More

    ರೈತ ಹೋರಾಟವೂ, ಚೀನೀ 5ಜಿ ಸಮರವೂ…

    ರೈತ ಹೋರಾಟವೂ, ಚೀನೀ 5ಜಿ ಸಮರವೂ...ಇದೇನೂ ತ್ರೇತಾಯುಗದ ಶ್ರೀರಾಮನ ಕಾಲದಲ್ಲಿ ನಡೆದದ್ದಲ್ಲ, ಈ ಕಲಿಯುಗದ್ದೇ. ಶಿಲಾಯುಗದಲ್ಲೂ ಆದದ್ದಲ್ಲ.. ಅಥವಾ ಅರಬ್ಬರು ಸಿಂಧ್ ಅನ್ನು ಆಕ್ರಮಿಸಿಕೊಳ್ಳುವುದಕ್ಕೆ ಮೊದಲೂ ಘಟಿಸಿದ್ದಲ್ಲ. ಇದಾದದ್ದು ಏಳೆಂಟು ತಿಂಗಳ ಹಿಂದಷ್ಟೇ; ಕರೊನಾ ಬಂದು ನಮ್ಮನ್ನೆಲ್ಲ ಕಂಗೆಡಿಸಿ, ಲಾಕ್​ಡೌನೂ ಆಗಿ ಹೋಗಿಯಾದ ಮೇಲೆ. ಆದರೆ ಇಷ್ಟು ಬೇಗ ಎಲ್ಲರೂ ಇದನ್ನು ಮರೆತುಬಿಡುವುದೇ!

    ಈಗ ರೈತವಿರೋಧಿ ಎಂದು ಬಣ್ಣಿತಗೊಳ್ಳುತ್ತಿರುವ, ‘ರೈತ’ ಆಂದೋಲನಕ್ಕೆ ಕಾರಣವಾಗಿರುವ ಕೃಷಿ ಕಾಯಿದೆಗಳು ಜಾರಿಯಾದದ್ದು ಕಳೆದ ವರ್ಷದ ಜೂನ್ 5ರಂದು, ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಗಳ ಮೂಲಕ. ದೇಶದ 14 ಕೋಟಿ ರೈತರಿಗೆ ‘ಒಂದು ದೇಶ, ಒಂದು ಮಾರುಕಟ್ಟೆ’ಯ ಮೂಲಕ ತಮ್ಮ ಫಸಲನ್ನು ಎಲ್ಲಾದರೂ ಮಾರುವ ಅನುಮತಿ ನೀಡಿದ ನಿರ್ಣಯವನ್ನು ಕ್ಯಾಬಿನೆಟ್ ತೆಗೆದುಕೊಂಡ ದಿನ ಅಂದರೆ ಜೂನ್ 4ರಂದು ರೈತ ನಾಯಕ ರಾಕೇಶ್ ಟಿಕಾಯತ್ ಅದನ್ನು ಸ್ವಾಗತಿಸಿ ಹೇಳಿಕೆ ನೀಡಿದರು. ಜತೆಗೆ, ಹೊಸ ನೀತಿಯನ್ನು ದಲಾಲಿಗಳು ದುರುಪಯೋಗಪಡಿಸಿಕೊಂಡು, ಒಂದು ರಾಜ್ಯದ ರೈತರಿಂದ ಕಡಿಮೆ ಬೆಲೆಯಲ್ಲಿ ಫಸಲು ಖರೀದಿಸಿ ಇನ್ನೊಂದು ರಾಜ್ಯದಲ್ಲಿ ಹೆಚ್ಚಿನ ಬೆಲೆಗೆ ಮಾರುವುದನ್ನು ತಪ್ಪಿಸಲು, ಎಂಎಸ್​ಪಿಗಿಂತ ಕಡಿಮೆ ಬೆಲೆಗೆ ಫಸಲು ಎಲ್ಲೂ ಮಾರಾಟವಾಗದಂತೆ ನಿರ್ಬಂಧಿಸುವ ಕಾನೂನನ್ನು ತರಬೇಕೆಂದೂ ಬೇಡಿಕೆಯಿತ್ತರು.

    ಸರಿ, ಇಂತಹ ಕಾಯಿದೆಗಳಿಗಾಗಿ ರೈತರು, ರೈತನಾಯಕರು ‘ಬಹುದಿನಗಳಿಂದಲೂ’ ಬೇಡಿಕೆ ಇಡುತ್ತಿದ್ದರೇ?

