More

    ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆ ಬೆನ್ನಲೆ ಶಿಶು ಮಾರಾಟ ಜಾಲ ಬೆಳಕಿಗೆ

    ಬೆಂಗಳೂರು: ರಾಜ್ಯದಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಪ್ರಕರಣ ಮಾಸುವ ಮೊದಲೇ ಶಿಶು ಮಾರಾಟ ದಂಧೆ ಬೆಳಕಿಗೆ ಬಂದಿದ್ದು, ಸಿಸಿಬಿ ಪೊಲೀಸರು ನಾಲ್ವರು ಮಹಿಳೆಯರು ಸೇರಿ ಐವರ ಗ್ಯಾಂಗ್‌ನ್ನು ಬಂಧಿಸಿದ್ದಾರೆ. ಶಿಶು ಮಾರಾಟ ದಂಧೆ ಕೂಡ ರಾಜ್ಯ ವ್ಯಾಪಿ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದೆ.

    ತಮಿಳುನಾಡಿನ ಈರೋಡ್ ಮೂಲದ ಕಣ್ಣನ್ ರಾಮಸಾಮಿ (51), ಹೇಮಲತಾ (27), ಮುರುಗೇಶ್ವರಿ (22), ಶರಣ್ಯ (33) ಮತ್ತು ಮಹಾಲಕ್ಷ್ಮಿ ಬಂಧಿತರು. ಆರೋಪಿಗಳಿಂದ 20 ದಿನದ ಗಂಡು ಶಿಶುವನ್ನು ರಕ್ಷಣೆ ಮಾಡಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
    ಮಂಡ್ಯ, ಮೈಸೂರಿನಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತ ಮಾಡಿಸುತ್ತಿದ್ದ ಗ್ಯಾಂಗ್‌ನ್ನು ಬೈಯಪ್ಪನಹಳ್ಳಿ ಪೊಲೀಸರು ಪತ್ತೆಹಚ್ಚಿ 9 ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿರುವ ಇತರ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ. ಇದರ ನಡುವೆ ಶಿಶು ಮಾರಾಟ ದಂಧೆ ಬಗ್ಗೆ ಸಿಸಿಬಿಗೆ ಖಚಿತ ಮಾಹಿತಿ ಲಭ್ಯವಾಗಿ ಅಕ್ರಮ ದಂಧೆಯನ್ನು ಪತ್ತೆಹಚ್ಚಿದ್ದಾರೆ.

    ಮಕ್ಕಳಾಗದ ದಂಪತಿಯನ್ನು ಗುರುತಿಸಿ ಅಂತವರಿಗೆ ಲಕ್ಷಾಂತರ ರೂಪಾಯಿಗೆ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಸಿಸಿಬಿ ವಿಶೇಷ ತಂಡ ಬಲೆಬೀಸಿದಾಗ ಆರೋಪಿ ಮಹಾಲಕ್ಷ್ಮಿ ಎಂಬಾಕೆ ಸೆರೆಸಿಕ್ಕಿದ್ದು, ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ತಮಿಳುನಾಡಿನ ಗ್ಯಾಂಗ್ ಮಕ್ಕಳ ಮಾರಾಟದಲ್ಲಿ ತೊಡಗಿರುವುದಾಗಿ ಬಾಯ್ಬಿಟ್ಟದ್ದ ಮಹಾಲಕ್ಷ್ಮಿ, ಆರ್.ಆರ್.ನಗರದ ರಾಜರಾಜೇಶ್ವರಿ ದೇವಸ್ಥಾನದ ಬಳಿಗೆ ಸಹಚರರು ಬರುವುದಾಗಿ ಸುಳಿವು ನೀಡಿದ್ದಳು. ಇದರ ಮೇರೆಗೆ ಕಾರ್ಯಾಚರಣೆಗೆ ಇಳಿದ ಸಿಸಿಬಿ ಪೊಲೀಸರು, ದೇವಸ್ಥಾನದ ಬಳಿ ಎಲ್ಲೆಡೆ ನಿಗಾ ವಹಿಸಿದ್ದರು. ತಮಿಳುನಾಡು ನೋಂದಣಿಯ ಕೆಂಪು ಬಣ್ಣದ ಸ್ವ್‌ಟಿ ಕಾರಿನಲ್ಲಿ ಚಾಲಕ ಮತ್ತು ಅದರಲ್ಲಿ ಮೂವರು ಮಹಿಳೆಯರು ಅನುಮಾನಸ್ಪದವಾಗಿ ಇರುವುದು ಗೊತ್ತಾಗಿ ವಾಹನ ಸುತ್ತುವರೆದು ನಾಲ್ವರನ್ನು ವಶಕ್ಕೆ ಪಡೆದಿದ್ದರು.

    ಆರೋಪಿಗಳ ಬಳಿಯಿದ್ದ 20 ದಿನದ ಗಂಡು ಶಿಶುವನ್ನು ರಕ್ಷಣೆ ಮಾಡಲಾಗಿದೆ. ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲಾಗಿದೆ. ಶಿಶುಗಳನ್ನು ಎಲ್ಲಿಂದ ತರುತ್ತಿದ್ದರು ಮತ್ತು ಯಾರಿಗೆ ಮಾರಾಟ ಮಾಡುತ್ತಿದ್ದರು? ಇಲ್ಲಿಯವರೆಗೂ ಎಷ್ಟು ಶಿಶುಗಳನ್ನು ಮಾರಾಟ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts