More

    ಭರತ್ ಮಾಸ್ತಿಗೆ ಬೇಸಾಯವೇ ಆಸ್ತಿ

    ಕಿಕ್ಕೇರಿ: ಕೃಷಿಯಲ್ಲಿ ಹೊಸ ಆವಿಷ್ಕಾರ ಬೇಕು ಎನ್ನುವುದು ಹೋಬಳಿಯ ದಬ್ಬೇಘಟ್ಟ ಗ್ರಾಮದ ಯುವ ರೈತ ಭರತ್ ಎಂ.ಮಾಸ್ತಿ ಅವರ ಆಶಯ. ಈ ದಿಸೆಯಲ್ಲಿ ಅರಣ್ಯ ಕೃಷಿ ಪದ್ಧತಿಗೆ ಒತ್ತು ನೀಡುವ ಮೂಲಕ ಕಾಯಕ ಯೋಗಿಯಾಗಿದ್ದಾರೆ.

    ಪಿರ್ತ್ರಾಜಿತವಾಗಿ ಬಂದಿರುವ 22 ಎಕರೆ ಭೂಮಿಯನ್ನು ರಾಸಾಯನಿಕ ಮುಕ್ತ ಮಾಡಬೇಕೆಂದು ಹಂತ ಹಂತವಾಗಿ ಜಮೀನಿನ ಅಭಿವೃದ್ಧಿಗೆ ಮುಂದಾಗಿದ್ದಾರೆ. ಹೇಮಾವತಿ ನದಿ ದಂಡೆಯಲ್ಲಿರುವ ಭೂಮಿಗೆ ನೀರಿನ ಕೊರತೆ ಇಲ್ಲವಾದರೂ ಮಣ್ಣಿನ ಪೌಷ್ಟಿಕಾಂಶ ಅವಶ್ಯವಿದೆ ಎನ್ನುತ್ತಾರೆ ಭರತ್.

    ತೆಂಗು, ಅಡಕೆ ಫಲ ಕೊಡುವುದು ಕಡಿಮೆಯಾದ ಹಿನ್ನೆಲೆಯಲ್ಲಿ ಆಯಸ್ಸು ಮುಗಿದ ಮರಗಳನ್ನು ಕಿತ್ತು ಹಾಕಿ ಭೂಮಿಯ ಫಲವತ್ತತೆ ಕಾಪಾಡಿಕೊಂಡು ಉಳುಮೆ ಇಲ್ಲದೆ ಕೃಷಿ ಮಾಡಲು ಮುಂದಾಗಿದ್ದಾರೆ. ಇವರ ಈ ಕಾಯಕಕ್ಕೆ ತಾಯಿ ಜಿ.ಎಂ.ಶಾರದಾ, ಪತ್ನಿ ಸಂಧ್ಯಾ ಬೆನ್ನೆಲುಬಾಗಿದ್ದಾರೆ. ಅರಣ್ಯ ಕೃಷಿ ಎಂದರೆ ಭೂಮಿಗೆ ತಂಪು, ಮನಸ್ಸಿಗೆ ಇಂಪು ಎಂಬುದನ್ನು ಈ ಕುಟುಂಬ ಅರಿತು ಕಾಯಕದಲ್ಲಿ ತೊಡದಗಿದೆ.

    ಸುಂದರ ಪ್ರಕೃತಿ ಮಡಿಲಿನಲ್ಲಿರುವ ತೋಟದಲ್ಲಿ ಸಾವಿರ ಅಡಕೆ, 850 ತೆಂಗು, 300 ಸಪೋಟಾ ಗಿಡಗಳಿವೆ. ತೆಂಗಿನೊಂದಿಗೆ ಒಂದಿಷ್ಟು ಬಾಳೆ, ಕಾಳು ಮೆಣಸು ಗಿಡಗಳಿವೆ. ಬಹುತೇಕ ಗಿಡಗಳು ಫಲ ಕೊಡುವ ಸ್ಥಿತಿಯಲ್ಲಿವೆ. ಹೊಸದಾಗಿ ಉತ್ತಮ ತಳಿಯ ತೆಂಗು, ಅಡಕೆ, ಸಪೋಟಾ ಗಿಡಗಳನ್ನು ನೆಡಲಾಗಿದೆ. ಉಳುಮೆಗೆ ತಿಲಾಂಜಲಿ ಇಟ್ಟು ಅರಣ್ಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಹಲವು ಫಲ ಕೊಡುತ್ತಿದ್ದು ಸದ್ಯಕ್ಕೆ 3ಲಕ್ಷ ರೂ. ಸಂಪಾದನೆಗೆ ಮೋಸವಿಲ್ಲ ಎನ್ನುತ್ತಾರೆ. ಅಲ್ಪಸ್ವಲ್ಪ ಜಮೀನಿನಲ್ಲಿ ಕಬ್ಬು ಬೇಸಾಯವನ್ನೂ ಮಾಡುತ್ತಿದ್ದಾರೆ. ಇದರೊಂದಿಗೆ ಭೂಮಿಯಲ್ಲಿ ಬಿದ್ದ ಹಸಿರೆಲೆ, ತರಗನ್ನು ಭೂಮಿಯಲ್ಲೆ ತಿಂಗಳುಗಟ್ಟಲೇ ಕೊಳೆಸಿ ಆ ಬಳಿಕ ಹಸಿರೆಲೆ ಗೊಬ್ಬರವನ್ನು ಗಿಡ-ಮರಗಳಿಗೆ ಹಾಕುತ್ತಿದ್ದಾರೆ.

    ಕೃಷಿಯೊಂದಿಗೆ ಮೀನು ಸಾಕಣೆ ಮಾಡುತ್ತಿದ್ದು, ಇದಕ್ಕಾಗಿ ದೊಡ್ಡದಾದ ಕೊಳ ನಿರ್ಮಿಸಿದ್ದಾರೆ. ಪಿಲೆಷಿಯಾ, ರೂಪ್‌ಚಂದ್, ಫಾಮನ್ ಸರ್ಫ್ ತಳಿಯ ಮರಿಗಳನ್ನು ಕೊಳಕ್ಕೆ ಬಿಟ್ಟಿದ್ದಾರೆ. ಇದರಿಂದ ಆದಾಯವನ್ನೂ ಪಡೆಯುತ್ತಿದ್ದಾರೆ. ಇದರ ಜತೆಜತೆಗೆ ಹೈನುಗಾರಿಕೆಯನ್ನೂ ಅವಲಂಬಿಸಿದ್ದಾರೆ. ಇದರಿಂದ ನಿತ್ಯ ಹಣ ಸಂಪಾದನೆ ಮಾಡುವ ಮೂಲಕ ನೆಮ್ಮದಿ ಕಂಡುಕೊಂಡಿದ್ದಾರೆ.

    ರಾಸಾಯನಿಕ ಮುಕ್ತ ಕೃಷಿ ಭೂಮಿಗೆ ಈ ಕುಟುಂಬ ಒತ್ತು ನೀಡಿದ್ದು, ಜಮೀನಿನಲ್ಲಿ ಸಾಕಷ್ಟು ಹಣ್ಣಿನ ಗಿಡಗಳಿವೆ. ಆಹಾರ ಅರಸಿ ನಿತ್ಯ ನೂರಾರು ನವಿಲುಗಳು ಇಲ್ಲಿಗೆ ಬರುತ್ತವೆ. ಆಗಿಂದಾಗ್ಗೆ ಸುತ್ತಮುತ್ತಲ ಹತ್ತಾರು ಶಾಲೆಗಳ ಮಕ್ಕಳು ಪ್ರವಾಸದ ಹೆಸರಿನಲ್ಲಿ ತೋಟಕ್ಕೆ ಬರುತ್ತಾರೆ. ಹಸಿರುಮಯ ತೋಟ, ಮೀನಿನ ಕೊಳ, ಹಣ್ಣಿನ ಗಿಡ ನೋಡಿ ಖುಷಿಪಟ್ಟ ಹಣ್ಣು ತಿಂದು ತೆರಳುತ್ತಾರೆ.

