ISL: ಬೆಂಗಳೂರು FC ಗೆಲುವಿನ ಆರಂಭ

ಮಾಜಿ ಚಾಂಪಿಯನ್ ಬೆಂಗಳೂರು ಎಫ್​ಸಿ ತಂಡ ಇಂಡಿಯನ್ ಸೂಪರ್ ಫುಟ್‌ಬಾಲ್ ಲೀಗ್ (ಐಎಸ್‌ಎಲ್) 13ನೇ ಆವೃತ್ತಿಯಲ್ಲಿ ಶುಭಾರಂಭ ಕಂಡಿದೆ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದ 89ನೇ ನಿಮಿಷದಲ್ಲಿ ಮೆನ್ನೋ ಕೊಚ್ ಸಿಡಿಸಿದ ಆಕರ್ಷಕ ಹೆಡರ್ ಮೂಲಕ ಆತಿಥೇಯ ಬೆಂಗಳೂರು ಎಫ್​ಸಿ 3-2 ರಿಂದ ಸ್ಪೋರ್ಟಿಂಗ್ ಕ್ಲಬ್ ದೆಹಲಿ (ಎಸ್‌ಸಿ ದೆಹಲಿ) ಎದುರು ರೋಚಕ ಗೆಲುವು ಒಲಿಸಿಕೊಂಡಿತು.
football
BENGALURU FCಸಂಗ್ರಹ ಚಿತ್ರ
Published on: 

ಬೆಂಗಳೂರು: ಮಾಜಿ ಚಾಂಪಿಯನ್ ಬೆಂಗಳೂರು ಎಫ್​ಸಿ ತಂಡ ಇಂಡಿಯನ್ ಸೂಪರ್ ಫುಟ್‌ಬಾಲ್ ಲೀಗ್ (ಐಎಸ್‌ಎಲ್) 13ನೇ ಆವೃತ್ತಿಯಲ್ಲಿ ಶುಭಾರಂಭ ಕಂಡಿದೆ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದ 89ನೇ ನಿಮಿಷದಲ್ಲಿ ಮೆನ್ನೋ ಕೊಚ್ ಸಿಡಿಸಿದ ಆಕರ್ಷಕ ಹೆಡರ್ ಮೂಲಕ ಆತಿಥೇಯ ಬೆಂಗಳೂರು ಎಫ್​ಸಿ 3-2 ರಿಂದ ಸ್ಪೋರ್ಟಿಂಗ್ ಕ್ಲಬ್ ದೆಹಲಿ (ಎಸ್‌ಸಿ ದೆಹಲಿ) ಎದುರು ರೋಚಕ ಗೆಲುವು ಒಲಿಸಿಕೊಂಡಿತು.

10 ಸಾವಿರಕ್ಕೂ ಅಧಿಕ ಪ್ರೇಕಕ್ಷರಿಂದ ತುಂಬಿದ್ದ ಅಂಗಣದಲ್ಲಿ ಬಿಎ್ಸಿ ಮೊದಲಾರ್ಧದ ಹಿನ್ನಡೆಯಿಂದ ಪುಟಿದೆದ್ದಿತು. ಬೆಂಗಳೂರು ಪರ ಪದಾರ್ಪಣೆ ಪಂದ್ಯವನ್ನಾಡಿದ ಬೋರ್ಜಾ ಮಾರ್ಟಿನೆಜ್ (22, 72) ಅವಳಿ ಗೋಲು ಸಿಡಿಸಿದರೆ, ಮೆನ್ನೋ ಕೊಚ್ (89) ಗೆಲುವಿನ ರೂವಾರಿ ಎನಿಸಿದರು. ಇದಕ್ಕೆ ಮುನ್ನ ಮೆನ್ನೋ ಕೊಚ್ (32) ದೆಹಲಿ ತಂಡಕ್ಕೆ ಗೋಲಿನ ಉಡುಗೊರೆ ನೀಡಿದರೆ, ರೋಡ್ರಿ ಗಿನ್ಹೋ (26) ಪಂದ್ಯ ಸಮಬಲ ಗೋಲುಗಳಿಸಿದ್ದರು.

FOOTBALL
Menno Kochಸಂಗ್ರಹ ಚಿತ್ರ

ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಬೆಂಗಳೂರು ಎಫ್‌ಸಿ, 22ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿತು. ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ ಬೋರ್ಜಾ ಮಾರ್ಟಿನೆಸ್, ರಯಾನ್ ವಿಲಿಯಮ್ಸ್ ನೀಡಿದ ಪಾಸ್‌ನ ನೆರವಿನಿಂದ ಪೆನಾಲ್ಟಿ ಬಾಕ್ಸ್‌ನ ಹೊರಗಿನಿಂದ ಎಡಗಾಲಿನಲ್ಲಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ, ಎಸ್‌ಸಿ ದೆಹಲಿ ತಕ್ಷಣವೇ ತಿರುಗೇಟು ನೀಡಿತು. 26ನೇ ನಿಮಿಷದಲ್ಲಿ ಹ್ನಮ್ಟೆ ಅವರ ನೆರವಿನಿಂದ ರೊಡ್ರಿಗಿನ್ಹೊ ಗೋಲು ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು. 32ನೇ ನಿಮಿಷದಲ್ಲಿ ಜುವಾನ್ ಪೆನಾ ನೀಡಿದ ಕ್ರಾಸ್ ಅನ್ನು ತಡೆಯುವ ಪ್ರಯತ್ನದಲ್ಲಿ ಬೆಂಗಳೂರು ಎಫ್‌ಸಿ ಡಿಫೆಂಡರ್ ಮೆನ್ನೊ ಕೋಚ್ ಅವರಿಂದ ಸ್ವಯಂ ಗೋಲು ದಾಖಲಾಯಿತು.

ಇದರಿಂದ ಎಸ್‌ಸಿ ದೆಹಲಿ ಮೊದಲಾರ್ಧದ ಅಂತ್ಯಕ್ಕೆ 2-1ರ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಸಮಬಲ ಸಾಧಿಸಲು ಪಟ್ಟುಬಿಡದೆ ಹೋರಾಡಿದ ಬೆಂಗಳೂರು ಎಫ್‌ಸಿ, 75ನೇ ನಿಮಿಷದಲ್ಲಿ ಯಶಸ್ಸು ಕಂಡಿತು. ಮಿಹೈಲೊ ಪೆರೊವಿಚ್ ನೀಡಿದ ಪಾಸ್ ಸ್ವೀಕರಿಸಿದ ಮಾರ್ಟಿನೆಸ್, ಮತ್ತೊಮ್ಮೆ ನಿಖರವಾಗಿ ಗೋಲು ಬಾರಿಸಿ ಪಂದ್ಯವನ್ನು 2-2ರಲ್ಲಿ ಸಮಬಲಗೊಳಿಸಿದರು. ಈ ಮೂಲಕ ಅವರು ಪಂದ್ಯದಲ್ಲಿ ತಮ್ಮ ಎರಡನೇ ಗೋಲು ದಾಖಲಿಸಿದರು. ಗೆಲುವಿನ ಗುರಿಯೊಂದಿಗೆ ಮುನ್ನಡೆದ ಬೆಂಗಳೂರು ಎಫ್‌ಸಿಗೆ 89ನೇ ನಿಮಿಷದಲ್ಲಿ ನಿರ್ಣಾಯಕ ಕ್ಷಣ ಎದುರಾಯಿತು. ಬದಲಿ ಆಟಗಾರ ಸೋಹಂ ವರ್ಷ್ನೇಯ ಬಾಕ್ಸ್‌ನೊಳಗೆ ನೀಡಿದ ಕ್ರಾಸ್‌ಗೆ ಮೆನ್ನೊ ಕೋಚ್ ಹೆಡರ್ ಮೂಲಕ ಗೋಲು ಬಾರಿಸಿದರು.

ಮೊದಲಾರ್ಧದಲ್ಲಿ ಸ್ವಯಂ ಗೋಲು ದಾಖಲಿಸಿದ್ದ ಕೋಚ್, ಅಂತಿಮ ಕ್ಷಣದಲ್ಲಿ ಗೆಲುವಿನ ಗೋಲು ಗಳಿಸುವ ಮೂಲಕ ತಂಡದ ಗೆಲುವಿನ ರೂವಾರಿಯಾದರು. ಪಂದ್ಯದುದ್ದಕ್ಕೂ ಪೈಪೋಟಿಯ ಆಟ ಪ್ರದರ್ಶಿಸಿದ ಎಸ್‌ಸಿ ದೆಹಲಿ, ಬೆಂಗಳೂರು ಎಫ್‌ಸಿಗೆ ಕಠಿಣ ಸವಾಲೊಡ್ಡಿತು. ಆದರೆ, ಕೊನೆಯ ಕ್ಷಣದವರೆಗೂ ಹೋರಾಟ ಮುಂದುವರಿಸಿದ ಬೆಂಗಳೂರು ಎಫ್‌ಸಿ 3-2ರ ಜಯದೊಂದಿಗೆ ಪೂರ್ಣ ಮೂರು ಅಂಕಗಳನ್ನು ತನ್ನದಾಗಿಸಿಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net