    ಜಿಮ್ ಬೆಂಟ್ಯಾಲ್ ಮತ್ತು ಸ್ಟುವರ್ಟ್ ಕೋರ್​ಬ್ರಿಜ್ 1996ರಲ್ಲಿ ಪ್ರಕಟಿಸಿದ ಲೇಖನವೊಂದರಲ್ಲಿ (Bentall, J., & Corbridge, S. (1996). Urban-Rural Relations, Demand Politics and the ‘New Agrarianism’ in Northwest India: The Bharatiya Kisan Union. Transactions of the Institute of British Geographers, 21(1), 27-48. doi:10.2307/622922) ರೈತ ನಾಯಕ ಮಹೇಂದ್ರ ಸಿಂಗ್ ಟಿಕಾಯತ್ (ಈಗಿನ ನಾಯಕ ರಾಕೇಶ್ ಟಿಕಾಯತ್​ರ ತಂದೆ) ‘ಮುಕ್ತ ಮಾರುಕಟ್ಟೆ’ ಮತ್ತು ‘ಕೃಷಿ ಉತ್ಪನ್ನಗಳ ಅಂತರರಾಜ್ಯ ಮುಕ್ತ ಸಾಗಾಟ’ದ ಬೇಡಿಕೆ ಇಟ್ಟು ಆಂದೋಲನ ನಡೆಸಿದ್ದಾಗಿ ಬರೆಯುತ್ತಾರೆ.

    1997ರಲ್ಲಿ ದೂರದರ್ಶನ ಪ್ರಸಾರ ಮಾಡಿದ ಡಾಕ್ಯುಮೆಂಟರಿ ಈ ಕಥೆ ಹೇಳುತ್ತದೆ- ‘ಹಸಿರು ಕ್ರಾಂತಿಯನ್ನು ಯಶಸ್ವಿಗೊಳಿಸಿ ದೇಶದ ಹೊಟ್ಟೆ ತುಂಬಿಸಿದ… ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣದ ರೈತರಿಗೆ ತಮ್ಮ ಫಸಲನ್ನು ತಮ್ಮಿಷ್ಟದಂತೆ ಮಾರುವ ಸ್ವಾತಂತ್ರ್ಯ ಇಲ್ಲ. ಇತರ ರಾಜ್ಯಗಳಿಗೆ ಸಾಗಿಸುವುದಿರಲಿ, ತಮ್ಮ ರಾಜ್ಯದಲ್ಲೇ ತಮ್ಮ ತೆಹಸೀಲ್​ನಲ್ಲೇ ಸ್ಥಳೀಯ ಮಂಡಿ ಅಥವಾ ಖಾಸಗಿ ವ್ಯಾಪಾರಿಗಳಿಗೆ ಮಾರುವುದರ ಮೇಲೂ ಸರ್ಕಾರದ ಪ್ರತಿಬಂಧವಿದೆ…’. ಆ ಡಾಕ್ಯುಮೆಂಟರಿಯಲ್ಲಿ ಪಂಜಾಬ್​ನ ರೈತರೊಬ್ಬರು ಹೀಗೆ ಹೇಳುತ್ತಾರೆ- ‘ನಾವು ಪರಿಶ್ರಮದಿಂದ ಬೆಳೆದ ಬೆಳೆಯನ್ನು ಪಕ್ಕದ ತೆಹಸೀಲ್​ಗೂ ಕೊಂಡೊಯ್ಯಲಾಗುವುದಿಲ್ಲ. ಐದಾರು ಕೇಜಿ ಗೋಧಿಯ ಪೊಟ್ಟಣಗಳನ್ನು ತಲೆಯ ಮೇಲೆ ಹೊತ್ತು ಹರಿಯಾಣದ ಗಡಿ ದಾಟಿದರೆ ನಮ್ಮನ್ನು ಅರೆಸ್ಟ್ ಮಾಡುತ್ತಾರೆ. ಧಾನ್ಯದ ಕಳ್ಳಸಾಗಾಣಿಕೆದಾರರು ಎಂದು ಆರೋಪ ಹೊರಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುತ್ತದೆ, ನಮಗೆ ಮೂವತ್ತು ದಿನಗಳ ಜೈಲುವಾಸ… ಜತೆಗೆ ಜುಲ್ಮಾನೆ…’

    2008 ಏಪ್ರಿಲ್ 2ರಂದು ಚಂಡೀಗಢದಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಕಾರ್ಪೆರೇಟ್​ಗಳು ರೈತರಿಂದ ಗೋಧಿಯನ್ನು ಖರೀದಿಸುವುದನ್ನು ಪ್ರತಿಬಂಧಿಸುವ ಕೇಂದ್ರ ಸರ್ಕಾರದ ಕಾನೂನಿನ ವಿರುದ್ಧವಾಗಿತ್ತು. ಅದರ ನೇತೃತ್ವ ವಹಿಸಿದ್ದವರು ರೈತನಾಯಕ ಮತ್ತು ಸಂಸದ ಶರದ್ ಜೋಷಿ ಹಾಗೂ ಹರಿಯಾಣದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ಭೂಪೀಂದರ್ ಮಾನ್. ಇವರಿಬ್ಬರೂ ಹೇಳಿದ್ದು ರೈತರು ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಕಾರ್ಪೆರೇಟ್​ಗಳಿಗೆ ಹೆಚ್ಚಿನ ಬೆಲೆಗೆ ಮಾರುವುದನ್ನು ತಡೆದು ಎಪಿಎಂಸಿಯಲ್ಲಿ ದಲಾಲಿಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಮಾರುವ ಸ್ಥಿತಿ ನಿರ್ವಿುಸಿ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆಯೆಂದು.

    2018 ಮಾರ್ಚ್ 22ರಂದು ಬಿಕೆಯು ನೀಡಿದ ವಿವರಗಳ ಪ್ರಕಾರ 16, 17ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ರೈತರಿಗೆ ಮುಕ್ತ ಮಾರುಕಟ್ಟೆ ಮತ್ತು ಮುಕ್ತ ವ್ಯಾಪಾರ ವ್ಯವಸ್ಥೆ ಬೇಕೆಂದು ಆಗ್ರಹಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಆ ವರದಿಗೆ ಲಗತ್ತಿಸಿರುವ ಲೇಖನದಲ್ಲಿ್ಲ ‘ಆಹಾರ ಸುಭದ್ರತೆಯ ನೆಪದಲ್ಲಿ ಸರ್ಕಾರ ರೈತರ ಧಾನ್ಯವನ್ನು ತಾನೇ ಕೊಂಡುಕೊಳ್ಳುವ ವ್ಯವಸ್ಥೆ ರೈತರಿಗೆ ಲಾಭದಾಯಕವಲ್ಲ’ ಎಂದು ಹೇಳಲಾಗಿತ್ತು. ಜತೆಗೆ, ಅಲ್ಲಿರುವ ‘ಆಕ್ಷನ್ ಪ್ಲಾನ್’ನಲ್ಲಿ ಸೂಚಿಸಲಾಗಿರುವ 8 ಬೇಡಿಕೆಗಳಿಗೆ ಮತ್ತು ಬಿಕೆಯು ಹೊರಡಿಸಿದ ಪ್ರಣಾಳಿಕೆಗೆ ಕೃಷಿ ಕಾಯಿದೆಗಳು ಅನುಗುಣವಾಗಿಯೇ ಇವೆ. ಅದೇ ಲೇಖನದಲ್ಲಿ ಕಾಂಟ್ರಾ್ಯಕ್ಟ್ ಫಾರ್ವಿುಂಗ್ ವ್ಯವಸ್ಥೆ ಇರಬೇಕೆಂಬ ಬೇಡಿಕೆಯೂ ಇದೆ. ಅದೇ ವರ್ಷ ಬಿಕೆಯು ಟ್ವೀಟ್ ಒಂದನ್ನು ಮಾಡಿ, ಅದಕ್ಕೆ ರಾಹುಲ್ ಗಾಂಧಿಯವರನ್ನು ಟ್ಯಾಗ್ ಮಾಡಿ, ದಲಾಲಿಗಳಿಂದ ಮುಕ್ತಗೊಳಿಸುವಂತೆ ಬೇಡಿಕೆ ಇತ್ತಿತ್ತು. ಇದರರ್ಥ ಆ ಬೇಡಿಕೆಯನ್ನು ರಾಹುಲ್ ಗಾಂಧಿಯಷ್ಟೇ ಈಡೇರಿಸಬೇಕಾಗಿತ್ತೇ?