    ತೆಂಗು ಕಲ್ಪವೃಕ್ಷವಾಗಿದ್ದು, ಎಳನೀರಿಗೆ ಸೀಮಿತ ಮಾಡದೆ ತೆಂಗಿನಕಾಯಿ, ಕೊಬ್ಬರಿಗಾಗಿ ತೆಂಗು ಬೆಳೆಸುವ ಪದ್ಧತಿ ಒಳಿತು. ಹಾಗಾಗಿ ತೆಂಗು ಸಮೃದ್ಧಿಯಾಗಿ ಬೆಳೆಯಬೇಕೆಂಬ ದೂರದೃಷ್ಟಿಯಿಂದ ತೆಂಗು ಕೃಷಿಗೆ ಆದ್ಯತೆ ನೀಡಿದ್ದಾರೆ.

    ಸನಾತನ, ಹಿಂದು ಸಂಸ್ಕೃತಿ ಮೇಲೆ ಅಪಾರ ನಂಬಿಕೆ ಇರುವ ಸಂಘ ಪರಿವಾರದ ಭರತ್, ಸಂಸ್ಕೃತಿ ಉಳಿವಿಗಾಗಿ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಸಂಸ್ಕೃತಿ, ಸಂಸ್ಕಾರದ ನೆಲದಲ್ಲಿ ಹುಟ್ಟಿ ಭವಿಷ್ಯದ ಮಕ್ಕಳಲ್ಲಿ ಸಂಸ್ಕಾರ ಶಿಕ್ಷಣ ಬಿತ್ತಬೇಕೆಂಬ ದೃಷ್ಟಿಯಿಂದ ಬಿಡುವಿನ ವೇಳೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಕೃಷಿ ತರಬೇತಿ, ಸಮ್ಮೇಳನಗಳಿಗೆ ಹಾಜರಾಗಲಿದ್ದು, ರಾಸಾಯನಿಕ ಮುಕ್ತ ಕೃಷಿಗೆ ಸಂಬಂಧಿಸಿದಂತೆ ಯುವ ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.

    ಅರಣ್ಯ ಬೇಸಾಯ ಪದ್ಧತಿಗೆ ಕೈ ಹಾಕಿರುವ ಯುವ ರೈತ ಭರತ್ ಕಾರ್ಯ ಶ್ಲಾಘನೀಯ. ಹೊಸ ಆವಿಷ್ಕಾರದೊಂದಿಗೆ ಭೂಮಿಯ ಮರುಪೂರ್ಣ ಫಲವತ್ತತೆಗೆ ಶ್ರಮಿಸುತ್ತಿರುವ ಇವರ ನೂತನ ಪ್ರಯೋಗ ಮಾದರಿ ಎನಿಸಿದೆ. ಕೃಷಿಕನಿಗೆ ಬೇಕಿರುವುದು ತಾಳ್ಮೆ ಎನ್ನಲು ಇವರು ತಾಜಾ ಉದಾಹರಣೆ.
    ಎಚ್.ವಿದ್ಯಾರಾಣಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ, ರೈತ ಸಂಪರ್ಕ ಕೇಂದ್ರ, ಕಿಕ್ಕೇರಿ

    ರಾಸಾಯನಿಕ ಮುಕ್ತ ಕೃಷಿಕನಾಗಬೇಕು ಎಂಬುದು ನನ್ನ ಧ್ಯೇಯ. ರೈತ ಕೇವಲ ಅನ್ನದಾತನಲ್ಲ ಬದಲಾಗಿ ಆರೋಗ್ಯ ಪಂಡಿತ ಕೂಡ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಕ್ಕೆ ಗುಡ್‌ಬೈ ಹೇಳಬೇಕಿದ್ದು, ಇದನ್ನು ಅಕ್ಷರಶಃ ಪಾಲಿಸುತ್ತಿರುವೆ. ಅರಣ್ಯ ಕೃಷಿ ಬೇಸಾಯ ನನಗೆ ಖುಷಿ ನೀಡುತ್ತಿದೆ.
    ಭರತ್ ಎಂ.ಮಾಸ್ತಿ ಪ್ರಗತಿಪರ ರೈತ, ದಬ್ಬೇಘಟ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts