More

    ಕಣ್ಣಿನ ಸಮಸ್ಯೆಗೆ ಪರಿಹಾರೋಪಾಯಗಳು

    ನಮಗಿರುವ ಐದು ಜ್ಞಾನೇಂದ್ರಿಯಗಳಲ್ಲಿ ಕಣ್ಣು ಪ್ರಧಾನವಾದದ್ದು. ಜ್ಞಾನಗ್ರಹಣದ ವಿಷಯದಲ್ಲಿ ಸುಮಾರು 80 ಪ್ರತಿಶತ ಪಾಲು ಕಣ್ಣಿನದು ಎಂದು ತಜ್ಞರು ಹೇಳುತ್ತಾರೆ. ಇದರಿಂದಲೇ ಕಣ್ಣು ಎಷ್ಟು ಮಹತ್ವದ್ದು ಎಂಬುದು ಅರ್ಥವಾಗುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡರೆ ಕೊನೆಯ ತನಕ ಖುಷಿಯಿಂದ ಬದುಕಲು ಸಾಧ್ಯ.

    ಕಣ್ಣು ಹಲವಾರು ರೀತಿಯಲ್ಲಿ ನಿಧಾನವಾಗಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಕೈಮೀರುವ ಮೊದಲು ಎಚ್ಚೆತ್ತುಕೊಂಡರೆ ಮಾತ್ರ ಶಾಶ್ವತ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಕಂಪ್ಯೂಟರ್, ಮೊಬೈಲ್​ಗಳನ್ನು ಸಾಧ್ಯವದಷ್ಟು ಕಡಿಮೆ ಸಮಯ ಬಳಸಬೇಕು. ಬಳಕೆ ಅನಿವಾರ್ಯವಾದರೆ ಕನಿಷ್ಠ ಕೆಲವು ನಿಯಮಗಳನ್ನು ಪಾಲಿಸಬೇಕು. ಉದಾಹರಣೆಗೆ, ಸ್ಕ್ರೀನ್ ಬಳಕೆಯ ಮಧ್ಯದಲ್ಲಿ ಚಿಕ್ಕ ಚಿಕ್ಕ ಬಿಡುವುಗಳನ್ನು ನೀಡಿ ಕಣ್ಣುಗಳನ್ನು ಮಿಟುಕಿಸುವುದು, ಸಾಧ್ಯವಾದಷ್ಟೂ ಪರದೆಯ ಬೆಳಕನ್ನು (ಸ್ಕ್ರೀನ್ ಬ್ರೆ ೖಟ್​ನೆಸ್) ಕಡಿಮೆ ಇಟ್ಟುಕೊಳ್ಳುವುದು ಮತ್ತು 20-20 ನಿಯಮವನ್ನು ಪಾಲಿಸುವುದು. ಅಂದರೆ ಪ್ರತಿ 20 ನಿಮಿಷ ಕಂಪ್ಯೂಟರ್ ಅಥವಾ ಮೊಬೈಲ್ ನೋಡಿದ ನಂತರ 20 ಸೆಕೆಂಡ್​ಗಳ ಕಾಲ 20 ಅಡಿ ದೂರದಲ್ಲಿರುವ ಮರ-ಗಿಡದಂತಹ ಯಾವುದಾದರೂ ಒಂದು ನೈಸರ್ಗಿಕ ವಸ್ತುವನ್ನು ನೋಡುವುದು.

    ಪ್ರತಿದಿನ ಕಣ್ಣನ್ನು ತಣ್ಣೀರಿನಿಂದ ತೊಳೆಯಬೇಕು ಎಂದು ಆಯುರ್ವೆದ ಹೇಳುತ್ತದೆ. ಹೀಗೆ ಮಾಡುವುದರಿಂದ ದೃಷ್ಟಿದೋಷ ಬರುವುದಿಲ್ಲ; ಆಗಲೇ ಬಂದಿದ್ದರೂ ಕನ್ನಡಕದ ನಂಬರ್ ನಿಧಾನವಾಗಿ ಕಡಿಮೆಯಾಗುತ್ತ ಹೋಗುತ್ತದೆ. ಅತಿಯಾಗಿ ಬಿಸಿಲು ಮತ್ತು ಧೂಳಿನಲ್ಲಿ ಕೆಲಸ ಮಾಡುವವರು ತಂಪು ಕನ್ನಡಕಗಳನ್ನು ಧರಿಸುವುದು ಒಳ್ಳೆಯದು. ಇದರಿಂದ ಪಿತ್ತದೋಷದಿಂದ ಕಣ್ಣಿನ ಸಮಸ್ಯೆಯಾಗುವುದನ್ನು ತಪ್ಪಿಸಬಹುದು.