    2019ರ ಲೋಕಸಭಾ ಚುನಾವಣೆಗಳಿಗೆ ಮೊದಲು ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಬಿಕೆಯು ಎಪಿಎಂಸಿ ಕಾನೂನು ಮತ್ತು ‘ಅವಶ್ಯ ವಸ್ತುಗಳ ಕಾಯಿದೆ’ಗಳನ್ನು ರದ್ದು ಮಾಡುವಂತೆ ಸರ್ಕಾರವನ್ನು ಆಗ್ರಹಿಸಿತ್ತು. ಜತೆಗೆ ಈ ಬೇಡಿಕೆಗಳ ಪೂರೈಕೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳುವಂತೆ ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿತ್ತು. ಕಾಂಗ್ರೆಸ್ ಅದನ್ನು ಮಾನ್ಯ ಮಾಡಿತು ಸಹ. ಕಾಂಗ್ರೆಸ್​ಗೆ ಬಿಕೆಯು ಚುನಾವಣೆಯಲ್ಲಿ ಬೆಂಬಲ ನೀಡಿತು. ಇದೆಲ್ಲದರ ಅರ್ಥ 2019ರಲ್ಲಿ ಕಾಂಗ್ರೆಸ್ ಗೆದ್ದು ಸರ್ಕಾರ ರಚಿಸಿ ಕೃಷಿ ಕಾಯಿದೆಗಳನ್ನು ಜಾರಿಗೆ ತರಬೇಕಾಗಿತ್ತು. ಆದರೆ ಬಿಜೆಪಿ ನೇತೃತ್ವದ ಎನ್​ಡಿಎ ಗೆದ್ದು ಸರ್ಕಾರ ರಚಿಸಿದ್ದೂ, ಕೃಷಿ ಕಾಯಿದೆಗಳನ್ನು ತಂದದ್ದೂ ದೊಡ್ಡ ತಪ್ಪಾಗಿಹೋಯಿತು.

    ಹೀಗೆ, ಬಿಕೆಯು 1987ರಿಂದಲೂ ಆಗ್ರಹಿಸುತ್ತಿದ್ದ ಮತ್ತು ಪಂಜಾಬ್​ನ ರೈತರು ದಶಕಗಳಿಂದಲೂ ಬೇಡಿಕೆಯಿತ್ತಿದ್ದ ಬದಲಾವಣೆಗಳನ್ನು ಕೇಂದ್ರ ಸರ್ಕಾರ ತನ್ನ ಕೃಷಿ ನೀತಿಯಲ್ಲಿ ಅಳವಡಿಸಿಕೊಂಡು ಸುಗ್ರೀವಾಜ್ಞೆಗಳನ್ನು ತಂದಾಗ ಅದಕ್ಕೆ ಯಾವ ವಿರೋಧವೂ ಉಂಟಾಗಲಿಲ್ಲ. ಹತ್ತು ದಿನಗಳ ನಂತರ ಜೂನ್ 15ರಂದು, ಕೇಂದ್ರದ ಹೊಸ ನೀತಿ ಕಾರ್ಪೆರೇಟ್​ಗಳ ಹಿತಾಸಕ್ತಿಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಆಪಾದಿಸಿ ತಮಿಳುನಾಡಿನಲ್ಲಿ ಭಾರತೀಯ ಕಿಸಾನ್ ಸಭಾದ ನಾಯಕ ವಿಜೂ ಕೃಷ್ಣನ್ ನೇತೃತ್ವದಲ್ಲಿ ಸಣ್ಣ ಪ್ರತಿಭಟನೆ ನಡೆಯಿತಷ್ಟೇ. ಆದರೆ ಪಂಜಾಬ್, ಹರಿಯಾಣ, ದೆಹಲಿ ಆಗ ಮೌನವಾಗಿದ್ದವು. ಜೂನ್ 7ರಂದು ಪಂಜಾಬ್​ನಲ್ಲಿ ರೈತರ ಒಂದು ಸಭೆ ನಡೆಯಿತೇನೋ ನಿಜ. ಆದರೆ ಅದು ಮೊದಲೇ ಬೇರೊಂದು ಕಾರಣಕ್ಕೆ ನಡೆದಿದ್ದ ರೈತರ ಪ್ರತಿಭಟನೆಯಲ್ಲಿ ಮೃತರಾದ ಐವರು ರೈತರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವಾಗಿತ್ತು. ಅಲ್ಲಿ ಸುಗ್ರೀವಾಜ್ಞೆಗಳ ಪ್ರಸ್ತಾಪವಾಯಿತಷ್ಟೇ. ಆಗ ಬಿಕೆಯು ಸುಮ್ಮನಿತ್ತು, ಅಕಾಲಿ ದಳ ಸುಗ್ರೀವಾಜ್ಞೆಗಳ ಪರವಾಗಿತ್ತು. ಜುಲೈ ತಿಂಗಳ ಉತ್ತರಾರ್ಧದಲ್ಲಿ ಹರಿಯಾಣ ಮತ್ತು ಪಂಜಾಬ್​ನಲ್ಲಿ ಏಕಾಏಕಿ ಬೇರೆಯದೇ ಬೆಳವಣಿಗೆಗಳನ್ನು ಕಾಣುತ್ತೇವೆ. ಜುಲೈ 20ರಂದು ಎರಡೂ ರಾಜ್ಯಗಳಲ್ಲಿ ಸಾವಿರಾರು ರೈತರು ಒಟ್ಟುಗೂಡಿ ಪ್ರದರ್ಶನ ನಡೆಸಿದರೆ, ಜುಲೈ 27ರಂದು ಪಂಜಾಬ್​ನಲ್ಲಂತೂ ಸಾವಿರಾರು ರೈತರು ಟ್ರಾ್ಯಕ್ಟರ್​ಗಳೊಂದಿಗೆ ಪ್ರದರ್ಶನ ನಡೆಸಿದರು. ಕೃಷಿ ಸುಗ್ರೀವಾಜ್ಞೆಗಳು ಜಾರಿಯಾಗಿ ಒಂದೂವರೆ ತಿಂಗಳಾದ ಮೇಲೆ ಹೀಗೆ ಹೋರಾಟ ಆರಂಭವಾದದ್ದಕ್ಕೆ ಕಾರಣವೇನಿರಬಹುದು? ಪತ್ರಿಕೆಗಳಲ್ಲಿ ವರದಿಯಾದಂತೆ, ಈ ಏಕಾಏಕಿ ಪ್ರತಿಭಟನೆಗಳ ಮುಂದಾಳತ್ವ ವಹಿಸಿದ್ದು ‘ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮಿತಿ’ಯ ಅಧ್ಯಕ್ಷ ದರ್ಶನ್ ಪಾಲ್. ಈ ರೈತ ನೇತಾ ಈಗ ಬಂಧನದಲ್ಲಿರುವ ‘ಕ್ರಾಂತಿಕಾರಿ ಕವಿ’ ವರವರರಾವ್, ಕಲ್ಯಾಣ್ ರಾವ್ ಮತ್ತಿತರರ ಜತೆಗೂಡಿ ಜುಲೈ 2006ರಲ್ಲಿ ಪಿಡಿಎಫ್​ಐ ಎಂಬ ಉಗ್ರ ಎಡಪಂಥೀಯ ಸಂಘಟನೆಯನ್ನು ಸ್ಥಾಪಿಸಿದ್ದರು. ಈ ಸಂಘಟನೆ ಉಗ್ರ ಎಡಪಂಥೀಯ ಸಂಘಟನೆ ಸಿಪಿಐ-ಎಂಎಲ್​ಗೆ ಹತ್ತಿರಾಗಿತ್ತು. ಅಂದರೆ ಮಾವೋವಾದಿ, ಮಾವೋವಾದಿ ಅಂದರೆ ಸರಳ ಭಾಷೆಯಲ್ಲಿ ನಕ್ಸಲ್ ಎಂದು. ಈ ನಕ್ಸಲರನ್ನು ಚೀನೀ ಕಮ್ಯೂನಿಸ್ಟ್ ಸರ್ಕಾರ ದಶಕಗಳಿಂದಲೂ ಹಣ, ಶಸ್ತ್ರಾಸ್ತ್ರ ಪೂರೈಸಿ ಸಾಕುತ್ತಿದೆ. ಈ ಸಿಪಿಐ-ಎಂಎಲ್ ಅನ್ನು 2009 ಜೂನ್ 26ರಂದು ಆಗಿನ ಯುಪಿಎ ಸರ್ಕಾರ ‘ಭಯೋತ್ಪಾದನಾ ನಿಗ್ರಹ ಕಾಯಿದೆ’ಯ ಅಡಿಯಲ್ಲಿ ನಿರ್ಬಂಧಿಸಿತ್ತು.

    ಜುಲೈ 27ರ ರ್ಯಾಲಿಯಲ್ಲಿ ಭಾಗಿಯಾಗಿದ್ದ ಇತರ ಕೆಲವು ಸಂಘಟನೆಗಳೆಂದರೆ- ರೆವಲ್ಯೂಷನರಿ ಮಾರ್ಕ್ಸಿಸ್ಟ್ ಪಾರ್ಟಿಗೆ ಸಂಬಂಧಿಸಿದ ‘ಜಂಬೂರಿ ಕಿಸಾನ್ ಸಭಾ’, ಸಿಪಿಐಗೆ ಸಂಬಂಧಿಸಿದ ‘ಆಲ್ ಇಂಡಿಯಾ ಕಿಸಾನ್ ಸಭಾ’, ಸಿಪಿಐ-ಎಂಗೆ ಸಂಬಂಧಿಸಿದ ‘ಕೀರ್ತಿ ಕಿಸಾನ್ ಯೂನಿಯನ್’, ಕುಲ್ ಹಿಂದ್ ಕಿಸಾನ್ ಸಭಾ. ಇವೆಲ್ಲವೂ ಎಡಪಂಥೀಯ ಪಕ್ಷಗಳು ಹಾಗೂ ಮಾವೋವಾದಿ ಸಂಘಟನೆಗಳಿಗಳಿಗೆ ಸೇರಿದಂತಹವು. ಕೃಷಿ ಮಸೂದೆಗಳಲ್ಲಿರುವ ‘ಕೆಡುಕು’ಗಳ ಬಗ್ಗೆ ಏಕಾಏಕಿ ಆದ ಜ್ಞಾನೋದಯವೇನು? ಅದಾದದ್ದು ಹೇಗೆ?

    ಇತ್ತೀಚೆಗೆ ಐಟಿ ಕ್ಷೇತ್ರದಲ್ಲಿ ಚೀನೀ ಕಂಪನಿಗಳು ಅಸಾಮಾನ್ಯ ಸಾಧನೆ ಮಾಡಿವೆಯಷ್ಟೇ. ಅದರಲ್ಲೂ ವೈದ್ಯಕೀಯ, ಸಂಚಾರ, ಸಂಪರ್ಕ ಸೇರಿದಂತೆ ನಮ್ಮ ದೈನಂದಿನ ಬದುಕಿನ ಬಹುತೇಕ ಸಂಪರ್ಕ ಅಗತ್ಯಗಳನ್ನು ಪೂರೈಸುತ್ತದೆಂದು ಹೇಳಲಾಗುವ, ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯೆಬ್ಬಿಸಬಲ್ಲ 5ಜಿ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನೀ ಸಂಸ್ಥೆಗಳು ಮುಖ್ಯವಾಗಿ ಹುವಾವೈ ಸಾಧನೆ ವರ್ಣಿಸಲಸದಳ. ಈ ಕ್ಷೇತ್ರದಲ್ಲಿ ಅದನ್ನು ಸರಿಗಟ್ಟುವ ಮತ್ತೊಂದು ಸಂಸ್ಥೆ ಯಾವ ದೇಶದಲ್ಲೂ ಇಲ್ಲ, ಅಮೆರಿಕದಲ್ಲೂ ಇಲ್ಲ. ಹೀಗಾಗಿ, 2020 ಫೆಬ್ರವರಿಯಲ್ಲಿ ಅಂದರೆ ಕರೊನಾ ಮಹಾಮಾರಿ ಆರಂಭವಾಗುವ ಹೊತ್ತಿಗೆ ಅಮೆರಿಕ ಸೇರಿ ಜಗತ್ತಿನ 91 ದೇಶಗಳು ತಮ್ಮಲ್ಲಿ 5ಜಿ ಸೇವೆ ಒದಗಿಸುವ ಕಾಂಟ್ರಾ್ಯಕ್ಟ್ ಅನ್ನು ಚೀನಾದ ಹುವಾವೈಗೆ ಕೊಟ್ಟಿದ್ದವು ಮತ್ತು ಯುರೋಪ್ ಖಂಡವೊಂದರಲ್ಲೇ ಚೀನಾಗೆ ಅಂತಹ 47 ಕಾಂಟ್ರಾ್ಯಕ್ಟ್​ಗಳು ಸಿಕ್ಕಿದ್ದವು. ಚೀನಾ ಜಗತ್ತಿನ 5ಜಿ ನಾಯಕನಾಗುವ ಕನಸು ಕಾಣುತ್ತಿತ್ತು. ಆದರೆ ಕರೊನಾ ಮಾರಿಯ ಜತೆಗೇ, ಹುವಾವೈ ತನ್ನ 5ಜಿ ಉಪಕರಣಗಳ ಮೂಲಕ ಸೂಕ್ಷ್ಮ ಮಾಹಿತಿಗಳನ್ನು ಕದ್ದು ಚೀನೀ ಸರ್ಕಾರಕ್ಕೆ ರವಾನಿಸುತ್ತದೆಂಬ ಸಂದೇಹವೂ ಎಲ್ಲೆಡೆ ಹರಡತೊಡಗಿತು. ಪರಿಣಾಮವಾಗಿ ವರ್ಷದ ಮಧ್ಯದ ಹೊತ್ತಿಗೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ನಾರ್ವೆ, ಸ್ವೀಡನ್, ಅಮೆರಿಕ, ಇಟಲಿ ಸೇರಿ ಹಲವು ದೇಶಗಳು ಒಪ್ಪಂದವನ್ನು ರದ್ದುಮಾಡಿದವು. ಭಾರತ, ಕೆನಡಾ, ಜರ್ಮನಿ ಮತ್ತಿತರ ಕೆಲವು ದೇಶಗಳು ರದ್ದುಮಾಡುವ ಬಗ್ಗೆ ಆಲೋಚಿಸತೊಡಗಿದವು. ಅದೇ ಸಮಯಕ್ಕೆ ಭಾರತದ ರಿಲಯನ್ಸ್ ಜಿಯೋ 5ಜಿಯಲ್ಲಿ ದಾಪುಗಾಲಿಡುತ್ತಿದೆಯೆಂಬ ಮಾಹಿತಿ ಕಾಣಿಸಿಕೊಳ್ಳತೊಡಗಿತು.

    ಜುಲೈ 9ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹುವಾವೈನಿಂದಾಗಬಹುದಾದ ಸುರಕ್ಷಾ ಅಪಾಯಗಳ ಬಗ್ಗೆ ಮಾತನಾಡುತ್ತ, ‘ಜಿಯೋ ಒಂದು ಕ್ಲೀನ್ ಟೆಲ್ಕೋ’, ಅದು ಒದಗಿಸುವ 5ಜಿ ನೆಟ್​ವರ್ಕ್ ಸೇವೆಯಿಂದ ಯಾವುದೇ ಅಪಾಯವಿಲ್ಲ ಎಂದರು. ಪರಿಣಾಮವಾಗಿ ಅದುವರೆಗೆ ಸಂದಿಗ್ಧದಲ್ಲಿದ್ದ ಇತರು ದೇಶಗಳು ಹುವಾವೈಯನ್ನು ಓಡಿಸುವ ನಿರ್ಧಾರವನ್ನು ತೆಗೆದುಕೊಳ್ಳತೊಡಗಿದವು. ಜುಲೈ 14ರಂದು ಬ್ರಿಟನ್ ಹುವಾವೈಯೊಂದಿಗಿನ ಒಪ್ಪಂದವನ್ನು ರದ್ದುಮಾಡೇಬಿಟ್ಟಿತು. ಇಂತಹ ಸನ್ನಿವೇಶದಲ್ಲಿ ಜುಲೈ 15ರಂದು ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ತನ್ನ ವಾರ್ಷಿಕ ಮಹಾಸಭೆಯಲ್ಲಿ ಮಹತ್ವಪೂರ್ಣ ಬೆಳವಣಿಗೆಯನ್ನು ಘೊಷಿಸಿತು. ಸಂಪೂರ್ಣವಾಗಿ ಸ್ವದೇಶದಲ್ಲೇ ನಿರ್ವಣವಾದ 5ಜಿ ನೆಟ್​ವರ್ಕ್ ಅನ್ನು ಜಿಯೋ ನಿರ್ವಿುಸಿತ್ತು ಮತ್ತು ಅದನ್ನು ಅನುಷ್ಠಾನಗೊಳಿಸಲು ಸಿದ್ಧವಾಗಿತ್ತು! ಜಿಯೋ ‘ಶುದ್ಧ’ ಎಂದು ಮೈಕ್ ಪಾಂಪಿಯೋ ಜಗತ್ತಿಗೆ ಹೇಳಿದ್ದು, ವಾರದೊಳಗೆ ತಾನು 5ಜಿ ಸೇವೆಗೆ ಸಿದ್ಧವಾಗಿರುವುದಾಗಿ ಜಿಯೋ ಹೇಳಿದ್ದು ಯಾವುದಕ್ಕೆ ಮುನ್ಸೂಚನೆಯಾಯಿತೆಂದರೆ ಚೀನಾದ ಹುವಾವೈ ಕಳೆದುಕೊಂಡದ್ದೆಲ್ಲವೂ ಭಾರತದ ಜಿಯೋದ ಮುಡಿಗೆ! ಅಂದರೆ ಭಾರತ ಜಗತ್ತಿನ 5ಜಿ ನೆಟ್​ವರ್ಕ್ ನಾಯಕನಾಗಲು ಕ್ಷಣಗಣನೆ!

    ಆದರೆ, ಮುಂದಿನ ಐದು ದಿನಗಳಲ್ಲಿ ಬೇರೆಯೇ ಬೆಳವಣಿಗೆಗಳು ಶುರುವಾದವು. ಎಡ ಮತ್ತು ಉಗ್ರ ಎಡ ಸಂಘಟನೆಗಳು ಕೃಷಿ ಸುಗ್ರೀವಾಜ್ಞೆಗಳ ವಿರುದ್ಧ ಹೋರಾಟ ಆರಂಭಿಸಿ, ಉಗ್ರಗೊಳಿಸಿದವು. ಮಾತುಕತೆಗೆ ಸರ್ಕಾರ ಸಿದ್ಧವಾಗಿದೆ, ಮಾತೂ ಆಡುತ್ತಿದೆ, ಕಾಯಿದೆಗಳನ್ನು ಪರಿಷ್ಕರಿಸಲು ಸಿದ್ಧವೆಂದೂ ಹೇಳುತ್ತಿದೆ, ಕಾಯಿದೆಗಳನ್ನು ಒಂದೂವರೆ ವರ್ಷಕ್ಕೆ ಮುಂದೂಡಿಯೂ ಇದೆ. ಆದರೂ ‘ರೈತ ಆಂದೋಲನ’ ಮುಂದುವರಿಯುತ್ತಲೂ ಇದೆ. ‘ಬಾಯ್ಕಾಟ್ ಜಿಯೋ’ ಎಂಬ ಘೊಷಣೆಗಳು ಮತ್ತು ಪ್ಲಕಾರ್ಡ್​ಗಳು ಆಂದೋಲನದಲ್ಲಿ ಕಾಣಿಸಿಕೊಂಡಿವೆ. ಊರುಗಳ ಮಧ್ಯದಲ್ಲೇ ಇರುವ, ದೊಡ್ಡದಾಗಿ ಬೋರ್ಡ್ ಇರುವ ‘ರಿಲಯನ್ಸ್ ಫ್ರೆಶ್’ ಮಳಿಗೆಗಳಿಗೆ ಒಂದು ಕಲ್ಲೂ ಬಿದ್ದಿಲ್ಲ. ಆದರೆ ಇತರ ಟವರ್​ಗಳಿಂದ ಪ್ರತ್ಯೇಕವೆಂದು ಸುಲಭವಾಗಿ ಗುರುತಿಸಲಾಗದ ರಿಲಯನ್ಸ್ ಜಿಯೋ ಮೊಬೈಲ್ ಟವರ್​ಗಳನ್ನು ಮಾತ್ರ ಹುಡುಕಿ ಹುಡುಕಿ ಹಾಳುಗೆಡವಲಾಗುತ್ತಿದೆ. ರಿಯಲನ್ಸ್ ಜಿಯೋ ಪಂಜಾಬ್​ನಲ್ಲಿ ತನ್ನ ಸುಮಾರು 1500 ಟವರ್​ಗಳನ್ನು ಹೀಗೆ ಕಳೆದುಕೊಂಡಿದೆ. ಗ್ರೆಟಾ ಥನ್​ಬರ್ಗ್ ತೆರೆದಿಟ್ಟ ‘ಟೂಲ್ಕಿಟ್’ನಲ್ಲಿ ‘ಅಂಬಾನಿ, ಅದಾನಿಗಳಿಗೆ ಹಾನಿಯೆಸಗಿ’ ಎಂದು ಸಂಚುಗಾರರು ‘ರೈತ’ರಿಗೆ ಸೂಚಿಸಿದ್ದಾರೆೆ!

    ಹೀಗೆ ‘ರೈತ ಆಂದೋಲನ’ ದೇಶಾದ್ಯಂತ ಹರಡಿ ‘ರೈತರೆಲ್ಲರೂ’ ಜಿಯೋ ಟವರ್​ಗಳನ್ನು ಹಾಳುಮಾಡಿದರೆ ಜಿಯೋ 5ಜಿ ಇನ್ನು ಕನಸು. ಅದು ಯಾರಿಗೆ ಲಾಭ? ಪ್ರಿಯ ಓದುಗರೇ, ನೀವೀಗ ಚುಕ್ಕೆಗಳನ್ನು ಜೋಡಿಸಿ. ಅಷ್ಟರಲ್ಲಿ ನಾನು ಕೃಷಿ ಕಾಯಿದೆಗಳ ವಿಷಯವಾಗಿ ರಾಜಕೀಯ ಪಕ್ಷಗಳು ಹಾಕುತ್ತಿರುವ ಲಾಗಗಳ ಬಗ್ಗೆ, ‘ಆಂದೋಲನ’ಕ್ಕೆ ಖಲಿಸ್ತಾನಿಗಳ ‘ಎಂಟ್ರಿ’ ಬಗ್ಗೆ ಮಾಹಿತಿಗಳೊಂದಿಗೆ ಬಂದು ‘ಜಗದಗಲ’ದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts