More

    ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ : ಸ್ಥಳಕ್ಕಾಗಮಿಸಿ ಸಮಾಧಾನ ಪಡಿಸಿದ ಸಚಿವ ಸುಧಾಕರ್

    ಚಿಕ್ಕಬಳ್ಳಾಪುರ: ತಾಲೂಕಿನ ಚೊಕ್ಕಹಳ್ಳಿ ಸಮೀಪದ ತಾತ್ಕಾಲಿಕ ಹೂವಿನ ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಮತ್ತು ನಗರದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರ ವಿಚಾರವಾಗಿ ರೈತರ ಆಕ್ರೋಶದ ಕಟ್ಟೆ ಒಡೆದಿದ್ದು, ಶನಿವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

    ಮಳೆಯಿಂದ ಜಲಾವೃತಗೊಂಡಿರುವ ತಾತ್ಕಾಲಿಕ ಮಾರುಕಟ್ಟೆ ಪ್ರದೇಶದಲ್ಲಿ ಖರೀದಿಸಲು ವರ್ತಕರು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ರೈತರು ಹೂವುಗಳನ್ನು ರಸ್ತೆಗೆ ಚೆಲ್ಲಿದರು. ಕರೊನಾ ಲಾಕ್‌ಡೌನ್, ಹವಾಮಾನ ವೈಫರೀತ್ಯದಿಂದ ನಷ್ಟ ಅನುಭವಿಸಿರುವ ಸಂದರ್ಭದಲ್ಲಿ ಮಾರುಕಟ್ಟೆಯ ಸಮಸ್ಯೆಯು ದೊಡ್ಡ ತಲೆ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

    ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಒಂದೆಡೆ ಜನಸಂದಣಿ ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತ ಹೂವಿನ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಚೊಕ್ಕಹಳ್ಳಿ ಕ್ರಾಸ್ ಸಮೀಪದ ಖಾಸಗಿ ಜಮೀನಿಗೆ 2020 ಮಾರ್ಚ್ 27ರಂದು ಸ್ಥಳಾಂತರಿಸಿತ್ತು. ಉತ್ಪನ್ನಗಳ ದಾಸ್ತಾನಿನ ತಾತ್ಕಾಲಿಕ ಸ್ಟಾಲ್ ಸ್ಥಾಪಿಸಿ, ವಹಿವಾಟು ನಡೆಸಲು ವರ್ತಕರಿಗೆ ಸೂಚಿಸಿತ್ತು. ಆದರೆ, ಇಲ್ಲಿ ಯಾವುದೇ ಮೂಲ ಸೌಕರ್ಯ ಒದಗಿಸಲಿಲ್ಲ. ಇದರ ನಡುವೆ ಕರೊನಾ ಬಹುತೇಕ ನಿಯಂತ್ರಣಕ್ಕೆ ಬಂದರೂ ಜಿಲ್ಲಾ ಕೇಂದ್ರದಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಿಲ್ಲ ಎಂದು ಕಿಡಿಕಾರಿದರು.

    ಕೆಸರು ಗದ್ದೆಯಾದ ಮಾರುಕಟ್ಟೆ: ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ತಾತ್ಕಾಲಿಕ ಮಾರುಕಟ್ಟೆ ಪ್ರದೇಶವು ಜಲಾವೃತಗೊಂಡು ಕೆಸರುಗದ್ದೆಯಂತಾಗಿದೆ. ಇಲ್ಲಿ ಹೂವುಗಳ ದಾಸ್ತಾನು, ವಹಿವಾಟು ಮತ್ತು ಓಡಾಡಲು ಸೇರಿ ನಾನಾ ಕೆಲಸಗಳಿಗೆ ತೊಂದರೆಯಾಗಿದೆ. ಹೂವಿನ ಉತ್ಪನ್ನಗಳು ಹಾಳಾಗುತ್ತಿರುವುದು ಹೂವಿನ ವರ್ತಕರು ಮತ್ತು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ಸೂಕ್ತ ಮಾರುಕಟ್ಟೆಯ ಭರವಸೆ: ರೈತರ ಹೋರಾಟದ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್, ರೈತರ ಸಮಸ್ಯೆಗಳನ್ನು ಆಲಿಸಿ ಹೂವಿನ ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆ ಒದಗಿಸುವುದಾಗಿ ಭರವಸೆ ನೀಡಿದರು. ಇತ್ತೀಚೆಗೆ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಹೂವಿನ ಮಾರುಕಟ್ಟೆಯಲ್ಲಿ ಉಂಟಾಗಿರುವ ಅವ್ಯವಸ್ಥೆಯ ನೆಪವೊಡ್ಡಿ ಕೆಲ ವರ್ತಕರು ರೈತರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಸರಿಯಲ್ಲ. ಹೂವು ಬೆಳೆಯುವಲ್ಲಿ ಜಿಲ್ಲೆ ರಾಜ್ಯದಲೇ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಸುಸಜ್ಜಿತವಾದ ಶಾಶ್ವತ ಹೂವಿನ ಮಾರುಕಟ್ಟೆಗೆ ಈಗಾಗಲೇ ಜಾಗ ಗುರುತಿಸಲಾಗಿದೆ. ತ್ವರಿತವಾಗಿ ರೈತರಿಗೆ ಹಾಗೂ ವರ್ತಕರಿಗೆ ಇಬ್ಬರಿಗೂ ಅನುಕೂಲವಾಗುವ ಮಾರುಕಟ್ಟೆ ನಿರ್ಮಿಸಲಾಗುವುದು. ಯಾವುದೇ ವರ್ತಕರು ರೈತರಿಗೆ, ಕೃಷಿ ಉತ್ಪನ್ನಗಳಿಗೆ ಹಾನಿಯಾಗುವ ಕೆಲಸ ಮಾಡಬಾರದು ಎಂದು ತಿಳಿಸಿದರು.

    ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ: ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರ, ತಾತ್ಕಾಲಿಕ ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷೃದ ವಿಚಾರವಾಗಿ ಈಗಾಗಲೇ ಕೆಲ ರೈತರು ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸಲು ಅಧಿಕಾರಿಗಳಿಗೆ ನೋಟಿಸ್ ಸಹ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ನಡುವೆ ಕೆಲ ರೈತರು ತಾತ್ಕಾಲಿಕ ಮಾರುಕಟ್ಟೆಯಲ್ಲಿ ಉಳಿಯಲು, ಮತ್ತೆ ಹಲವರು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಲು ಒತ್ತಾಯಿಸಿದ್ದಾರೆ. ಇದು ಸಹಜವಾಗಿ ಗೊಂದಲ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts