಡಿದ ಸಸಿಗಳ ದರವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

    ರೈತರು ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಕಸಿ ಮಾಡಿದ ನರ್ಸರಿ ಸಸಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಪ್ರಕ್ರಿಯೆ 2011ರಿಂದಲೂ ನಿರಂತರವಾಗಿತ್ತು. ಶ್ರೀಗಂಧ, ಬೀಟೆ, ಸಿಲ್ವರ್, ಹೆಬ್ಬೇವು ಸೇರಿ ಹಲವು ಬಗೆಯ ಕಾಡು ಜಾತಿ, ವಿವಿಧ ಜಾತಿಯ ಹಣ್ಣುಗಳ ಸಸಿಗಳನ್ನು ಅವುಗಳ ಗಾತ್ರದ ಆಧಾರದ ಮೇಲೆ ಅಲ್ಪ ಮೊತ್ತಕ್ಕೆ ವಿತರಿಸಲಾಗುತ್ತಿತ್ತು.
    ಆದರೆ 2022 ಅಕ್ಟೋಬರ್ 11ರಂದು ಆದೇಶ ಹೊರಡಿಸಿದ್ದ ಅರಣ್ಯ ಇಲಾಖೆ ದಿಢೀರ್ ಎಲ್ಲ ಸಸಿಗಳ ದರವನ್ನು 10 ಪಟ್ಟು ಹೆಚ್ಚಳ ಮಾಡಿತ್ತು. ಇದರಿಂದ ಸಾರ್ವಜನಿಕರು ಅರಣ್ಯ ಇಲಾಖೆಯ ನರ್ಸರಿಗಳತ್ತ ಮುಖ ಮಾಡದಂತಾಗಿತ್ತು. ವಿರೋಧದ ಬಳಿಕ ಅಂತಿಮವಾಗಿ ದರ ಪರಿಷ್ಕರಣೆ ಮಾಡಿ ಆದೇಶಿಸಿದ್ದು ಖರೀದಿದಾರರು ತುಸು ನಿಟ್ಟುಸಿರು ಬಿಡುವಂತಾಗಿದೆ.
    ಮೂಲೆ ಸೇರಿವೆ ಲಕ್ಷಾಂತರ ಸಸಿಗಳು: ಶಿವಮೊಗ್ಗ ತಾಲೂಕಿನಲ್ಲಿ 6, ಶಿಕಾರಿಪುರದಲ್ಲಿ ನಾಲ್ಕು, ತೀರ್ಥಹಳ್ಳಿ, ಸಾಗರ, ಸೊರಬದಲ್ಲಿ ತಲಾ ಮೂರು, ಹೊಸನಗರದಲ್ಲಿ ಎರಡು ಮತ್ತು ಭದ್ರಾವತಿಯಲ್ಲಿ ಒಂದು ನರ್ಸರಿಯನ್ನು ಹೊಂದಿದ್ದು ಪ್ರತಿ ವರ್ಷ ರೈತರಿಗೆ ವಿತರಿಸಲು ಲಕ್ಷಾಂತರ ಸಸಿಗಳನ್ನು ಕಸಿ ಮಾಡಿ ಬೆಳೆಸಲಾಗುತ್ತಿದೆ. ಆದರೆ ಅರಣ್ಯ ಇಲಾಖೆಯ ಅವೈಜ್ಞಾನಿಕ ದರ ಏರಿಕೆ ಪರಿಣಾಮ ಜಿಲ್ಲೆಯ 22 ನರ್ಸರಿಗಳಲ್ಲೂ ಸಸಿಗಳು ಶೇ.10 ರಷ್ಟೂ ಮಾರಾಟವಾಗದೆ ಮೂಲೆ ಸೇರುವಂತಾಗಿದೆ.
    ವಿರೋಧದ ಬಳಿಕ ಆದೇಶ ವಾಪಸ್: 58, 69, 812, 1016, 1420 ಗಾತ್ರ(ಸುತ್ತಳತೆ)ದ ಸಸಿಗಳನ್ನು ನರ್ಸರಿಗಳ ಮೂಲಕ ರಿಯಾಯಿತಿ ದರಲ್ಲಿ ರೈತರಿಗೆ ವಿತರಿಸಲಾಗುತ್ತಿದೆ. 58, 69 ಗಾತ್ರದ ಪ್ರತಿ ಸಸಿಗಳಿಗೆ ತಲಾ ಒಂದು ರೂ., 812 ಗಾತ್ರದ ಪ್ರತಿ ಸಸಿಗೆ 3 ರೂ. ಹಾಗೂ 1016, 1420 ಗಾತ್ರದ ಪ್ರತಿ ಸಸಿಗಳಿಗೆ 5 ರೂ. ನಿಗದಿಯಾಗಿತ್ತು. ಆದರೆ ಕಳೆದ ವರ್ಷ 58 ಗಾತ್ರದ ಪ್ರತಿ ಸಸಿಗೆ 5 ರೂ., 69 ಗಾತ್ರದ ಪ್ರತಿ ಸಸಿಗೆ 6 ರೂ., 812 ಗಾತ್ರದ ಪ್ರತಿ ಸಸಿಗೆ 23 ರೂ., 1016, ಗಾತ್ರದ ಸಸಿಗೆ 72 ಮತ್ತು 1420 ಗಾತ್ರದ ಸಸಿಗೆ 111 ರೂ.ಗೆ ಹೆಚ್ಚಿಸಲಾಗಿತ್ತು. ಹೀಗಾಗಿ ಗುರುವಾರ(ಜು.13) ಆದೇಶವನ್ನು ಹಿಂಪಡೆದಿರುವ ಸರ್ಕಾರ ದರ ಪರಿಷ್ಕರಣೆ ಮಾಡಿದ್ದು 58 ಗಾತ್ರದ ಪ್ರತಿ ಸಸಿಗೆ 2 ರೂ., 69 ಗಾತ್ರದ ಪ್ರತಿ ಸಸಿಗೆ 3 ರೂ. ಮತ್ತು 812 ಗಾತ್ರದ ಪ್ರತಿ ಸಸಿಗೆ 6 ರೂ. ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.
    ಬಂದ ದಾರಿಗೆ ಸುಂಕವಿಲ್ಲ: ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ರೈತರು ಮುಗಿಬಿದ್ದು ಸಸಿಗಳನ್ನು ಖರೀದಿ ಮಾಡುತ್ತಿದ್ದರು. ಪ್ರತಿ ವರ್ಷ 2ರಿಂದ 3 ಲಕ್ಷ ಸಸಿಗಳ ಮಾರಾಟವಾಗುತ್ತಿದ್ದವು. ಈ ಬಾರಿ ನರ್ಸರಿಗಳಲ್ಲಿನ ಸಸಿಗಳು ರೈತರಿಗೆ ಅವಶ್ಯಕತೆ ಇದ್ದರೂ ದರ ನೋಡಿ ಖರೀದಿಸದೆ ವಾಪಸಾಗಿದ್ದೇ ಹೆಚ್ಚು. ಕಡಿಮೆ ದರದಲ್ಲಿ ಸಿಗುತ್ತಿದ್ದ ಸಸಿಗಳ ದರ ಏಕಾಏಕಿ ಹೆಚ್ಚಾಗಿದ್ದರಿಂದ ಬಹಳಷ್ಟು ಮಂದಿ ಬಂದ ದಾರಿಗೆ ಸುಂಕವಿಲ್ಲದಂತೆ ಬರಿಗೈಯಲ್ಲೇ ಮರಳಿದ್ದರು.
    ಇ-ನರ್ಸರಿಯಲ್ಲೂ ಸಸಿಗಳ ಮಾಹಿತಿ: ಸಸಿಗಳ ಲಭ್ಯತೆ ಬಗ್ಗೆ ರೈತರು ಮತ್ತು ಸಾರ್ವಜನಿಕರಿಗೆ ಕ್ಷಣಾರ್ಧದಲ್ಲಿ ಮಾಹಿತಿ ಲಭ್ಯವಾಗುವಂತೆ ಅರಣ್ಯ ಇಲಾಖೆ ಮಾಡಿದೆ. ಇ-ನರ್ಸರಿ ಮೂಲಕ ಯಾವ ಜಾತಿ ಮತ್ತು ಎಷ್ಟು ಅಳತೆಯ ಸಸಿಗಳು ಲಭ್ಯವಿವೆ ಎಂಬ ಮಾಹಿತಿಯನ್ನು ರೈತರೇ ವೆಬ್‌ಸೈಟ್ ಮೂಲಕ ಕುಳಿತಲ್ಲೇ ಪಡೆಯಬಹುದು. ಸಮೀಪದ ರೇಂಜ್ ವ್ಯಾಪ್ತಿಯ ನರ್ಸರಿಗಳ ಮಾಹಿತಿಯನ್ನೂ ವೆಬ್‌ಸೈಟ್ ಒದಗಿಸಲಿದೆ. ಇದರಿಂದ ಸಸಿಗಳಿಗಾಗಿ ಅರಣ್ಯ ಇಲಾಖೆ ಕಚೇರಿಗೆ ಅಲೆದಾಡಬೇಕಿಲ್ಲ. ಅಲ್ಲದೆ ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ದೂರವಾಣಿ ಸಂಖ್ಯೆ ಸಿಗುವಂತೆ ಮಾಡಲಾಗಿದೆ.
    ಸಿಲ್ವರ್, ಹೆಬ್ಬೇವಿಗೆ ಡಿಮಾಂಡ್: ಪ್ರತಿ ವರ್ಷ ಕಾಡು ಜಾತಿಯ ಸಸಿಗಳನ್ನು ಬೆಳೆಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳೇ ದಂಬಾಲು ಬೀಳಬೇಕಿತ್ತು. ಎಲ್ಲೋ ಬೆರಳೆಣಿಕೆಯಷ್ಟು ರೈತರು ಕೆಲವೊಂದು ತಳಿಯ ಸಸಿಗಳನ್ನು ಕೊಂಡೊಯ್ಯುತ್ತಿದ್ದರು. ಸಬ್ಸಿಡಿ ದರದಲ್ಲಿ ವಿತರಿಸುವುದಾಗಿ ಘೋಷಿಸಿದ್ದರೂ ಖರೀದಿಗೆ ಆಸಕ್ತಿ ತೋರುತ್ತಿರಲಿಲ್ಲ. ಆದರೆ ಈಗ ಸಸಿಗಳ ಖರೀದಿಗೆ ಸ್ವಯಂಪ್ರೇರಿತವಾಗಿ ರೈತರೇ ಮುಂದೆ ಬಂದಿದ್ದಾರೆ. ಶ್ರೀಗಂಧ, ಬೀಟೆ, ತೇಗ, ನೇರಳೆ, ಹೊನ್ನೆ ಸಸಿಗಳಿಗಿಂತ ಸಿಲ್ವರ್, ಹೆಬ್ಬೇವು, ಸಾಗವಾನಿಗೆ ಹೆಚ್ಚು ಬೇಡಿಕೆ ಇದೆ.

    ಕೊನೆಗೂ ನರ್ಸರಿ ಸಸಿಗಳ ದರ ಪರಿಷ್ಕರಣೆ ಮಾಡಿದ ಅರಣ್ಯ ಇಲಾಖೆ

    2022ರಲ್ಲಿ ನರ್ಸರಿಗಳಲ್ಲಿನ ಸಸಿಗಳ ದರ ಪರಷ್ಕರಣೆ ಆಗಿತ್ತು. ಹಿಂದಿನ ವರ್ಷಕ್ಕೂ ಈ ಬಾರಿಗೂ ದರ ಹೆಚ್ಚಳವಾಗಿದ್ದರಿಂದ ಸಾರ್ವಜನಿಕರಿಂದ ಬೇಡಿಕೆ ಕಡಿಮೆಯಾಗಿತ್ತು. ನರ್ಸರಿಗಳಲ್ಲಿ ಸಸಿಗಳು ಉಳಿದ ಪರಿಣಾಮ ಗುರುವಾರ ಸರ್ಕಾರ ದರ ಪರಿಷ್ಕರಿಸಿ ಮತ್ತೆ ಆದೇಶ ಹೊರಡಿಸಿದೆ. ಇನ್ಮುಂದೆ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಸಸಿಗಳು ನರ್ಸರಿಗಳಲ್ಲಿ ಸಿಗಲಿವೆ.

    ಶಿವಶಂಕರ್
    ಶಿವಮೊಗ್ಗ ಶಂಕರ ವಲಯ ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts