ಶೇಷ ಭಾರತಕ್ಕೆ ಇರಾನಿ ಕಪ್ ಕಿರೀಟ: ಮುಕೇಶ್ ಮ್ಯಾಜಿಕ್, ಕನ್ನಡಿಗನಿಗೆ ಒಲಿದ ಪಂದ್ಯಶ್ರೇಷ್ಠ ಪ್ರಶಸ್ತಿ

ಜಮ್ಮು-ಕಾಶ್ಮೀರ ಎದುರು 167 ರನ್ ಜಯ
ಶೇಷ ಭಾರತಕ್ಕೆ ಇರಾನಿ ಕಪ್ ಕಿರೀಟ
ಶೇಷ ಭಾರತಕ್ಕೆ ಇರಾನಿ ಕಪ್ ಕಿರೀಟ
Published on: 

ಶ್ರೀನಗರ (ಕಾಶ್ಮೀರ): ವೇಗಿ ಮುಕೇಶ್ ಕುಮಾರ್ (33ಕ್ಕೆ 6) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಶೇಷ ಭಾರತ ತಂಡ 62ನೇ ಆವೃತ್ತಿಯ ಇರಾನಿ ಕಪ್ ಟ್ರೋಫಿ ಗೆದ್ದುಕೊಂಡಿದೆ. ರಿಷಭ್ ಪಂತ್ ಸಾರಥ್ಯದ ಶೇಷ ಭಾರತ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ ರಣಜಿ ಟ್ರೋಫಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ಎದುರು 167 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಶೇರ್ ಐ ಕಾಶ್ಮೀರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 4ನೇ ದಿನ ಬೆಳಗ್ಗೆ 8 ವಿಕೆಟ್‌ಗೆ 306 ರನ್‌ಗಳಿಂದ ಎರಡನೇ ಸರದಿ ಮುಂದುವರಿಸಿದ ಶೇಷ ಭಾರತ 99.5 ಓವರ್‌ಗಳಲ್ಲಿ 319 ರನ್‌ಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನ 41 ರನ್ ಹಿನ್ನಡೆಯ ನಡುವೆಯೂ ಕನ್ನಡಿಗ ಆರ್.ಸ್ಮರಣ್(135) ಶತಕದ ಬಲದಿಂದ ಆತಿಥೇಯರ ಗೆಲುವಿಗೆ 279 ರನ್ ಗುರಿ ನೀಡಿತು. ಚೇಸಿಂಗ್ ಆರಂಭಿಸಿದ ಜಮ್ಮು-ಕಾಶ್ಮೀರ, ವೇಗಿಗಳಾದ ಮುಕೇಶ್ ಕುಮಾರ್ ಹಾಗೂ ಆಕಾಶ್ ದೀಪ್ (25ಕ್ಕೆ 3) ದಾಳಿಗೆ ತತ್ತರಿಸಿ 28.4 ಓವರ್‌ಗಳಲ್ಲಿ 111 ರನ್‌ಗೆ ಎರಡನೇ ಸರದಿಯಲ್ಲಿ ಸರ್ವಪತನ ಕಂಡಿತು. ಇದರೊಂದಿಗೆ ಭಾರತ ಟೆಸ್ಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಜನ್ಮದಿನದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಂಡರು.

ಶೇಷ ಭಾರತ: 237 ಹಾಗೂ 99.5 ಓವರ್‌ಗಳಲ್ಲಿ 319 (ಸ್ಮರಣ್ 135, ಮುಕೇಶ್ ಚೌಧರಿ 11, ಮುಕೇಶ್ 2*, ಸುನೀಲ್ 56ಕ್ಕೆ 3). ಜಮ್ಮು-ಕಾಶ್ಮೀರ: 278 ಹಾಗೂ 28.4 ಓವರ್‌ಗಳಲ್ಲಿ 111 (ಕಮ್ರನ್ 32, ಶುಭಂ 36, ಶುಭಂ ಪುಂದಿರ್ 9, ಅಬ್ದುಲ್ 20, ಅಬಿದ್ 5, ಮುಕೇಶ್ 33ಕ್ಕೆ 6, ಅಕಾಶ್‌ದೀಪ್ 25ಕ್ಕೆ 3). ಪಂದ್ಯಶ್ರೇಷ್ಠ: ಆರ್. ಸ್ಮರಣ್

31. ಶೇಷ ಭಾರತ ತಂಡ 31ನೇ ಬಾರಿ ಇರಾನ್ ಕಪ್ ಜಯಿಸಿದ್ದು, ಒಮ್ಮೆ ಜಂಟಿ ಚಾಂಪಿಯನ್ ಆಗಿತ್ತು. ಕಳೆದ ಐದು ಆವೃತ್ತಿಗಳಲ್ಲಿ ಮೂರನೇ ಬಾರಿಗೆ ಪ್ರಶಸ್ತಿ ಜಯಿಸಿದ ದೃಷ್ಟಾಂತ ಇದಾಗಿದೆ.

50. ಚಾಂಪಿಯನ್ ಶೇಷ ಭಾರತ ತಂಡ 50 ಲಕ್ಷ ರೂಪಾಯಿ ನಗದು ಬಹುಮಾನ ಪಡೆದರೆ, ರನ್ನರ್ ಅಪ್ ಜಮ್ಮು-ಕಾಶ್ಮೀರ ತಂಡ 25 ಲಕ್ಷ ರೂ. ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net