    ಸೇವಿಸುವ ಆಹಾರಕ್ಕೂ ಕಣ್ಣಿನ ಆರೋಗ್ಯಕ್ಕೂ ಸಂಬಂಧವಿದೆ. ದೇಸಿ ಹಸುವಿನ ಹಾಲು, ಬೆಣ್ಣೆ, ತುಪ್ಪ, ಜೇನುತುಪ್ಪ, ಒಣದ್ರಾಕ್ಷಿ, ಸೈಂಧವ ಲವಣ, ಪಾಲಿಶ್ ಮಾಡದ ಕೆಂಪಕ್ಕಿ, ಬಾರ್ಲಿ, ಕಹಿಪದಾರ್ಥಗಳು (ಉದಾ: ಹಾಗಲಕಾಯಿ), ಎಳೆ ಮೂಲಂಗಿ, ಕೊತ್ತಂಬರಿ ಸೊಪ್ಪು ಮುಂತಾದವೆಲ್ಲ ಕಣ್ಣಿನ ಆರೋಗ್ಯಕ್ಕೆ ಹಿತಕಾರಿಯಾದವು. ನೆಲ್ಲಿಕಾಯಿ, ದಾಳಿಂಬೆ ಮತ್ತು ಒಣದ್ರಾಕ್ಷಿಗಳನ್ನು ಬಿಟ್ಟು ಉಳಿದ ಹುಳಿಪದಾರ್ಥಗಳ ಅತಿಯಾದ ಸೇವನೆ, ಅತಿ ಉಪ್ಪು ಮತ್ತು ಖಾರದ ಪದಾರ್ಥಗಳು, ರಾಸಾಯನಿಕಭರಿತ ಸಂಸ್ಕರಿಸಿದ ಆಹಾರಗಳು, ತಂಬಾಕು, ಸಿಗರೇಟ್, ಮದ್ಯಸೇವನೆ ಕಣ್ಣಿನ ಆರೋಗ್ಯಕ್ಕೆ ಹಾನಿಕರ.

    ಮಧ್ಯರಾತ್ರಿಯವರೆಗೆ ಮೊಬೈಲ್, ಟಿವಿ ನೋಡುತ್ತ ಅಥವಾ ಕಂಪ್ಯೂಟರ್​ನಲ್ಲಿ ಕೆಲಸ ಮಾಡುತ್ತ ನಿದ್ದೆಗೆಡುವುದೂ ಮದ್ಯಪಾನದಿಂದ ಲಿವರ್​ಗೆ ಆದಷ್ಟೇ ಹಾನಿಯನ್ನು ಕಣ್ಣಿಗೆ ಮಾಡುತ್ತವೆ. ಹಗಲುನಿದ್ದೆ ಮತ್ತು ರಾತ್ರಿ ನಿದ್ದೆಗೆಡುವುದು ಎರಡೂ ಕಣ್ಣಿಗೆ ಹಾನಿಕರ. ತಲೆಗೆ ಬಿಸಿನೀರಿನ ಸ್ನಾನದಿಂದ ದೃಷ್ಟಿದೋಷ ಬರುತ್ತದೆಂದು ಆಯುರ್ವೆದ ಹೇಳುತ್ತದೆ. ಬದಲಿಗೆ ಉಗುರುಬೆಚ್ಚನೆಯ ನೀರಿನ ಸ್ನಾನ ಒಳ್ಳೆಯದು. ಮುಖಕ್ಕೆ ಸ್ಟೀಮ್ ತೆಗೆದುಕೊಳ್ಳುವುದು ತುಂಬ ಜನರ ರೂಢಿ. ಅದು ಒಳ್ಳೆಯದೇ ಆದರೂ ಅತಿಯಾದರೆ ಮತ್ತು ಪ್ರತಿ ಬಾರಿ ನೀಲಗಿರಿ ಎಣ್ಣೆಯಂತಹ ಕಟುದ್ರವ್ಯಗಳನ್ನು ಬಳಸಿದರೆ ಕಣ್ಣು ಹಾಳಾದೀತು. ಹಾಗಾಗಿ ಮುಖಕ್ಕೆ ಸ್ಟೀಮ್ ತೆಗೆದುಕೊಳ್ಳುವಾಗ ತಣ್ಣೀರಿನಿಂದ ಒದ್ದೆ ಮಾಡಿದ ಹತ್ತಿಯ ತುಂಡುಗಳನ್ನು ಕಣ್ಣುಗಳ ಮೇಲಿಟ್ಟು ಅದರ ಮೇಲೆ ಒಂದು ಬಟ್ಟೆ ಸುತ್ತಿಕೊಂಡರೆ ತೊಂದರೆಯಿಲ್ಲ.

