

ನಿಶ್ಶಿನ್: ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಸ್ಪರ್ಧೆಯ ಪುರುಷರ ವಿಭಾಗದ ನಾಕೌಟ್ ಪಂದ್ಯಗಳು ಸೋಮವಾರ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಭಾರತ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಅನನುಭವಿ ಅಫ್ಘಾನಿಸ್ತಾನ ಎದುರು ಅಭಿಯಾನ ಆರಂಭಿಸಲಿದೆ. ಇದು ಕಳೆದ ಆವೃತ್ತಿಯ ಫೈನಲ್ ಪಂದ್ಯದ ಪುನರಾವರ್ತನೆ ಎನಿಸಿದೆ. 2023ರ ಆವೃತ್ತಿಯ ಚಿನ್ನ ವಿಜೇತ ಭಾರತ ತಂಡ ಅಗ್ರ ಶ್ರೇಯಾಂಕಿತ ತಂಡವಾಗಿ ನೇರವಾಗಿ ಎಂಟರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿದೆ.
ಮಹಿಳಾ ವಿಭಾಗದ ಪಂದ್ಯಗಳು ನಡೆದ ಕೊರೊಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಪುರುಷರ ಪಂದ್ಯಗಳೂ ನಡೆಯಲಿವೆ. ಆದರೆ, ಆತಿಥೇಯ ಜಪಾನ್ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ಸೋಲಿನಂಚಿನಿಂದ ಪಾರಾಗಿದ್ದ ಶ್ರೇಯಸ್ ಅಯ್ಯರ್ ಪಡೆ ಸ್ವರ್ಣ ಪದಕದ ಫೇವರಿಟ್ ಎನಿಸಿದರೂ, ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಸವಾಲು ಹೊಂದಿದೆ. ಮಹಿಳಾ ಪಂದ್ಯಗಳಲ್ಲಿ ಬ್ಯಾಟರ್‌ಗಳಿಗೆ ಪೂರಕವಾಗಿದ್ದ ಪಿಚ್, ಪುರುಷರ ಆರಂಭಿಕ ಹಂತದಲ್ಲಿ ಬೌಲರ್‌ಗಳಿಗೆ ನೆರವು ನೀಡಿದೆ.
ಪೂರ್ಣ ಪ್ರಮಾಣದ ಟಿ20 ತಂಡದೊಂದಿಗೆ ಭಾರತ ಆಡಲಿದ್ದು, ಅಫ್ಘಾನಿಸ್ತಾನ ತಂಡ ಎರಡನೇ ಸ್ತರದ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ. ಜಪಾನ್ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ವೇಗಿ ಜಸ್‌ಪ್ರೀತ್ ಬುಮ್ರಾ ಪುನರಾಗಮನ ನಿರೀಕ್ಷೆಯಿದ್ದು, ಯಶ್ ಠಾಕೂರ್ ಸ್ಥಾನ ಬಿಟ್ಟುಕೊಡಬಹುದು. ಸತತ ಮೂರು ಗೆಲುವು ಭಾರತಕ್ಕೆ ಮತ್ತೊಮ್ಮೆ ಚಿನ್ನದ ಪದಕ ತಂದುಕೊಡಲಿದ್ದು, ಎಲ್ಲ ಪಂದ್ಯಗಳು ಮಹತ್ವದಾಗಿರಲಿವೆ. ಸಂಜು ಸ್ಯಾಮ್ಸನ್-ಅಭಿಷೇಕ್ ಶರ್ಮ ಯಶಸ್ವಿ ಆರಂಭಿಕ ಜೋಡಿ ನಡುವೆ 15 ವರ್ಷದ ವೈಭವ್ ಸೂರ್ಯವಂಶಿಗೆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ.
ಆರಂಭ: ಬೆಳಗ್ಗೆ 10.00
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.
ಮಳೆ ಭೀತಿ, ರದ್ದಾದರೆ...
ಭಾರತ-ಆ್ಘನ್ ನಡುವಿನ ಪಂದ್ಯಕ್ಕೆ ಮಳೆ ಭೀತಿ ಇದ್ದು, ಒಂದೂ ಎಸೆತವಿಲ್ಲದೆ ರದ್ದುಗೊಳ್ಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಪಂದ್ಯ ರದ್ದಾದರೆ ಐಸಿಸಿ ಟಿ20 ಶ್ರೇಯಾಂಕ ಆಧಾರದಲ್ಲಿ ಅಗ್ರ ಶ್ರೇಯಾಂಕಿತ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ. ಶುಕ್ರವಾರ ಇದೇ ಅಂಗಣದಲ್ಲಿ ನಿಗದಿಯಾಗಿದ್ದ ಎರಡು ಪಂದ್ಯಗಳು ರದ್ದುಗೊಂಡಿದ್ದವು.
2023ರ ಫೈನಲ್ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ನಂತರ ಐಸಿಸಿ ಟಿ20 ಶ್ರೇಯಾಂಕ ಆಧಾರದಲ್ಲಿ ಭಾರತ ಚಿನ್ನ ಒಲಿಸಿಕೊಂಡಿತ್ತು.
ಎರಡನೇ ಸ್ತರದ ತಂಡ
ಅಂತಾರಾಷ್ಟ್ರೀಯ ಬಿಗಿ ವೇಳಾಪಟ್ಟಿಯಿಂದಾಗಿ ಆ್ಘನ್ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ರಶೀದ್ ಖಾನ್, ರಹಮಾನುಲ್ಲ ಗುರ್ಬಜ್ ಹಾಗೂ ಮೊಹಮದ್ ನಬಿ ಸಹ ಅಲಭ್ಯರಾಗಿದ್ದಾರೆ. ಗುಂಪಿನ ಕೊನೇ ಪಂದ್ಯದಲ್ಲಿ ಆ್ಘನ್, ನೇಪಾಳ ಎದುರು ಸೋಲು ಅನುಭವಿಸಿದ ಹಿನ್ನಡೆಯೂ ಹೊಂದಿದೆ. ಇತ್ತೀಚೆಗೆ ಭಾರತ ವಿರುದ್ಧ ಆಡಿದ ಟಿ20 ತಂಡದ 15 ಆಟಗಾರರ ಪೈಕಿ ಡಾರ್ವಿಶ್ ರಸೂಲಿ (ನಾಯಕ), ಅಬ್ದೂಲ್ಲ ಅಹ್ಮದ್‌ಜೈ ಇಬ್ಬರು ಹೊರತುಪಡಿಸಿ 6 ಅನ್‌ಕ್ಯಾಪ್ಡ್ ಆಟಗಾರರು ಹಾಗೂ ಐವರು 10ಕ್ಕಿಂತರ ಕಡಿಮೆ ಅಂತಾರಾಷ್ಟ್ರೀಯ ಪಂದ್ಯಳನ್ನಾಡಿರುವ ಆಟಗಾರರಾಗಿದ್ದಾರೆ. ಅನುಭವಿ ಆಲ್ರೌಂಡರ್ ಮೊಹಮದ್ ನಬಿ ಪುತ್ರ 20 ವರ್ಷದ ಹಸನ್ ಇಸಖಿಲ್ ಏಷ್ಯಾಡ್‌ಗೆ ಸ್ಥಾನ ಪಡೆದಿದ್ದಾರೆ.