    ಕಾಲಕಾಲಕ್ಕೆ ಪಂಚಕರ್ಮ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಂತ ಹಿತಕರ. ಮಧುಮೇಹದಂತಹ ಕಾರಣಗಳಿಂದ ಕಣ್ಣಿನ ನರ ದುರ್ಬಲಗೊಂಡಿದ್ದರೆ ಸರಿಪಡಿಲು ಅಕ್ಷಿತರ್ಪಣ ಎಂಬ ಚಿಕಿತ್ಸೆಯು ವರದಾನದಂತೆ ಕೆಲಸ ಮಾಡುತ್ತದೆ. ಆಯುರ್ವೆದ ವೈದ್ಯರ ಸಲಹೆಯ ಮೇಲೆ ಮೂಗಿನಲ್ಲಿ ಎರಡು ಹನಿ ತೈಲವನ್ನು ಹಾಕಿಕೊಳ್ಳುವ ಪ್ರತಿಮರ್ಶನಸ್ಯ ಎಂಬ ಕ್ರಿಯೆಯನ್ನು ಎಲ್ಲರೂ ಮಾಡಿಕೊಳ್ಳಬಹುದು. ಇದರಿಂದ ಕುತ್ತಿಗೆಯ ಮೇಲಿನ ಎಲ್ಲ ಅಂಗಗಳಿಗೂ ಶಕ್ತಿ ದೊರೆಯುತ್ತದೆ. ನಿಯತವಾಗಿ ಎಣ್ಣೆಯ ಮಸಾಜ್ ಅದರಲ್ಲೂ ಪಾದಕ್ಕೆ ಮಸಾಜ್ ಮಾಡಿಕೊಳ್ಳುವುದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ರಾತ್ರಿ ಮಲಗುವ ಮೊದಲು ಶುದ್ಧವಾದ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಪಾದಗಳಿಗೆ ಮಸಾಜ್ ಮಾಡಿಕೊಳ್ಳಬೇಕು. ಹಲವು ಯೋಗಾಸನಗಳು, ಪ್ರಾಣಾಯಾಮಗಳು, ಮುದ್ರೆಗಳು ಕಣ್ಣಿನ ಆರೋಗ್ಯ ರಕ್ಷಣೆಗೆ ಮತ್ತು ರೋಗ ನಿವಾರಣೆಗೆ ಅತ್ಯಂತ ಸಹಕಾರಿ. ದೇಹಕ್ಕೆ ವ್ಯಾಯಾಮ ಮಾಡಿದರೂ ಕಣ್ಣಿನ ವ್ಯಾಯಾಮದ ಬಗ್ಗೆ ನಾವ್ಯಾರೂ ಯೋಚಿಸುವುದಿಲ್ಲ. ಕಣ್ಣಿಗೆ ಸಂಬಂಧಿಸಿದ ವ್ಯಾಯಾಮಗಳು ನಿತ್ಯ ಮಾಡಬೇಕಾದವು.

    ನೆಲ್ಲಿಕಾಯಿ, ಅಣಲೆಕಾಯಿ ಮತ್ತು ತಾರೆಕಾಯಿಗಳ ಮಿಶ್ರಣವಾದ ತ್ರಿಫಲಾ ಚೂರ್ಣವು ಕಣ್ಣಿಗೆ ಟಾನಿಕ್ ಇದ್ದಂತೆ. ತ್ರಿಫಲಾ ಚೂರ್ಣ ಮತ್ತು ತ್ರಿಫಲಾ ಘೃತಗಳನ್ನು ವೈದ್ಯರ ಸಲಹೆ ಪಡೆದು ಸೇವಿಸುವುದು ಕಣ್ಣಿಗೆ ಅತ್ಯಂತ ಹಿತಕರ. ರಾತ್ರಿ ಒಂದು ಚಮಚ ತ್ರಿಫಲಾ ಚೂರ್ಣವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಮುಚ್ಚಿಡಬೇಕು. ಬೆಳಗ್ಗೆ ಚೂರ್ಣ ತಳದಲ್ಲಿ ಕುಳಿತು ಮೇಲೆ ತಿಳಿಯಾದ ನೀರು ಇರುತ್ತದೆ. ಹೀಗೆ ಪಡೆದ ತ್ರಿಫಲಾ ನೀರನ್ನು ಅಗಲದ ಕಪ್ ಅಥವಾ ಅಂಗಡಿಗಳಲ್ಲಿ ಸಿಗುವ

    ‘ಐ ವಾಶ್ ಕಪ್’ನಲ್ಲಿ ಹಾಕಿ ಕಣ್ಣುಗಳನ್ನು ನಿತ್ಯ ತೊಳೆಯುವುದರಿಂದ ಕಣ್ಣಿಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ತಪ್ಪಿಸಬಹುದು ಮತ್ತು ಗುಣಪಡಿಸಿಕೊಳ್ಳಬಹುದು. ಆದರೂ ಆಗಾಗ ವೈದ್ಯರ ಬಳಿ ಕಣ್ಣಿನ ತಪಾಸಣೆ ಮಾಡಿಕೊಳ್ಳುತ್ತಿರುವುದು ಒಳ್ಳೆಯದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts